ಮೌಢ್ಯ ವಿರೋಧಿ ಜಾಗೃತಿ ಮೂಡಿಸುವ ಶ್ರೀ ನಾರಾಯಣ ಗುರು ಕಲಾ ಜಾಥ 26ರಂದು ಬಿ.ಸಿ.ರೋಡಿಗೆ ಆಗಮಿಸಲಿದೆ.
ಮಾನವ ಬಂಧುತ್ವ ವೇದಿಕೆ- ಕರ್ನಾಟಕ ಸಂಘಟನೆಯು ನಡೆಸುತ್ತಿರುವ ವೈಚಾರಿಕ ಚಳವಳಿಯ ಅಂಗವಾಗಿ ಡಿಸೆಂಬರ್ 6ರಂದು ಬೆಳಗಾವಿಯ ಸ್ಮಶಾನದಲ್ಲಿ ಮೌಢ್ಯ ವಿರೋಧಿ ಜಾಗೃತಿ ಮೂಡಿಸುವ ಸಂಕಲ್ಪ ದಿನಾಚರಣೆಯನ್ನು ವಿಶೇಷವಾಗಿ ಸಂಘಟಿಸುತ್ತಿದೆ. ಈ ಕಾರ್ಯಕ್ರಮದಲ್ಲಿ 50 ಸಾವಿರಕ್ಕಿಂತಲೂ ಹೆಚ್ಚು ಜನರು ರಾಜ್ಯದ ವಿವಿದೆಡೆಗಳಿಂದ ಭಾಗವಹಿಸಲಿದ್ದಾರೆ. ಡಾ.ಪುರುಶೋತ್ತಮ ಬಿಳಿಮಲೆ, ನಿಜಗುಣಾನಂದ ಸ್ವಾಮೀಜಿ, ಕೆ.ಎಸ್.ಪುಟ್ಟಣ್ಣಯ್ಯ, ಕೆ.ನೀಲಾ ಮೊದಲಾದ ಅನೇಕ ವಿಚಾರವಂತರು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲಿದ್ದು, ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ 24 ಗಂಟೆಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಪೂರ್ಭಾವಿಯಾಗಿ ನವೆಂಬರ್ 24ರಿಂದ 5 ಕಲಾ ಜಾಥ ತಂಡಗಳು ರಾಜ್ಯದ ಎಲ್ಲ ಜಿಲ್ಲೆಗಳನ್ನು ಸಂಚರಿಸಿ ಜಾಗೃತಿ ಕಾರ್ಯಕ್ರಮಗಳನ್ನು ನೀಡುತ್ತವೆ. ಮೈಸೂರಿನಲ್ಲಿ ನವೆಂಬರ್ 24ರಂದು ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ, ಪ್ರೊ.ಕಾಳೇಗೌಡ ನಾಗವಾರ, ಪ್ರೊ.ಮಹೇಶ್ ಚಂದ್ರ ಗುರು, ವಿಲ್ಪ್ರೆಡ್ ಡಿಸೋಜ ಅವರಿಂದ ಉದ್ಘಾಟಿಸಲ್ಪಟ್ಟ ಶ್ರೀ ನಾರಾಯಣ ಗುರು ಜಾಥ ತಂಡ ನವೆಂಬರ್ 26ರಂದು ಸಂಜೆ 4 ಗಂಟೆಗೆ ಬಿ.ಸಿ.ರೋಡ್ ಪಟ್ಟಣಕ್ಕೆ ಆಗಮಿಸಲಿದೆ.
ಈ ಜಾಥ ತಂಡಕ್ಕೆ ಸ್ವಾಗತ ಕೋರುವ ಜೊತೆಗೆ ಬಿ.ಸಿ.ರೋಡ್ ನಲ್ಲಿ ನಡೆಯುವ ಜಾಗೃತಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕ ಬಂಧುಗಳು ಭಾಗವಹಿಸುವಂತೆ ಸಾಮಾಜಿಕ ಕಾರ್ಯಕರ್ತರು ಮತ್ತು ಮಾನವ ಬಂಧುತ್ವ ವೇದಿಕೆಯ ಬಂಟ್ವಾಳ ತಾಲೂಕು ಸಂಚಾಲನ ಸಮಿತಿಯ ಸದಸ್ಯರಾದ ಪ್ರಭಾಕರ ಅವರು ವಿನಂತಿಸಿದ್ದಾರೆ.