ಸುಮಾರು 800 ವರ್ಷಗಳಿಗೂ ಮಿಕ್ಕಿ ಹಿನ್ನೆಲೆ ಹೊಂದಿರುವ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ನ.22ರಿಂದ ಆರಂಭಗೊಡು ಶುಕ್ರವಾರ ಸಂಪನ್ನಗೊಂಡಿತು.
ನ. 23ರಂದು ತಂತ್ರಿ ಪ್ರಕಾಶ್ ಆಚಾರ್ಯ ಪೂಂಜ, ಕ್ಷೇತ್ರದ ಪ್ರಧಾನ ಅರ್ಚಕ ಸುಂದರ ಹೊಳ್ಳ ಇವರ ಪೌರೋಹಿತ್ಯದಲ್ಲಿ ದೇವರಿಗೆ ಪವಮಾನ ಅಭಿಷೇಕ, ನವಕ ಕಲಶಾಭಿಷೇಕ, ಗಣಹೋಮ, ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಭಜನೆ, ರಂಗಪೂಜೆ ಬಳಿಕ ಪಂಚಮಿ ಉತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಧಾರ್ಮಿಕ ಸಭೆ ನಡೆಯಿತು.
ನ. 24ರಂದು ಬೆಳಗ್ಗೆ ಉಷಾ ಪೂಜೆ, ಪಂಚಾಮೃತ, ಪವಮಾನ ಅಭಿಷೇಕ, ಸ್ಕಂದ ಯಾಗ, ಸಾಮೂಹಿಕ ಆಶ್ಲೇಷಾ ಬಲಿ ಬಳಿಕ ಮಧ್ಯಾಹ್ನ ಷಷ್ಠಿ ಮಹೋತ್ಸವ, ಬ್ಯಾಂಡ್ ವಾದ್ಯ, ಚೆಂಡೆ, ಕೊಂಬು ವಾದನ ಸಹಿತ ಇಲ್ಲಿನ ಭಜನಾ ಮಂಡಳಿ ಸದಸ್ಯರ ಭಜನೆಯೊಂದಿಗೆ ದೇವರ ಬಲಿ ಉತ್ಸವ ಮತ್ತು ಪಲ್ಲಕಿ ಉತ್ಸವ ನಡೆಯಿತು. ಮಧ್ಯಾಹ್ನ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು. ಸಂಜೆ ಭಜನೆ, ದುರ್ಗಾ ನಮಸ್ಕಾರ ಪೂಜೆ ಹಾಗೂ ರಾತ್ರಿ ಪರಿವಾರ ದೈವಗಳ ನೇಮೋತ್ಸವ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಪ್ರಕಾಶ ಕುಮಾರ್ ಜೈನ್, ಸದಸ್ಯರಾದ ಜಗೀಶ ಕೊಯಿಲ, ಸತೀಶ ಕುಮಾರ್ ಕೊಯಿಲ, ಬಾಲಕೃಷ್ಣ ಶೆಟ್ಟಿ ಬಗ್ಗಂಬೋಳಿ, ಚಂದ್ರಶೇಖರ ಆಚಾರ್ಯ, ಬೈದಗುತ್ತು, ದಾಮೋದರ ನಾಯ್ಕ್ ಬೈರಾಡಿ, ಯಶೋಧ ಶೇಖರ ಶೆಟ್ಟಿ ಕಂಬಳದಡ್ಡ, ಸುಲೋಚನಾ ಭೋಜರಾಜ ಕೊಡಂಗೆ, ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಸದಸ್ಯೆ ಶೋಭಾ ಎನ್.ಚಿಂಗಲಚ್ಚಿಲ್, ಪ್ರಮುಖರಾದ ಕೆ.ಅನಂತ ರಾವ್ ಕೊಯಿಲಗುತ್ತು, ಮೋಹನ್ ಕೆ.ಶ್ರೀಯಾನ್ ರಾಯಿ, ಕೆ.ರವೀಂದ್ರ ಪೂಜಾರಿ, ಆನಂದ ಪೂಜಾರಿ ಅಂತರ ಮತ್ತಿತರರು ಉಪಸ್ಥಿತರಿದ್ದರು.