www.bantwalnews.com
ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಲಾರಿ ಹಾಗೂ ಬೋಟುಗಳಿಗೆ ಜಿಪಿಎಸ್ ಮೆಷಿನ್ ಅಳವಡಿಕೆ ಕಡ್ಡಾಯ, ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳವನ್ನು ಸಂಪರ್ಕಿಸುವ 12 ರಸ್ತೆ ಹಾಗೂ ಜಿಲ್ಲೆಯಿಂದ ಹೊರಜಿಲ್ಲೆಗಳನ್ನು ಸಂಪರ್ಕಿಸುವ 8 ರಸ್ತೆಗಳಲ್ಲಿ ತನಿಖಾ ಠಾಣೆ ತೆರೆಯಲಾಗುವುದು.
ಅಕ್ರಮವಾಗಿ ಸಾಗಿಸಿ ವಶಪಡಿಸಿಕೊಂಡ ಮರಳು ಹಾಗೂ ವಾಹನಗಳನ್ನು ರಕ್ಷಿಸಿಡಲು ಪ್ರತೀ ತಾಲೂಕಿನಲ್ಲಿ ಯಾರ್ಡ್ ನಿರ್ಮಿಸಿ, ಬಂದೋಬಸ್ತ್ ಒದಗಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳವನ್ನು ಸಂಪರ್ಕಿಸುವ 12 ರಸ್ತೆ ಹಾಗೂ ಜಿಲ್ಲೆಯಿಂದ ಹೊರಜಿಲ್ಲೆಗಳನ್ನು ಸಂಪರ್ಕಿಸುವ 8 ರಸ್ತೆಗಳಲ್ಲಿ ತನಿಖಾ ಠಾಣೆ ತೆರೆಯಲು ಕ್ರಮ ಕೈಗೊಳ್ಳಲಾಗುವುದು
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಡಾ. ಸಸಿಕುಮಾರ್ ಸೆಂಥಿಲ್ ತಿಳಿಸಿದ್ದು ಹೀಗೆ.
ಮರಳುಗಾರಿಕೆಯಲ್ಲಿ ಬಳಸಲಾಗುವ ಎಲ್ಲಾ ವಿಧದ ಬೋಟುಗಳಿಗೆ ಆಯಾ ನದಿಗೆ ಸಂಬಂಧಪಟ್ಟಂತೆ ನಿರ್ದಿಷ್ಟ ಬಣ್ಣ ಅಳವಡಿಸಬೇಕಾಗುತ್ತದೆ. ಅದೇ ರೀತಿ ಲಾರಿಗಳಿಗೂ “ಮರಳು ಸಾಗಾಟದ ವಾಹನ” ಎಂದು ನಮೂದಿಸಬೇಕಾಗುತ್ತದೆ. ಈಗಾಗಲೇ ಜಿಪಿಎಸ್ ಪೂರೈಕೆಗೆ ಟೆಂಡರ್ ಕರೆಯಲಾಗಿದೆ. ಜಿಪಿಎಸ್ ಪೂರೈಸುವ ಸಂಸ್ಥೆಗೆ ಕಾರ್ಯಾದೇಶ ನೀಡಿದ 15 ದಿನಗಳೊಳಗೆ ಜಿಪಿಎಸ್ ಅಳವಿಕೆಯನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ಬೋಟುಗಳಿಗೆ ಆಯಾ ಸ್ಥಳಗಳಿಗೆ ತೆರಳಿ ಜಿಪಿಎಸ್ ಅಳವಡಿಕೆಗೆ ಏರ್ಪಾಡು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮರಳು ಸಾಗಾಟದ ಪರ್ಮಿಟ್‍ನಲ್ಲಿಯೇ ವಾಹನದ ಸಂಖ್ಯೆ ನಮೂದಿಸಲಾಗುವುದು. ಮರಳುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ವಾಹನಗಳ ಮಾಹಿತಿಯನ್ನು ಕಡ್ಡಾಯವಾಗಿ ಗಣಿ ಇಲಾಖೆಗೆ ನೀಡಬೇಕಿದೆ ಎಂದು ಅವರು ತಿಳಿಸಿದರು.
ಸಿಆರ್‍ಝಡ್ ವ್ಯಾಪ್ತಿಯಲ್ಲಿ ಈಗಾಗಲೇ 41 ಮಂದಿಗೆ ಪರ್ಮಿಟ್ ನೀಡಲಾಗಿದೆ. ಇವರಿಗೆ ಮರಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ಪರ್ಮಿಟ್ ರದ್ದುಪಡಿಸಲಾಗುವುದು. ಅದಲ್ಲದೇ, ನಿಯಮಗಳನ್ನು ಪೂರೈಸಿರುವ ಇನ್ನೂ ಕೆಲವು ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು. ನಾನ್ ಸಿಆರ್‍ಝಡ್ ವ್ಯಾಪ್ತಿಯಲ್ಲಿ ನೇತ್ರಾವತಿ ನದಿಯಲ್ಲಿ 3, ಫಲ್ಗುಣಿ ನದಿಯಲ್ಲಿ 2, ಗುಂಡ್ಯ ಹೊಳೆಯಲ್ಲಿ 1 ಹಾಗೂ ಕುಮಾರಧಾರ ನದಿಯಲ್ಲಿ 7 ಬ್ಲಾಕ್‍ಗಳನ್ನು ಮರಳುಗಾರಿಕೆಗೆ ಗುರುತಿಸಲಾಗಿದೆ. ಅಂದಾಜು 81 ಎಕರೆ ವ್ಯಾಪ್ತಿಯಲ್ಲಿ ಇದು ಹರಡಿಕೊಂಡಿದೆ. ಇದಕ್ಕೆ ಕೂಡಲೇ ಟೆಂಡರ್ ಕರೆದು ಹಂಚಿಕೆ ಮಾಡಲು ಅವರು ಗಣಿ ಇಲಾಖೆಗೆ ಸೂಚಿಸಿದರು.
ಎರಡು ಪಟ್ಟು ಬ್ಯಾಂಕ್ ಗ್ಯಾರೆಂಟಿ:
ರಾಜ್ಯ ಸರಕಾರ ತಿದ್ದುಪಡಿ ಮಾಡಿರುವ ಖನಿಜ ನಿಯಮಾವಳಿಯಂತೆ ಅಕ್ರಮವಾಗಿ ಮರಳು ಸಾಗಿಸುವುದು ಕಂಡುಬಂದಲ್ಲಿ ಅಂತಹ ಲಾರಿಯನ್ನು ವಶಪಡಿಸಿ, ಪ್ರಕರಣ ದಾಖಲಿಸಲಾಗುವುದು. ಇಂತಹ ವಾಹನಗಳನ್ನು ಬಿಡುಗಡೆ ಮಾಡಲು ನ್ಯಾಯಾಲಯದಲ್ಲಿ ವಾಹನದ ಮೌಲ್ಯದ ಎರಡು ಪಟ್ಟಿನಷ್ಟು ಬ್ಯಾಂಕ್ ಗ್ಯಾರಂಟಿ ನೀಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಸಭೆಯಲ್ಲಿ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಕುಮಾರ್, ಡಿಸಿಪಿ ಉಮಾ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಸುಮಿತ್ರಾ ಮತ್ತಿತರರು ಉಪಸ್ಥಿತರಿದ್ದರು.