ತುಳುವಿನಲ್ಲಿ ಸತ್ಯ, ಆತ್ಮವಿಶ್ವಾಸ ಅಡಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಬುಧವಾರ ಬಂಟ್ವಾಳದ ಸ್ಪರ್ಶ ಕಲಾಮಂದಿರದಲ್ಲಿ ಡಿಸೆಂಬರ್ 10ರಂದು ನಡೆಯುವ ತಾಲೂಕು ತುಳು ಸಾಹಿತ್ಯ ಸಮ್ಮೇಳನದ ಕಾರ್ಯಾಲಯ ಉದ್ಘಾಟನೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ತುಳುವಿನ ಕುರಿತು ಅರಿವು ಮೂಡಿಸುವ ಕಾರ್ಯವಾಗಬೇಕು ಎಂದ ಸ್ವಾಮೀಜಿ, ಹಿಂಜರಿಕೆ, ದಾಕ್ಷಿಣ್ಯದಿಂದಾಗಿ ತುಳು ರಾಜ್ಯ ಉದಯ ಆಗಿರಲಿಲ್ಲ. ತುಳುವರ ಸರಳಜೀವಿಗಳು. ಸಂಸ್ಕೃತಿಯ ಮೇಲೆ ಅಭಿಮಾನ ಇಟ್ಟುಕೊಂಡವರು. ತುಳು ಸಂಸ್ಕೃತಿ ಉಳಿಯಬೇಕಾದರೆ ನಮ್ಮ ನಡೆ ನುಡಿಗಳು ಸರಿಯಾಗಬೇಕು, ತುಳು ಸಾಹಿತ್ಯ ಸಮ್ಮೇಳನ ಅದಕ್ಕೆ ನಾಂದಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಸಮಾರಂಭದ ಅಧ್ಯಕ್ಷತೆಯನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ವಹಿಸಿದ್ದರು. ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಸಂಚಾಲಕ ಎ.ಗೋಪಾಲ ಅಂಚನ್ ಸ್ವಾಗತಿಸಿದರು. ಸಮ್ಮೇಳನ ಉಪಸಮಿತಿ ಸಂಚಾಲಕ ಡಾ. ವೈ.ಎನ್. ಶೆಟ್ಟಿ ಸಮ್ಮೇಳನ ಕುರಿತು ಮಾತನಾಡಿದರು. ಈ ಸಂದರ್ಭ ಪ್ರಮುಖರಾದ ಡಿ.ಎಂ.ಕುಲಾಲ್, ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಸುಧಾ ನಾಗೇಶ್, ತಾರಾನಾಥ ಗಟ್ಟಿ ಕಾಪಿಕಾಡು, ವಿದ್ಯಾಶ್ರೀ ಎನ್, ಬೆನೆಟ್ ಅಮ್ಮಣ್ಣ, ವಿಜಯ ಶೆಟ್ಟಿ ಸಾಲೆತ್ತೂರು, ತುಳುಕೂಟದ ಸುಭಾಶ್ಚಂದ್ರ ಜೈನ್, ಕೈಯೂರು ನಾರಾಯಣ ಭಟ್, ಮೋಹನ ರಾವ್, ಸದಾಶಿವ ಬಂಗೇರ ಮೊದಲಾದವರು ಉಪಸ್ಥಿತರಿದ್ದರು. ಕಲಾವಿದ ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.