ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಭಾನುವಾರ ಸಂಜೆ ನಡೆದ ಕೊಂಬೆಟ್ಟು ಸಾಧನಾ ಸಂಗೀತ ವಿದ್ಯಾಲಯದ ಸ್ವರಮಾಲ ತಿಂಗಳ ಸರಣಿ ಕಾರ್ಯಕ್ರಮ ನಡೆಯಿತು.
ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ನರೇಂದ್ರ ರೈ ದೇರ್ಲ ಮುಖ್ಯ ಅತಿಥಿಯಾಗಿ ಮಾತನಾಡಿ, ಮೇಲ್ನೊಟಕ್ಕೆ ಸಂಗೀತ ಕೊರಳಿನಿಂದ ಹೊರಡುತ್ತದೆ. ಆದರೆ ಇದು ಕರಳಿನಿಂದ ಹೊರಬಂದಾಗ ಸಂಗೀತಕ್ಕೆ ಹೆಚ್ಚು ಅರ್ಥ ಬರುತ್ತದೆ. ಇಂತಹ ಧ್ಯಾನದಿಂದ ಸೃಷ್ಟಿಯಾಗುವ ಕವನವನ್ನು ಧ್ಯಾನದಿಂದಲೇ ಓದಬೇಕು. ಕಾವ್ಯದ ನಿಜವಾದ ಅದ್ಭುತ ಶಕ್ತಿ ಕರುಳಿನಿಂದ ಹೊರಬಂದ ಸಂಗೀತದಲ್ಲಿ ಇರುತ್ತದೆ. ಸಂಸ್ಕಾರ, ಸಂಸ್ಕೃತಿ, ಜಾತಿ, ಪಂಗಡದ ಬೇಧವಿಲ್ಲದೆ ಎಲ್ಲವನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಂಗೀತಕ್ಕೆ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಧನಾ ಸಂಗೀತ ವಿದ್ಯಾಲಯದ ಗುರು ವಿದುಷಿ ಸುಚಿತ್ರಾ ಹೊಳ್ಳ ಮಾತನಾಡಿ, ಉತ್ತಮ ಕಂಠ, ಸಾಹಿತ್ಯದ ಅರ್ಥ, ವಾಗ್ಗೆಯಕಾರರ ತಿಳುವಳಿಕೆ, ಅವರ ಕ್ಷೇತ್ರದ ಮತ್ತು ಕೃತಿಯ ಒಳಾರ್ಥ ತಿಳಿದರೆ ಸಂಗೀತವೂ ಉತ್ತಮ ರೀತಿಯಲ್ಲಿ ಮೂಡಿ ಬರುತ್ತದೆ ಎಂದರು.
ಸಾಧನಾ ಸಂಗೀತ ಶಾಲೆಯ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಈಶ್ವರ್ ಬೇಡೆಕರ್ ಉಪಸ್ಥಿತರಿದ್ದರು. ವೈಷ್ಣವಿ ಆಚಾರ್ಯ ಅತಿಥಿಗಳನ್ನು ಪರಿಚಯಿಸಿದರು. ವೈಷ್ಣವಿ ರೈ ಪ್ರಾರ್ಥಿಸಿದರು. ವಿಶಾಕ್ ಸ್ವಾಗತಿಸಿ, ಪ್ರಥಮ ಉಪಾಧ್ಯಾಯ ವಂದಿಸಿದರು. ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಡೆದ ಕಾರ್ಯಕ್ರಮದಲ್ಲಿ ವೈಷ್ಣವಿ ಮಾಂಬಾಡಿ, ಪಲ್ಲವಿ ಭಟ್, ಶೈಲಾ ಸದಾನಂದ ಭಟ್, ಸುಮನಾ ಪ್ರಶಾಂತ್ ಕಾರ್ಯಕ್ರಮ ನಡೆಸಿಕೊಟ್ಟರು. ಪಿಟೀಲಿನಲ್ಲಿ ವಿದ್ವಾನ್ ಜಗದೀಶ್ ಕೊರೆಕ್ಕಾಣ, ಮೃದಂಗದಲ್ಲಿ ಮುರಳಿಕೃಷ್ಣ ಕುಕ್ಕಿಲ ಸಹಕರಿಸಿದರು.