ನವೆಂಬರ್ 25ರಂದು ಹರಿದ್ವಾರದಲ್ಲಿ ಬೆಳಗ್ಗೆ 11ಕ್ಕೆ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಾಧನಾ ಕುಟೀರ ಉದ್ಘಾಟನೆ ನಡೆಯಲಿದೆ.
ಈ ವಿಚಾರವನ್ನು ಕ್ಷೇತ್ರದ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಈ ಸಂದರ್ಭ ಹರಿಹರ ಕೈಲಾಸ ಜ್ಞಾನಪೀಠದ ಸ್ವಾಮೀ ಶ್ರೀ ಪ್ರೇಮಾನಂದಕೀ ಮಹಾರಾಜ್, ಹರಿನಾಥ ಹರ್‌ನಾಥ ಮಂದಿರದ ಜುನಾ ಆಖಾಡ ಪರಮಾಧ್ಯಕ್ಷ ಶ್ರೀ ದೇವಾನಂದ ಸರಸ್ವತೀ ಮಹಾರಾಜ್, ಹರಿದ್ವಾರದ ಬಾಬಾ ಹರಿಹರಧಾಮದ ಸ್ವಾಮೀ ಶ್ರೀ ಸೋಮೇಶ್ವರನಂದಜೀ ಮಹಾರಾಜ್ ಉಪಸ್ಥಿತರಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಸಂಸದ ನಳಿನ್ ಕುಮಾರ್ ಕಟೀಲ್, ಉತ್ತಾಖಂಡ್ ಸರಕಾರದ ಸಚಿವ ಮದನ್ ಕೌಶಿಕ್, ಲೋಕಸಭಾ ಸದಸ್ಯ ಡಾ.ರಮೇಶ್, ಹರಿದ್ವಾರ ಮೇಯರ್ ಮನೋಜ್ ಗರ್ಗ್ , ಭಟ್ಕಳ ಶಾಸಕ ಮಂಕಾಳ ವೈದ್ಯ, ದಿವ್ಯಪ್ರೇಮ ಸೇವಾ ಮಿಷನ್ ಅಧ್ಯಕ್ಷ ಆಶಿಷ್ ಗೌತಮ್ ಉಪಸ್ಥಿತರಿರುವರು ಎಂದು ಹೇಳಿದರು.
ಬಿಲ್ಲಾಡಿ, ಭಟ್ಕಳ, ಕೆರಿಕ್ಕಲ್, ಹೊನ್ನಾವರ, ಹರಿದ್ವಾರಗಳ ಶಾಖೆಗಳನ್ನು ಹೊಂದಿರುವ ಕನ್ಯಾಡಿ ಜಗದ್ಗುರು ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಅವರ ಗುರು ಶ್ರೀ ಆತ್ಮಾನಂದ ಸರಸ್ವತಿ ಮಾರ್ಗದರ್ಶನದಂತೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಉಚಿತ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಭಾರತೀಯ ಪರಂಪರೆಗಳನ್ನು ಎಳವೆಯಲ್ಲೇ ಒದಗಿಸುವ ಮಹತ್ವದ ಕಾರ್ಯಕ್ಕೆ ಕೈಹಾಕಲಾಗಿದೆ ಎಂದರು.
ಜನವರಿ ಕೊನೆಯಲ್ಲಿ ಸೀತಾರಾಮ ಕಲ್ಯಾಣೋತ್ಸವ:
ಬಿ.ಸಿ.ರೋಡಿನಲ್ಲಿ ಜನವರಿ ಕೊನೆಯ ಭಾಗದಲ್ಲಿ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ತಾಲೂಕು ಸೇವಾ ಸಮಿತಿ ವತಿಯಿಂದ ನಡೆಸಲಾಗುವುದು ಎಂದು ಇದೇ ಸಂದರ್ಭ ತಾಲೂಕು ಸೇವಾ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಹೇಳಿದರು.ಈ ಸಂದರ್ಭ ಉಪಾಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಗೋಪಾಲ ಸುವರ್ಣ, ಬಿ.ವಿಶ್ವನಾಥ ಪೂಜಾರಿ, ಸಂತೋಷ್ ಕುಮಾರ್ ಉಪಸ್ಥಿತರಿದ್ದರು.