ಆರಾಧನೆ

ಭೂಮಿಯ ಆರಾಧನೆ, ಸಂಪ್ರದಾಯದ ಹಿರಿಮೆ – ಕಂಬಳಕೋರಿ

www.bantwalnews.com

Capture: Chiranth Jain

ಜಾಹೀರಾತು

ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗುತ್ತಿನ ಮನೆಯಲ್ಲಿ ತುಳುನಾಡಿನ ಸಂಪ್ರದಾಯಬದ್ಧ ಆಚರಣೆ ಕಂಬಳ ಕೋರಿ ಆಚರಣೆ ನಡೆದುಕೊಂಡು ಬರುತ್ತಿದೆ. ಭಾನುವಾರ ಮಧ್ಯಾಹ್ನ ಗುತ್ತಿನ ಮನೆಯವರ ಸೇರುವಿಕೆಯೊಂದಿಗೆ ಗದ್ದೆಪೂಜೆ (ಕಂಬಳಕೋರಿ) ನಡೆಯಿತು.

ದೈವಾರಾಧನೆ ಮೂಲಕ ಕೃಷಿ ಕಾರ್ಯದಲ್ಲಿ ಗ್ರಾಮಸ್ಥರೆಲ್ಲರೂ ಒಂದಾಗಿ ಭಾಗವಹಿಸುವುದು ಕಾಡಬೆಟ್ಟು ಗ್ರಾಮಸ್ಥರಿಗೆ ಸಂಭ್ರಮದ ಕ್ಷಣಗಳಾಗಿದ್ದವು.

ಭೂದೇವಿಯ ಆರಾಧನೆ ಕೃಷಿ ಸಂಸ್ಕೃತಿಯ ಪ್ರಮುಖ ಘಟ್ಟ. ಕಂಬಳ ಕೋರಿ ಎಂದರೆ ಗದ್ದೆ ಪೂಜೆ. ಇದು ಭೂಮಿಯ ಆರಾಧನೆ. ನಿಗದಿಪಡಿಸಿದ ದಿನ ರೈತರೆಲ್ಲ ಗ್ರಾಮದ ಪ್ರಮುಖರ ಮನೆಯಲ್ಲಿ ಸೇರಿ, ಜಾತಿ, ಮತ, ಪಂಗಡ ಮರೆತು ಕಂಬಳಕೋರಿ ಆಚರಿಸುತ್ತಾರೆ. ದೈವಗಳ ಆರಾಧನೆ ಇದರಲ್ಲಿ ಪ್ರಧಾನ ಅಂಶ.

ಮಳೆಗಾಲ ಕಳೆಯುತ್ತಿದ್ದಂತೆ ಕಂಬಳ ಕೋರಿ ನಡೆಸಲು ಗುತ್ತಿನ ಮನೆಯ ಯಜಮಾನರು ದಿನ ನಿಗದಿಪಡಿಸುತ್ತಾರೆ. ಕಂಬಳ ಕೋರಿ ಆರಂಭವಾಗುವ ಮೂರು ದಿನಗಳ ಮೊದಲು ಕೊರಗಜ್ಜ ದೈವ ಗುತ್ತಿನ ಮನೆಯಿಂದ ಹೊರಟು, ಗ್ರಾಮದ ಪ್ರತೀ ಮನೆಗೂ ತೆರಳಿ ಕಂಬುಲದ ಕೋರಿಗ್ ದಿನ ಆತ್ಂಡ್, ಎಂಕ್ ಗ್ರಾಮ ದೈವ ಪಂಜುರ್ಲಿನ ಅಪ್ಪಣೆ ಆತ್ಂಡ್. ಎರುಮಾಣಿ ಬರೊಡುಗೆ (ಕಂಬಳ ಕೋರಿಗೆ ದಿನ ನಿಗದಿಯಾಗಿದೆ. ನನಗೆ ಗ್ರಾಮ ದೈವ ಪಂಜುರ್ಲಿಯ ಅಪ್ಪಣೆ  ಆಗಿದೆ. ಜೋಡಿ ಕೋಣ ಹಾಗೂ ಉಳುಮೆಗಾರ ಬರಬೇಕಂತೆ) ಎಂದು ಆಮಂತ್ರಣವನ್ನು ನೀಡುತ್ತದೆ. ಮನೆ ಬಾಗಿಲಿಗೆ ಸುದ್ದಿ ಹೊತ್ತು ತಂದ ಕೊರಗಜ್ಜನಿಗೆ ಮನೆ ಮಂದಿ ಭತ್ತ , ಅಕ್ಕಿ , ವೀಳ್ಯದೆಲೆ ನೀಡಿ ಗೌರವಿಸಿ ಕಳುಹಿಸುತ್ತಾರೆ. ಪೂಜೆಗೆ ಎರಡು ದಿನ ಮೊದಲು ಡೆಕ್ಕೋರಿ ಎಂಬ ಪೂರ್ವಸಿದ್ಧತಾ ಕಾರ್ಯಕ್ರಮ ಇರುತ್ತದೆ. ಕೊಂಬು, ವಾಲಗ, ನಲಿಕೆ(ಜನಾಂಗದ ಹೆಸರು) ಗುತ್ತಿನ ಮನೆಗೆ ಬಂದು ಮನೆಯ ಯಜಮಾನನೊಂದಿಗೆ ಕಂಬಳ ಗದ್ದೆಗೆ ತೆರಳಿ, ಅಲ್ಲಿ ವಾದ್ಯ ನುಡಿಸಿ ಶುಭ ಹಾರೈಸುತ್ತಾರೆ. ಕಂಬಳ ಕೋರಿಯ ದಿನ ಮುಂಜಾನೆ ಗುತ್ತಿನ ಮನೆಯಿಂದ ಹೊರಟ ಕೊರಗಜ್ಜ ದೈವ ಗ್ರಾಮದ ವಿವಿಧ ಮನೆಗಳಿಂದ ಬಂದ ಕೋಣಗಳೊಂದಿಗೆ ಕಂಬಳ ಗದ್ದೆಗೆ ಬಂದು ಕೋಣಗಳನ್ನು ಗದ್ದೆಗೆ ಇಳಿಯಲು ಅಪ್ಪಣೆ ನೀಡುತ್ತದೆ. ಎಲ್ಲ ಕೋಣಗಳನ್ನೂ ಒಮ್ಮೆಲೆ ಗದ್ದೆಗೆ ಇಳಿಸಿ ಮಧ್ಯಾಹ್ನದ ತನಕ ಗದ್ದೆ ಉಳುತ್ತಾರೆ. ಇತ್ತ ಗುತ್ತಿನ ಮನೆಯಲ್ಲಿ ಗ್ರಾಮ ದೈವಗಳಿಗೆ ಪರ್ವ ಹಾಕಿಸಿ, ಪಂಜುರ್ಲಿ ದೈವದ ಹಗಲು ನೇಮೋತ್ಸವ ನಡೆಯುತ್ತದೆ. ಒಂದು ಗಂಟೆಯ ಕಾಲ ನೇಮ ನಡೆದು, ದೈವ ಅಂಗಿ ಏರಿಸುವ(ತೊಡುವ) ಸಂದರ್ಭ ದೈವದ ಮುಕ್ಕಾಲ್ದಿ(ಪಾತ್ರಿ), ನಾಗಬ್ರಹ್ಮ ದೈವ(ವೇಷಧಾರಿ ಪಾತ್ರಿ), ಗುತ್ತಿನ ಯಜಮಾನ, ತಂತ್ರಿ ಬಳಗ ಹಾಗೂ ಗ್ರಾಮಸ್ಥರೊಂದಿಗೆ ಕೊಂಬು ವಾಲಗದ ಹಿಮ್ಮೇಳದೊಂದಿಗೆ ಕಂಬಳ ಗದ್ದೆಗೆ ಬರುತ್ತಾರೆ.

ಅದಾಗಲೇ ಗದ್ದೆಯ ಬದಿಯಲ್ಲಿ ನಾಗಬ್ರಹ್ಮ ದೈವ ಅಣಿ ಏರಿಸಿ ಸಿದ್ಧಗೊಂಡಿರುತ್ತದೆ. ಅಲ್ಲಿ ಕಲ್ಲಿನ ಚಕ್ರವುಳ್ಳ ಸಾಗುವಾನಿ ಮರದ ಪಟ್ಟಿಗಳುಳ್ಳ ತೇರಿನಾಕಾರದ ಪೂಕರೆ ಬಂಡಿಯನ್ನು ಕೇಪುಳ ಹೂವುಗಳಿಂದ ಅಲಂಕರಿಸಿ ಸಿದ್ಧಗೊಳಿಸಲಾಗಿರುತ್ತದೆ. ಈ ಪೂಕರೆ ಬಂಡಿಯನ್ನು ಎಳೆಯಲು ಪಲ್ಲೆ ಎಂಬ ಬೀಳಲನ್ನೇ ಬಳಸಲಾಗುತ್ತದೆ. ಬಳಿಕ ಉಳುಮೆ ಮಾಡುತ್ತಿದ್ದ ಕೋಣಗಳನ್ನು ಮೇಲೆ ಬರುವಂತೆ ಹಾಗೂ ಪೂಕರೆ ಬಂಡಿಯನ್ನು ಎಳೆಯುವಂತೆ ನಾಗಬ್ರಹ್ಮ ದೈವ ಅಪ್ಪಣೆ ನೀಡುತ್ತದೆ. ಗ್ರಾಮಸ್ಥರೆಲ್ಲ ಸೇರಿ ಸಂಭ್ರಮದಿಂದ ಪೂಕರೆ ಬಂಡಿಯನ್ನು ಎಳೆದುಕೊಂಡು ಗದ್ದೆಯ ಮಧ್ಯ ಭಾಗಕ್ಕೆ ತಂದು ನಿಲ್ಲಿಸುತ್ತಾರೆ. ವಿಶಾಲ ಗದ್ದೆಗೆ ನಾಗಬ್ರಹ್ಮ ದೈವ ಎಲ್ಲರ ಜೊತೆ ಸುತ್ತು ಬಂದು ಉತ್ತಮ ಫಸಲು ಬರುವಂತೆ ಹರಸುತ್ತದೆ. ದೈವದ ಜೊತೆ ಓರ್ವ ವೇಷಧಾರಿ ಇದ್ದು ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ಸೂಚನೆ ನೀಡುತ್ತದೆ. ಫಸಲಿಗೆ ಕೀಟ ಬಾಧೆ ಬಾರದಂತೆ ತಡೆಯಲು ಉರವೆ ಎಂಬ ತೆಂಗಿನ ಗರಿಯಿಂದ ತಯಾರಿಸಿದ ಹಾವಿನಾಕೃತಿಯ ರಕ್ಷಾದಾರವನ್ನು ಗದ್ದೆ ಬದಿಯ ತೆಂಗಿನ ಮರಕ್ಕೆ ಕಟ್ಟಲಾಗುತ್ತದೆ. ನಾಗಬ್ರಹ್ಮ ದೈವದ ವಾಹನವಾಗಿ ಕುದುರೆಯನ್ನು ತೆಂಗಿನ ಹಸಿ ಸೋಗೆಯಿಂದ ಸಾಂಕೇತಿಕವಾಗಿ ನಿರ್ಮಿಸುತ್ತಾರೆ. ಅದನ್ನು ನಾಗಬನಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿಂದ ಗುತ್ತಿನ ಮನೆಗೆ ಹಿಂದಿರುಗಿ ನಾಗಬ್ರಹ್ಮ ದೈವಕ್ಕೆ ನೇಮ ನಡೆಯುತ್ತದೆ. ಜೊತೆಗೆ ಪಂಜುರ್ಲಿ ದೈವದ ನೇಮ ಮುಂದುವರಿದು ಗ್ರಾಮಸ್ಥರ ಸಮಸ್ಯೆಗಳಿಗೆ ನ್ಯಾಯ ತೀರ್ಮಾನ ನೀಡಿ ಅಭಯ ಪ್ರದಾನ ನೀಡಿತ್ತದೆ. ಬಳಿಕ ಎಲ್ಲರೂ ಹಬ್ಬದೂಟ ಮಾಡುತ್ತಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.