ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ಹಾಗೂ ದೇಶಕ್ಕೋಸ್ಕರ ಬದುಕುವ ಶಿಕ್ಷಣವನ್ನು ನೀಡಲಾಗುತ್ತಿದೆ. ಇವೆಲ್ಲಕ್ಕೂ ಪ್ರೇರಣೆ ಶ್ರೀರಾಮಚಂದ್ರ. ಮೋಸಕ್ಕೆ, ವಂಚನೆಗೆ ಕೈ ನೀಡಬೇಡಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕರೆ ನೀಡಿದರು.
ವಿದ್ಯಾಕೇಂದ್ರದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮದು ಸಮಾಜಆಧಾರಿತ ಸಂಸ್ಥೆ. ವ್ಯಕ್ತಿಯಲ್ಲಿ ಸಾಮಾಜಿಕ ಭದ್ರತೆ ಹಾಗೂ ರಾಷ್ಟ್ರೀಯತೆ ವಿಚಾರಗಳನ್ನು ಪೋಷಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಮೂಲ ಚಿಂತನೆಯನ್ನು ಬೆಳೆಸಿಕೊಂಡು ಹೋಗಿದ್ದೇವೆ. ಇಲ್ಲಿರುವ ಮಕ್ಕಳಲ್ಲಿ ಶೌರ್ಯದ ಚಿಂತನೆ ಇದೆ ಎಂದರು.
ಕ್ರೀಡಾರಂಜನೆ ಕಾರ್ಯಕ್ರಮವನ್ನು ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಡಾ. ಭಟ್ ಉದ್ಘಾಟಿಸಿದರು. ಹಿರಿಯ ವಿದ್ಯಾರ್ಥಿಗಳು ಶಾಲೆಯೊಂದಿಗಿನ ಬಾಂಧವ್ಯವನ್ನು ಮೆಲುಕು ಹಾಕಿದರು.
ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾಕೇಂದ್ರದ ಬೆಳೆದು ಬಂದ ರೀತಿ ತಿಳಿಸಿದರು. ಈ ವಿದ್ಯಾಕೇಂದ್ರದಲ್ಲಿ ಭಾರತೀಯ ಚಿಂತನೆಯುಳ್ಳ ಪಂಚಮುಖಿ ಶಿಕ್ಷಣ ನೀಡುತ್ತಿದೆ.ಈ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸಲು ನಾವೆಲ್ಲ ಕೈ ಜೋಡಿಸೋಣ ಎಂದರು.
ಕಾರ್‍ಯಕ್ರಮದಲ್ಲಿ 278 ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರೌಢಶಾಲೆಯ ಪ್ರಾರಂಭದ ತಂಡದ ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗವಹಿಸಿದ್ದು ವಿಶೇಷ.
ಯತೀನ್ ಕುಮಾರ್ ಯೇಳ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು. ಸುಜಿತ್ ಕುಮಾರ್ ಸ್ವಾಗತಿಸಿದರು. ಶ್ರುತಿ ಉಪ್ಪಿನಂಗಡಿ ವಂದಿಸಿದರು.