ನವೆಂಬರ್ 24ರಂದು ಬೆಳಗ್ಗೆ ಕುಳ-ವಿಟ್ಲಮುಡ್ನೂರು ಗ್ರಾಮದ ಬದಿಕೆರೆಯಲ್ಲಿರುವ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಆದಿಸ್ಥಳದಲ್ಲಿ ಕುಂಡಡ್ಕ ಬದಿಕೆರೆಯ ಕುಂಡದಲ್ಲಿರುವ ಜಲರೂಪಿ ಶ್ರೀ ಮಹಾವಿಷ್ಣು ಶ್ರೀ ಗಂಗಾದೇವಿಯ ಹಾಗೂ ಸಾನಿಧ್ಯ ಹೊಂದಿರುವ ಶ್ರೀ ನಾಗದೇವರ ಮತ್ತು ಪರಿವಾರ ದೈವಗಳ ಪುನ:ಪ್ರತಿಷ್ಠಾ ಬ್ರಹ್ಮಕಲಶ ಕಾರ್ಯಕ್ರಮ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ವಿಟ್ಲ ತಿಳಿಸಿದರು.
ಸೋಮವಾರ ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಟ್ಲ ಸೀಮೆಯ ಡೊಂಬ ಹೆಗಡೆ ಮನೆತನಕ್ಕೆ ಸೇರಿದ 16 ದೈವ-ದೇವಸ್ಥಾನಗಳಲ್ಲಿ ಕುಂಡಡ್ಕ ಶ್ರೀವಿಷ್ಣುಮೂರ್ತಿ ದೇವಸ್ಥಾನವೂ ಒಂದು. ನ.22ರಂದು ಬೆಳಗ್ಗೆ 10 ಗಂಟೆಗೆ ಹೊರೆಕಾಣಿಕೆ ಉಗ್ರಾಣ ಮುಹೂರ್ತ, ನ.23ರಂದು ಬೆಳಗ್ಗೆ 8 ಗಂಟೆಗೆ ತಂತ್ರಿಗಳ ಆಗಮನ, ಸಂಜೆ ಗಂಟೆ 7ಕ್ಕೆ ವಾಸ್ತು ಹೋಮ, ರಾಕ್ಷೋಘ್ನ ಹೋಮ ಇತರ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ನ.24ರಂದು ಗಣಪತಿ ಹವನ, 8.14 ಕ್ಕೆ ಪುನಃಪ್ರತಿಷ್ಠೆ, ಬ್ರಹ್ಮಕಲಶ, 10ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಆನುವಂಶಿಕ ಆಡಳಿತ ಮೊಕ್ತೇಸರ ವಿಟ್ಲ ಅರಮನೆಯ ಜನಾರ್ದನ ವರ್ಮ ಅರಸರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಳಕುಂಡಡ್ಕ ಗುಣಶ್ರೀ ವಿದ್ಯಾಲಯದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಪಾಂಡೇಲುಗುತ್ತು, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬಲು ಭಾಗವಹಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಜಲರೂಪಿ ಶ್ರೀ ಮಹಾವಿಷ್ಣು-ಶ್ರೀ ಗಂಗಾದೇವಿಗೆ ಮಹಾಪೂಜೆ, ಪ್ರತಿಷ್ಠಾಂಗ ತಂಬಿಲ ಸೇವೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಬ್ರಹ್ಮಕಲಶ ಸಮಿತಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮರುವಾಳ ಮಾತನಾಡಿ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ ಈ ದೇಗುಲದ ಎಲ್ಲ ಸಾನ್ನಿಧ್ಯಗಳ ಜೀರ್ಣೋದ್ಧಾರವು ವಿಟ್ಲ ಅರಸರ ಗೌರವಾಧ್ಯಕ್ಷತೆಯಲ್ಲಿ, ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ವಿಟ್ಲ ಅವರ ಅಧ್ಯಕ್ಷತೆಯಲ್ಲಿ, ನೂಜಿ ಕರ್ಗಲ್ಲು ಮನೆತನ, ಕುಡ್ವ ಮನೆತನ, ಕುಂಡಡ್ಕ ಮನೆತನ, ಕುಳ ಮನೆತನಗಳ ಉಪಾಧ್ಯಕ್ಷತೆಯಲ್ಲಿ ಗ್ರಾಮದ ಭಕ್ತರನ್ನೊಳಗೊಂಡ ಜೀರ್ಣೋದ್ಧಾರ ಸಮಿತಿ ರಚನೆಯಾಗಿದ್ದು ಗ್ರಾಮದ ಎಲ್ಲ ಸಾನ್ನಿಧ್ಯಗಳ ಜೀರ್ಣೋದ್ಧಾರ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಗೋವಿಂದರಾಜ್ ಪೆರುವಾಜೆ, ಪ್ರಚಾರ ಸಮಿತಿ ಅಧ್ಯಕ್ಷ ಜಿನ್ನಪ್ಪ ಗೌಡ ಪೆಲತ್ತಿಂಜ, ಬ್ರಹ್ಮಕಲಶ ಸಮಿತಿ ಸಂಘಟನ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಚಾರ ಸಮಿತಿಯ ಯತೀಶ್ ಬೇರಿಕೆ, ತೀರ್ಥರಾಮ ಉಪಸ್ಥಿತರಿದ್ದರು.