ಎರಡು ದಿನಗಳ ಹಿಂದೆಯಷ್ಟೇ ಮಹಿಳೆಯೋರ್ವರಿಗೆ ಬೀದಿ ನಾಯಿ ಕಚ್ಚಿದ ಘಟನೆ ಇನ್ನೂ ಹಸಿರಾಗಿರುವಂತೆಯೇ ಬಂಟ್ವಾಳದಲ್ಲಿ ಮತ್ತೆ ಬೀದಿನಾಯಿಗಳ ಆರ್ಭಟ ಮುಂದುವರಿದಿದೆ. ಗರ್ಭಿಣಿಯೋರ್ವರು ಹಾಗೂ ಶಾಲಾ ಬಾಲಕನೊಬ್ಬನಿಗೆ ಬೀದಿನಾಯಿಗಳು ಕಚ್ಚಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಭಂಡಾರಿಬೆಟ್ಟುವಿನ ಗರ್ಭಿಣಿ ಭಾರತಿ ಹಾಗೂ ಶಾಲಾ ಬಾಲಕ ಕೌಶಿಕ್ ಎಂಬವರಿಗೆ ಭಂಡಾರಿಬೆಟ್ಟುವಿನಲ್ಲಿ ಬೀದಿ ನಾಯಿ ಕಚ್ಚಿದೆ. ಗಾಯಾಳು ಗರ್ಭಿಣಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಫತ್ರೆಗೆ ದಾಖಲಿಸಲಾಗಿದ್ದರೆ ಕೌಶಿಕ್ ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋಡಿಸಲಾಗಿದೆ. ಇದೇ ಸ್ಥಳದಲ್ಲಿ ಹೇಮಾವತಿ ಎಂಬ ಮಹಿಳೆಗೆ ಬೀದಿ ನಾಯಿ ಕಡಿದಿತ್ತು. ಬೀದಿನಾಯಿ ನಿಯಂತ್ರಣ ಕುಜರಿತು ಪುರಸಭಾ ಸದಸ್ಯ ಜಗದೀಶ ಕುಂದರ್ ಪುರಸಭೆಗೆ ಒತ್ತಾಯಿಸಿದ್ದು, ಅದರಂತೆ ನಿಯಂತ್ರಣ ಕಾರ್ಯ ಆರಂಭಗೊಂಡಿದೆ ಎಂದು ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ www.bantwalnews.com ಗೆ ತಿಳಿಸಿದ್ದಾರೆ.
ಮಂಗಳೂರಿನ ಆನಿಮಲ್ ಕೇರ್ ಟ್ರಸ್ಟ್ ನವರ ಸಹಯೋಗದಿಂದ ಪುರಸಭೆ ವ್ಯಾಪ್ತಿಯ ಬೀದಿನಾಯಿಗಳನ್ನು ಹಿಡಿದು, ಅವುಗಳನ್ನು ಮಂಗಳೂರಿಗೆ ಕೊಂಡುಹೋಗಿ, ಸಂತಾನಶಕ್ತಿ ಹರಣ ಮಾಡಿ, ರೇಬಿಸ್ ಬಾರದಂತೆ ಚುಚ್ಚುಮದ್ದು ನೀಡಿ, ಅವನ್ನು ಎಲ್ಲಿ ಹಿಡಿಯಲಾಗಿದೆಯೋ ಅಲ್ಲೇ ತಂದು ಬಿಡುವ ಪ್ರಕ್ರಿಯೆ ಈಗ ನಡೆಯುತ್ತಿದೆ. ಬೀದಿನಾಯಿಗಳಿಗೆ ತೊಂದರೆ ಉಂಟುಮಾಡಬಾರದು ಎಂಬ ನಿಯಮಪಾಲನೆಯನ್ನು ಮಾಡುವುದರ ಜೊತೆಗೆ ಸಾರ್ವಜನಿಕರಿಗೂ ತೊಂದರೆಯಾಗಬಾರದು ಎಂಬ ಕಾಳಜಿಯಿಂದ ಆಡಳಿತ ಕಾರ್ಯಪ್ರವೃತ್ತವಾಗಬೇಕು. ಹೀಗಾಗಿ ನಿಯಂತ್ರಣ ಎಂಬುದು ಹಗ್ಗದ ಮೇಲಿನ ನಡಿಗೆಯಂತೆ. ಇದಕ್ಕೆ ಆಡಳಿತ ಮತ್ತು ಜನರ ಬೆಂಬಲ ಎರಡೂ ಅಗತ್ಯ.
ಬೀದಿನಾಯಿ ನಿಯಂತ್ರಣಕ್ಕೆ ಆಡಳಿತ ಮತ್ತು ಜನರು ಒಟ್ಟಾಗಿ ಮುನ್ನಡೆಯಬೇಕು. ಹಾಗಿದ್ದಾಗಲಷ್ಟೇ ನಿಯಂತ್ರಣ ಸಾಧ್ಯ. ಇದಕ್ಕೆ ಏನು ಮಾಡಬಹುದು ಎಂಬ ವಿಚಾರವಾಗಿ ಬರೆಯಿರಿ: bantwalnews@gmail.com
ಪುರಸಭೆ ಬೀದಿನಾಯಿ ಹಾವಳಿ ಕುರಿತು ಬಂಟ್ವಾಳನ್ಯೂಸ್ ವಿಶೇಷ ವರದಿ ಮೂಲಕ ಗಮನ ಸೆಳೆದಿತ್ತು. ಅವುಗಳ ಲಿಂಕ್ ಇಲ್ಲಿವೆ.