ಬಂಟ್ವಾಳ

ನಡೆದುಕೊಂಡು ಹೋಗುವವರೇ , ನಾಯಿಗಳಿವೆ ಹುಷಾರು!

  • ಬಂಟ್ವಾಳದಲ್ಲಿ ನಾಯಿ ಕಡಿತಕ್ಕೆ ಮಹಿಳೆಗೆ ಗಾಯ

www.bantwalnews.com

REPORT

ಜಾಹೀರಾತು

ಏನು ಆಗಬಾರದಾಗಿತ್ತೋ ಅದು ಆಗಿದೆ. ಬಂಟ್ವಾಳನ್ಯೂಸ್ ಕಳೆದ ಆಗಸ್ಟ್ ನಲ್ಲಿ ಈ ಕುರಿತು ಎಚ್ಚರಿಕೆಯನ್ನೂ ನೀಡಿತ್ತು. ಅಲ್ಲಲ್ಲಿ ತ್ಯಾಜ್ಯ ಎಸೆಯುವ ಕೆಟ್ಟ ಪ್ರವೃತ್ತಿಯ ದುಷ್ಪರಿಣಾಮಗಳಲ್ಲಿ ಬಹುದೊಡ್ಡ ಸಮಸ್ಯೆಯಾದ ನಾಯಿಗಳ ಕಾಟ ಬಂಟ್ವಾಳಕ್ಕೀಗ ಸಮಸ್ಯೆಯಾಗಿ ತಲೆದೋರಿದೆ. ಕೆಲ ದಿನಗಳ ಹಿಂದಷ್ಟೇ ಸಂತಾನ ಶಕ್ತಿಹರಣ ಮಾಡಲಾಗಿತ್ತು. ಯಾವುದೇ ಪ್ರಯೋಜನವಾಗಲಿಲ್ಲ, ಶ್ವಾನಪಡೆ ಗುರುವಾರ ಮಹಿಳೆಯೊಬ್ಬರನ್ನು ಅಟ್ಟಾಡಿಸಿಕೊಂಡು ಬಂದು ಕಚ್ಚಿದೆ, ಪರಿಣಾಮ ಅವರು ಆಸ್ಪತ್ರೆ ಸೇರಿದ್ದಾರೆ.

ಭಂಡಾರಿಬೆಟ್ಟು ಎಂಬಲ್ಲಿನ ಹೇಮಾವತಿ (50) ಗುರುವಾರ ಸಂಜೆ ಮನೆಯಿಂದ ಬೀಡಿ ಬ್ರಾಂಚ್ ಗೆಂದು ತೆರಳುತ್ತಿದ್ದ ಸಂದರ್ಭ, ಭಂಡಾರಿಬೆಟ್ಟು ಬಳಿಯ ಕೃಷ್ನ ಭಜನಾ ಮಂದಿರ ಸಮೀಪ ತಿರುಗಾಡುತ್ತಿದ್ದ ಬೀದಿ ನಾಯಿಗಳು ಇವರನ್ನು ಹಿಂಬಾಲಿಸಿ, ಕಾಲು, ಕೈ ಭಾಗಕ್ಕೆ ಕಡಿದಿದೆ. ಕೂಡಲೇ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ತ್ಯಾಜ್ಯ ರಾಶಿಯಿಂದಾಗಿ ಬೀದಿ ನಾಯಿಗಳು ಅಧಿಕವಾಗುತ್ತಿದ್ದು, ಇದಕ್ಕೆ ತ್ಯಾಜ್ಯ ಸಮರ್ಪಕ ವಿಲೇವಾರಿಯೊಂದೇ ಪರಿಹಾರ ಎಂಬ ಕುರಿತು ಬಂಟ್ವಾಳನ್ಯೂಸ್ ಈ ಕುರಿತು ವಿಶೇಷ ವರದಿ ಮೂಲಕ ಎಚ್ಚರಿಸಿತ್ತು.

ಬಿ.ಸಿ.ರೋಡ್, ಬಂಟ್ವಾಳ, ಪಾಣೆಮಂಗಳೂರು ಸಹಿತ ಎಲ್ಲೆಡೆಯ ಸಮಸ್ಯೆ ಇದು. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಬಿ.ಸಿ.ರೋಡಿನಲ್ಲಿ ವಾಕಿಂಗ್ ಹೋಗುವ ನೂರಾರು ಜನರಿದ್ದಾರೆ. ಅವರೆಲ್ಲ ನಾಯಿಗಳನ್ನು ಕಂಡು ಆತಂಕಗೊಳ್ಳುತ್ತಿದ್ದಾರೆ. ಒಂದೆಡೆ ಕಳ್ಳರ ಕಾಟ, ಮತ್ತೊಂದೆಡೆ ನಾಯಿ ಕಾಟ. ನಾಯಿಗಳು ಮನುಷ್ಯರನ್ನು ಕಚ್ಚಲೆಂದೇ ಬರುವುದಿಲ್ಲ. ಮನುಷ್ಯರು ಎಸೆಯುವ ಕಸವನ್ನು ಹುಡುಕಿಕೊಂಡು ಬರುತ್ತವೆ. ಕಸದ ರಾಶಿ ಎಲ್ಲಿದೆಯೋ ಅಲ್ಲಿ ನಾಯಿಗಳು ಇದ್ದೇ ಇರುತ್ತವೆ.

ಬಂಟ್ವಾಳನ್ಯೂಸ್ ಈ ಕುರಿತು ವಿವರವಾದ ವರದಿಯನ್ನು ಹಿಂದೆ ಮಾಡಿತ್ತು.

ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತ ದಾಟಿ ಗೂಡಿನಬಳಿ ಕಡೆಗೆ ರೈಲ್ವೆ ಸ್ಟೇಶನ್ ಕಡೆಗೆ ನಡೆದುಕೊಂಡು ಹೋಗುವವರು ಜಾಗ್ರತೆ ಇರಬೇಕು. ಶ್ವಾನಗಳ ಸಂಖ್ಯೆ ಈ ಭಾಗದಲ್ಲಿ ಜಾಸ್ತಿಯಾಗಿದೆ. ಒಂದಕ್ಕಿಂದ ಒಂದು ಬಲಿಷ್ಠವಾದ ನಾಯಿಗಳು ಇಲ್ಲಿ ಕಾಣಸಿಗುತ್ತವೆ. ಇಲ್ಲೇ ಸಾಗುವ ಜನರನ್ನು ಹೆದರಿಸುತ್ತವೆ.  ಈ ರಸ್ತೆ ಗೂಡಿನಬಳಿ ದಾಟಿ ಹಳೇ ಸೇತುವೆ ಕಡೆಗೆ ಹೋಗುತ್ತದೆ. ಇದೇ ಮಾರ್ಗದಲ್ಲಿ ಲಯನ್ಸ್, ರೋಟರಿ ಭವನಗಳು, ಲಯನ್ಸ್ ಪಾರ್ಕ್, ರೈಲ್ವೆ ಸ್ಟೇಶನ್, ಇವೆ. ಪ್ರತಿನಿತ್ಯ ಈ ಮಾರ್ಗವಾಗಿ ಶಾಲಾ, ಕಾಲೇಜು ಮಕ್ಕಳು, ನೂರಾರು ನಾಗರಿಕರು ನಡೆದುಕೊಂಡೇ ಹೋಗುತ್ತಾರೆ.

ಬಂಟ್ವಾಳ ಪುರಸಭೆಯ ತ್ಯಾಜ್ಯ ಸಂಗ್ರಹಿಸಿದ ವಾಹನಗಳು ಇಲ್ಲಿಯೇ ಡಂಪ್ ಮಾಡುತ್ತವೆ. ಹೀಗಾಗಿ ಇದೊಂದು ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ. ಇಲ್ಲಿ ಹೇರಳವಾದ ಕಸಕಡ್ಡಿಗಳು, ಅದರ ಜೊತೆಗೆ ಮಾಂಸದ ಚೂರುಗಳೂ ಬೀಳುತ್ತವೆ. ಇವು ಶ್ವಾನಪಡೆಯನ್ನು ಆಕರ್ಷಿಸುತ್ತವೆ. ನಾಯಿಗಳು ಇಲ್ಲಿ ಹೆಚ್ಚುಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣ ಕಸದ ರಾಶಿ.

ಬಿ.ಸಿ.ರೋಡ್ ಸಹಿತ ಬಂಟ್ವಾಳ ಪುರಸಭೆ ವ್ಯಾಪ್ತಿಯ ನಿರ್ಜನ ಪ್ರದೇಶ, ಕಸದ ರಾಶಿ ಇರುವ ಪ್ರದೇಶಗಳಲ್ಲಿ ಸಹಜವಾಗಿಯೇ ನಾಯಿಗಳು ಮುತ್ತಿಕೊಳ್ಳುತ್ತವೆ. ತ್ಯಾಜ್ಯಗಳನ್ನು ಅಲ್ಲೇ ಡಂಪ್ ಮಾಡುವ ಕಾರಣ ನಾಯಿಗಳು ಇಲ್ಲಿ ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತಿವೆ.

ಆಶ್ರಮ ಶಾಲೆ ಪಕ್ಕವೂ ನಾಯಿಗಳ ಕಾಟ ಜಾಸ್ತಿಯಾಗಿದೆ. ಅಲ್ಲಿ ರಾತ್ರಿ ದೀಪವೂ ಉರಿಯುವುದಿಲ್ಲ. ಹೀಗಾಗಿ ಶ್ವಾನಪಡೆ ಕಚ್ಚಲು ಬರುವುದೇ ಗೊತ್ತಾಗಲಿಕ್ಕಿಲ್ಲ.

 

ALSO READ:

ಜಾಹೀರಾತು
Harish Mambady

ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.