www.bantwalnews.com ವರದಿ
ವೈದ್ಯವೃತ್ತಿಗೆ ಸಂಬಂಧಿಸಿ ರಾಜ್ಯ ಸರಕಾರ ತರಲಿರುವ ಮಸೂದೆಯನ್ನು ವಿರೋಧಿಸಿ ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ವೈದ್ಯರು ರಾಜ್ಯಾದ್ಯಂತ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬಂಟ್ವಾಳ ತಾಲೂಕಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.
ಸಾಮಾನ್ಯವಾಗಿ ಈ ಅವಧಿಯಲ್ಲಿ ಮುಷ್ಕರ ಇಲ್ಲದೇ ಇದ್ದರೂ ಪೇಷಂಟ್ ಗಳ ಸಂಖ್ಯೆ ಕಡಿಮೆ. ಹೆರಿಗೆ ಮತ್ತು ತುರ್ತುಸಂದರ್ಭದ ಪ್ರಕರಣಗಳನ್ನು ಬಿಟ್ಟರೆ ಅಪಾಯಕಾರಿಯಾದ ಸನ್ನಿವೇಶಗಳು ಇಲ್ಲಿ ನಿರ್ಮಾಣವಾಗಿಲ್ಲ. ಆದರೆ ಚಾರಿಟೇಬಲ್ ಆಸ್ಪತ್ರೆ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿಲ್ಲವಾದ ಕಾರಣ ತಾಲೂಕಿನ ಏಕೈಕ ಚಾರಿಟೇಬಲ್ ಆಸ್ಪತ್ರೆ ತುಂಬೆ ಆಸ್ಪತ್ರೆಯಲ್ಲಿ ಎಂದಿಗಿಂತ ಹೆಚ್ಚು ರೋಗಿಗಳು ಕಂಡುಬಂದರು.
ಐಎಂಎ ಬೆಂಬಲಿಸಿ ಆಯುಷ್, ಡೆಂಟಲ್, ಹೋಮಿಯೋಪಥಿ ವೈದ್ಯರೂ ಮುಷ್ಕರ ಹೂಡಿದ್ದು, ತಾಲೂಕಿನಲ್ಲಿರುವ ಕ್ಲಿನಿಕ್ ಗಳು ಬಂದ್ ಆಚರಿಸಿದವು. ಮುಷ್ಕರ ಇಲ್ಲದಿದ್ದರೂ ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ತಾಲೂಕಿನ ರೋಗಿಗಳು ಮಂಗಳೂರು ಮತ್ತು ದೇರಳಕಟ್ಟೆಯನ್ನು ಅವಲಂಬಿಸುತ್ತಾರೆ. ಹೀಗಾಗಿ ತಾಲೂಕಿನಲ್ಲಿ ಮುಷ್ಕರಕ್ಕೆ ಸಂಬಂಧಿಸಿ ಗಂಭೀರ ಪರಿಣಾಮಗಳು ಉಂಟಾಗಿಲ್ಲ.