ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳು ಕ್ರಿಯಾಶೀಲವಾಗುತ್ತವೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ಸೋಶಿಯಲ್ ಮೀಡಿಯಾ ಮೂಲಕ ಜನರನ್ನು ತಲುಪಲು ಯತ್ನಿಸುವುದು ಮಾಮೂಲು.
ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ವಾಟ್ಸಾಪ್, ಫೇಸ್ ಬುಕ್, ಟ್ವಿಟ್ಟರ್ ವಿವಿಧ ರೀತಿಯ ಜನರನ್ನು ತಲುಪಲು ಸಹಕಾರಿಯಾಗುತ್ತದೆ ಎಂಬುದು ರಾಜಕೀಯ ಪಕ್ಷಗಳಿಗೂ ಗೊತ್ತಿದೆ. ಇದೇ ಕಾರಣಕ್ಕೆ ವಾರದ ಹಿಂದೆ ಕಾಂಗ್ರೆಸ್ ನ ರಾಜ್ಯ ಉಸ್ತುವಾರಿಯಾಗಿರುವ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷ ಮುನ್ನಡೆಯಬೇಕು ಎಂಬ ಸ್ಪಷ್ಟ ಸಂದೇಶ ರವಾನೆಯಾಗಿತ್ತು.
ಆದರೆ ಕೆಪಿಸಿಸಿ ಈ ನಿರ್ಧಾರ ಕೈಗೊಳ್ಳುವ ಮುನ್ನವೇ ಬಂಟ್ವಾಳದ ಕ್ಷೇತ್ರ ಕಾಂಗ್ರೆಸ್, ಈ ಕ್ರಮ ಕೈಗೊಂಡಾಗಿತ್ತು. ಪಕ್ಷ ಮುಖಂಡ ಪಿಯೂಸ್ ಎಲ್. ರೋಡ್ರಿಗಸ್ ನೇತೃತ್ವದಲ್ಲಿ ರಚನೆಯಾಗಿರುವ ಜಾಲತಾಣ ಘಟಕಗಳು ಪ್ರತಿ ಬೂತ್ ಮಟ್ಟದಲ್ಲಿ ವಾಟ್ಸಾಪ್ ಗುಂಪುಗಳನ್ನು ರಚಿಸಿ ಮುನ್ನಡೆಯುತ್ತಿವೆ.
ಸುಮಾರು 150ಕ್ಕಿಂತಲೂ ಅಧಿಕ ಬೂತ್ ಮಟ್ಟದ ಗ್ರೂಪುಗಳನ್ನು ರಚಿಸಲಾಗಿದ್ದು, ಸದ್ದಿಲ್ಲದೆ ಪ್ರಚಾರ ಆರಂಭಗೊಂಡಿದೆ. ಇದು ಆರಂಭಿಕ ಹೆಜ್ಜೆ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳು ಪ್ರಧಾನ ಪಾತ್ರ ನಿರ್ವಹಿಸುವುದು ಗ್ಯಾರಂಟಿ.