ಜಿಲ್ಲಾ ಸುದ್ದಿ

ಆಳ್ವಾಸ್ ಕೃಷಿಸಿರಿ ಉದ್ಘಾಟನೆಗೆ ಮಾಜಿ ಪ್ರಧಾನಿ ದೇವೇಗೌಡ

Deve Gowda

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ಡಿ.1ರಿಂದ 3ರವರೆಗೆ  ನಡೆಯುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಪೂರಕವಾಗಿ ನ.30ರಂದು ಸಂಜೆ 6.30ಕ್ಕೆ ಆರಂಭಗೊಳ್ಳುವ ಈ ಬಾರಿಯ ಆಳ್ವಾಸ್ ಕೃಷಿಸಿರಿಯನ್ನು ದೇಶದ ಮಾಜಿ ಪ್ರಧಾನಿ, ಕೃಷಿ ಪ್ರೇಮಿ ಎಚ್.ಡಿ ದೇವೇಗೌಡ ಉದ್ಘಾಟಿಸಲಿದ್ದಾರೆ ಎಂದು ನುಡಿಸಿರಿಯ ರೂವಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂಡುಬಿದಿರೆಯ ಕೃಷಿ ವಿಚಾರ ವಿನಿಮಯ ಕೇಂದ್ರ, ರೈತ ಸಂಘ,  ಕೃಷಿಕ ಸಮಾಜ ಮಂಗಳೂರು ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಈ ಆಳ್ವಾಸ್ ಕೃಷಿ ಸಿರಿಯು ಸುಮಾರು 6 ಎಕರೆ ಪ್ರದೇಶದಲ್ಲಿ ನಡೆಯಲಿದ್ದು ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿರುವ ದಿ.ಮುಂಡುರ್ದೆಗುತ್ತು ರಾಮಮೋಹನ ರೈ ಅವರ ಹೆಸರನ್ನು ಅವರ ಗೌರವಾರ್ಥ ಆವರಣಕ್ಕೆ ಹೆಸರನ್ನು ಇಡಲಾಗುವುದು. ಮೂರು ದಿನಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು ಈ ವೇದಿಕೆಗೆ ಯಕ್ಷಗಾನ ಕ್ಷೇತ್ರದ ಅದ್ವಿತೀಯ ಕಲಾವಿದ ದಿವಂಗತ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅವರ ಹೆಸರನ್ನು ನಾಮಕರಣ ಮಾಡಲಾಗುವುದು.
ನೈಜ ಕೃಷಿ ದರ್ಶನ
ಎರಡು ಎಕರೆ ಪ್ರದೇಶದಲ್ಲಿ ವಿಶೇಷವಾಗಿ ಈ ವರ್ಷ ಬೆಂಗಳೂರಿನ ಸುಧಾರಿತ ಹಾಗೂ ಊರಿನ ಸಾಂಪ್ರಾದಾಯಿಕ ಮಾದರಿಯಲ್ಲಿ ಬೆಳೆದ ನೈಜ ಕೃಷಿ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ದಿನನಿತ್ಯ ಬಳಸುವ ವಿವಿಧ ತರಕಾರಿಗಳನ್ನು ನೈಜವಾಗಿ ಕಣ್ತುಂಬಿಕೊಳ್ಳಲು ಅವಕಾಶವಿದೆ.
ಡಿ.1ರಂದು ಬೆಳಿಗ್ಗೆ 10ರಿಂದ 3 ವರೆಗೆ ಜಾನುವಾರು ಪ್ರದರ್ಶನ ಹಾಗೂ . ಸಂಜೆ 4.30ರಿಂದ 6ರವರೆಗೆ  ಓಟದ ಕೋಣಗಳ ಸೌಂದರ್ಯ ಸ್ಪರ್ಧೆ ಯನ್ನು ಏರ್ಪಡಿಸಲಾಗುವುದು. ಜಾನುವಾರು ಪ್ರದರ್ಶನದಲ್ಲಿ ವಿವಿಧ ತಳಿಗಳ 70ಕ್ಕಿಂತ ಹೆಚ್ಚು ಜಾನುವಾರುಗಳು ಪ್ರದರ್ಶನಗೊಳ್ಳಲಿವೆ. ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತವಾಗುವ ಕೋಣಗಳಿಗೆ ಪ್ರಥಮ ಬಹುಮಾನವಾಗಿ 50,000, ದ್ವಿ.30,000 ಹಾಗೂ ತೃ.20,000 ರೂ ನಗದನ್ನು ನೀಡಲಾಗುವುದು.ಜೊತೆಗೆ ಕೋಣಗಳನ್ನು ಓಡಿಸುವ ಓಟಗಾರನ ಅಂಗಸೌಷ್ಠವ, ದೇಹ ಸೌಂದರ್ಯಕ್ಕೆ ಪ್ರಥಮ 10,000 ಮತ್ತು 7,000 ರೂಗಳ ಬಹುಮಾನಗಳನ್ನು ನೀಡಲಾಗುವುದು.
ವಿಶೇಷ ಆಕರ್ಷಣೆಗಳು : 60ಕ್ಕೂ ಮಿಕ್ಕಿ  ಬೃಹತ್ ಗಾತ್ರದ ಮತ್ಸ್ಯಾಲಯಗಳು, 500ಕ್ಕೂ ಮಿಕ್ಕಿ ಸಮುದ್ರ ಚಿಪ್ಪುಗಳು, 120ಕ್ಕೂ ಮಿಕ್ಕಿ ವಿದೇಶಿ ಪಕ್ಷಗಳು, 50ಕ್ಕೂ ಮಿಕ್ಕಿ ಬೊನ್ಸಾಯಿ ಕೃಷಿ, 44 ತಳಿಗಳ ಬಿದಿರು ಗಿಡಗಳು, ಮತ್ತು 40 ತಳಿಗಳ ಬಿದಿರು, ನೈಜಿಲ್ಯಾಂಡ್ ಮೂಲದ ವಿಶಿಷ್ಠ ಬಣ್ಣಗಳ ಹಾಗೂ ಆಹಾರಕ್ಕಾಗಿ ಬಳಸುವ ಸಸ್ಯಗಳು , ಪುಷ್ಪ ಪ್ರದರ್ಶನ ಹಾಗೂ ತರಕಾರಿ ಮತ್ತು ಹಣ್ಣುಗಳಲ್ಲಿ ಕಲಾಕೃತಿ ರಚನೆಗೆ ಅವಕಾಶವನ್ನು ಮಾಡಿಕೊಡಲಾಗುತ್ತದೆ. 250ಕ್ಕೂ ಮಿಕ್ಕಿ ರಾಜ್ಯಮಟ್ಟದ ನರ್ಸರಿ ಮತ್ತು ಕೃಷಿ ಉಪಕರಣ ಮಾರಾಟ ಮಳಿಗೆಗಳು, ಕೃಷಿ ಸಂಬಂಧಿ ಗುಡಿಕೈಗಾರಿಕೆಗಳು, ಜೊತೆಗೆ ತಿಂಡಿ-ತಿನಿಸುಗಳ ಬೃಹತ್ ವ್ಯವಸ್ಥೆಯನ್ನು ಈ ಕೃಷಿಸಿರಿಯಲ್ಲಿ ಕಲ್ಪಿಸಲಾಗುವುದು.
ಡಿ. 2ರಂದು ಬೆಕ್ಕುಗಳ ಪ್ರದರ್ಶನ, ಸೌಂದರ್ಯ ಸ್ಪರ್ಧೆ, ಹಾಗೂ 3 ಮಧ್ಯಾಹ್ನ 2 ರಿಂದ 6ರವರೆಗೆ ಮರಿ, ಪ್ರಾಮಾಣಿಕತೆ ಹಾಗೂ ಸೌಂದರ್ಯ ವಿಭಾಗಗಳಲ್ಲಿ ಶ್ವಾನ ಪ್ರದರ್ಶನಗಳನ್ನು ವಿದ್ಯಾಗಿರಿಯ ಆಳ್ವಾಸ್ ಪದವಿ ಕಾಲೇಜು ಆವರಣದಲ್ಲಿರುವ ಡಾ.ಅಬ್ದುಲ್ ಕಲಾಂ ಪಿ.ಜಿ ವಠಾರದಲ್ಲಿ ಏರ್ಪಡಿಸಲಾಗುವುದು ಇದಲ್ಲದೆ ಕೃಷಿ ಆವರಣವನ್ನು ತುಳುನಾಡಿನ ಕೃಷಿ ಸಂಸ್ಕøತಿಯನ್ನು ಬಿಂಬಿಸುವಂತೆ ಭತ್ತದ ತುಪ್ಪೆಗಳಿಂದಲೂ ಜನಪದಿಯ ಅಲಂಕರಣಗಳಿಂದಲೂ ಸಿಂಗರಿಸಲಾಗುವುದು ಎಂದು ಆಳ್ವ ತಿಳಿಸಿದರು.
ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ಜತೆ ಕಾರ್ಯದರ್ಶಿ ಸುಜಾತ ರಮೇಶ್, ಕೋಶಾಧಿಕಾರಿ ಆಲ್ವೀನ್ ಮಿನೇಜಸ್, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಎಸ್.ಡಿ.ಸಾಮ್ರಾಜ್ಯ, ಪ್ರಗತಿಪರ ಕೃಷಿಕ ಸುಭಾಶ್ಚಂದ್ರ ಚೌಟ ಸುದ್ದಿಶಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ