- ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲು ಸದಸ್ಯರ ಒತ್ತಾಯ
ಬಂಟ್ವಾಳನ್ಯೂಸ್ ವರದಿ
ಮೀಟಿಂಗ್ HIGHLIGHTS:
- ಬಂಟ್ವಾಳ ಸೋಮವಾರ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಪುರಸಭಾ ನಿಧಿಯಿಂದ ಕೆಲಸ ಮಾಡಿದ್ದಕ್ಕೆ ಬಿಲ್ ಪಾವತಿಯಾಗಿಲ್ಲವೇಕೆ ಎಂದು ಪ್ರಶ್ನಿಸಿದಾಗ ಹಣ ಇಲ್ಲ ಎಂಬ ಉತ್ತರ ಚರ್ಚೆಗೆ ಕಾರಣವಾಯಿತು.
- ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಮಾತನಾಡಿ, ಪುರಸಭಾ ನಿಧಿಯಲ್ಲಿ 5 ಲಕ್ಷ ರೂ ಇದ್ದು, ಇದರಲ್ಲಿ ವಿವಿಧ ಖರ್ಚುಗಳಿಗೆ ಹಣ ವಿನಿಯೋಗವಾಗುತ್ತದೆ ಎಂದು ಹೇಳಿದಾಗ ಹಿರಿಯ ಸದಸ್ಯ ಗೋವಿಂದ ಪ್ರಭು ಪುರಸಭಾ ಆದಾಯಕ್ಕೆ ಹಿನ್ನಡೆಯಾಗಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದರು.
- ಆದಾಯಕ್ಕೆ ಹಿನ್ನಡೆ ಎಂದರೆ ಬಿಲ್ ವಸೂಲಿಯಲ್ಲಿ ಪುರಸಭೆ ಹಿಂದೆ ಬಿದ್ದಿದೆ ಎಂದರ್ಥ ಎಂದು ಹೇಳಿದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ವ್ಯಾಪ್ತಿಯ ಎಲ್ಲ ಕಟ್ಟಡಗಳಲ್ಲಿರುವ ನೀರಿನ ಸಂಪರ್ಕಗಳನ್ನು ಪರಿಶಿಲಿಸಿ, ಎಷ್ಟು ಬಿಲ್ ವಸೂಲಾಗಿದೆ ಎಂಬುದನ್ನು ನೋಡಿ, ತೆರಿಗೆ ವಸೂಲಾತಿಯಾಗದಿದ್ದರೆ ಪುರಸಭೆಗೆ ಆದಾಯ ದೊರಕುವುದು ಹೇಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
- ಈ ಸಂದರ್ಭ ಮಾತನಾಡಿದ ಬಿಜೆಪಿ ಸದಸ್ಯ ದೇವದಾಸ ಶೆಟ್ಟಿ, ಜಾಹೀರಾತು ಶುಲ್ಕ ಎಷ್ಟು ವಸೂಲಾತಿ ಆಗಿದೆ ಎಂದು ಪ್ರಶ್ನಿಸಿದರು. ಕೊನೆಗೆ ಪುರಸಭೆ ನಿಧಿಯಿಂದ ಕಾಮಗಾರಿಗಳಿಗೆ ಹಣ ಪಾವತಿಸುವುದು ಎಂದು ತೀರ್ಮಾನಿಸಲಾಯಿತು.
- ಪುರಸಭೆ ಮೀಟಿಂಗ್‌ಗೆ ನಾನಾ ಇಲಾಖೆಗಳ ಅಧಿಕಾರಿಗಳು ಬಾರದೇ ಇರುವುದು ಹಾಗೂ ಪುರಸಭೆಗೆಂದು ನಿಯುಕ್ತಿಯಾದವರು ಬೇರೆಡೆ ಡ್ಯೂಟಿ ಮಾಡುವ ಕುರಿತು ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು. ಇಲ್ಲಿ ಡ್ಯೂಟಿ ಮಾಡದೆ ಉಳಿದೆಡೆ ಕೆಲಸ ಮಾಡುವವರು ನಮಗೆ ಬೇಡ ಎಂದು ಸದಾಶಿವ ಬಂಗೇರ ಹೇಳಿದರು.
- ಆಶ್ರಯ ಯೋಜನೆಯಡಿ ಹಕ್ಕುಪತ್ರ್ರ ವಿತರಿಸುವ ಸಂದರ್ಭ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇಲ್ಲ ಎಂದು ಆಡಳಿತ ಪಕ್ಷದ ಸದಸ್ಯರೇ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಈ ಸಂದರ್ಭ ಮಹಮ್ಮದ್ ಶರೀಫ್, ಚಂಚಲಾಕ್ಷಿ, ಪ್ರವೀಣ್, ಮುನೀಶ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಸಹಿತ ಬಹುತೇಕ ಸದಸ್ಯರು ಮಾತನಾಡಿ, ಯಾವ ವಿಚಾರವೂ ನಮ್ಮ ಗಮನಕ್ಕೆ ಬರುವುದಿಲ್ಲ ಎಂದು ದೂರಿದರು.
- ಬಂಟ್ವಾಳ ಪೇಟೆಯಿಂದ 6 ಇಂಚು ಪೈಪ್ ಲೈನ್ ಕೆಳಗಿನಪೇಟೆಗೆ ಬರುವ ಸಂದರ್ಭ 3 ಇಂಚು ಮತ್ತು 4 ಇಂಚಿನ ಪೈಪಿಗೆ ಸೇರುವ ಕಾರಣ ಸರಿಯಾದ ನೀರು ಪೂರೈಕೆ ಆಗುತ್ತಿಲ್ಲ ಎಂದು ಸದಸ್ಯ ಮೊನೀಶ್ ಆಲಿ ಆಪಾದಿಸಿದರು. ಪೈಪ್ ಲೈನ್ ಬದಲಾಯಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ. ಈ ವಿಚಾರವಾಗಿ ನಾಲ್ಕೈದು ಬಾರಿ ಮುಖ್ಯಾಧಿಕಾರಿ ಬಳಿ ಚರ್ಚಿಸಿದ್ದೇನೆ. ಆದರೆ ಇಷ್ಟರವರೆಗೆ ಸಮಸ್ಯೆ ಬಗೆಹರಿಯದ ಕಾರಣ ವಾರ್ಡಿನ ಸಮಸ್ತ ನಾಗರಿಕರ ಮೂಲಕ ನ.೧೭ರಂದು ಪ್ರತಿಭಟನೆ ನಡೆಸುತ್ತೇನೆ ಎಂದು ಆಲಿ ಎಚ್ಚರಿಸಿ, ಮತ್ತೆ ಮನವಿಯನ್ನು ನೀಡಿದರು.
- ರಾಜೀವ ಗಾಂಧಿ ವಸತಿ ಯೋಜನೆ ನಿವೇಶನ ಅಭಿವೃದ್ಧಿ ವಿಚಾರದಲ್ಲಿ ಬುಡಾ ಅಧ್ಯಕ್ಷ ಸದಾಶಿವ ಬಂಗೇರ ಗರಂ ಆದರು. ಇದಕ್ಕೆ ಎಷ್ಟು ಹಣ ಖರ್ಚು ಮಾಡಲಾಗುತ್ತಿದೆ, ಇದು ಸರಿಯಾದ ಕ್ರಮದಲ್ಲಿ ಆಗುತ್ತಿದೆಯೇ ಎಂದು ಪ್ರಶ್ನಿಸಿದರು.
- ಬಿ.ಸಿ.ರೋಡಿನ ಕೈಕುಂಜೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕೊಡಬಾರದೇಕೆ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿದರೆ, ಎಲ್ಲರಿಗೂ ತೊಂದರೆ, ಅದರ ಬದಲು ಸೂಕ್ತ ಪಾರ್ಕಿಂಗ್ ವ್ಯವಸ್ತೆ ಕಲ್ಪಿಸಬೇಕು ಎಂದು ನಾಮನಿರ್ದೇಶಿತ ಸದಸ್ಯ ಲೋಕೇಶ್ ಸುವರ್ಣ ಹೇಳಿದರು.
-
- ಪುರಸಭೆಯ ಆನ್ ಲೈನ್ ಕೊಠಡಿಯೊಳಗೆ ಬ್ರೋಕರ್ ಗಳು , ಕೆಲ ತಾಲೂಕು ಪಂಚಾಯತ್ ಸದಸ್ಯರು ತೆರಳಿ ರಾಜಾರೋಷವಾಗಿ ನುಗ್ಗಿ ತಮ್ಮ ವ್ಯವಹಾರ ನಡೆಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕಡಿವಾಣ ಹಾಕುವಂತೆ ಸದಸ್ಯರು ಆಗ್ರಹಿಸಿದರು.
- ಅಧ್ಯಕ್ಷ ರಾಮಕೃಷ್ಣ ಆಳ್ವ ಸಹಿತ ಸದಸ್ಯರಾದ ಜಗದೀಶ ಕುಂದರ್,ಗಂಗಾಧರ,ಶರೀಫ್ ರವರು ಧ್ವನಿಗೂಡಿಸಿ,ಈವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಆ ಕೊಠಡಿಗೆ ಯಾರಿಗೂ ಪ್ರವೇಶವಿಲ್ಲ ಎಂಬ ಫಲಕ ಹಾಕುವಂತೆ ಸೂಚಿಸಿದರು.
- ಬೀದಿ ವ್ಯಾಪಾರಿಗಳಿಗೆ ವ್ಯಾಪಾರಿ ವಲಯ ನಿರ್ಮಿಸಲು ಬಡ್ಡಕಟ್ಟೆ,ಜಕ್ರಿಬೆಟ್ಟು,ಬಿ.ಸಿ.ರೋಡಿನಲ್ಲಿ ಜಾಗ ಗುರುತಿಸಲು ನಿರ್ಧರಿಸಲಾಯಿತು.ಮೂರು ದಿನದೊಳಗೆ ಬಡ್ಡಕಟ್ಟೆ ಶೌಚಾಲಯವನ್ನು ಶುಚಿಗೊಳಿಸಲಾಗುವುದು ಎಂದು ಸದಸ್ಯ ಪ್ರವೀಣ್ ಅವರ ಪ್ರಶ್ನೆಗೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಭರವಸೆಯಿತ್ತರು.
- ಲಮನೆ,ಮನೆಯಿಂದ ಕಸ ವಿಲೇವಾರಿಗೆ ಸಂಬಂಧಿಸಿ ಪುರಸಭೆಯ ಹೆಸರಿನಲ್ಲಿ 30 ರೂ.ಗೆ ಬದಲು ಹೆಚ್ಚುವಾರಿಯಾಗಿ 50 ರೂ. ಸಂಗ್ರಹಿಸುತ್ತಿರುವ ಹಿನ್ನಲೆಯಲ್ಲಿ ಗುತ್ತಿಗೆದಾರನಿಗೆ ಪುರಸಭೆಯಿಂ ಶೋಕಾಸ್ ನೊಟೀಸ್ ಜಾರಿ ಮಾಡುವ ನಿರ್ಣಯ ಕೈಗೊಳ್ಳ ಲಾಗಿತ್ತಾದರೂ,ಪುರಸಭೆ ಈ ವರಾಗೂ ಗುತ್ತಿಗೆದಾರನಿಗೆ ನೊಟೀಸ್ ಜಾರಿಗೊಳಿಸದಿರುವುದು ಬೆಳಕಿಗೆ ಬಂತು.
- ನಿರುಪಯುಕ್ತ ಬಸ್ ನಿಲುಗಡೆ, ಶೌಚಾಲಯ ದುರಸ್ತಿ, ನೇತ್ರಾವತಿ ನದಿಗೆ ಕೋಳಿತ್ಯಾಜ್ಯ, ಹದಗೆಟ್ಟು ರಸ್ತೆಗಳು, ಪಾಣೆಮಂಗಳೂರು ವಿಎ ಕಚೇರಿ ನಾದುರಸ್ತಿಯಲ್ಲಿರುವ ವಿಚಾರದ ಬಗ್ಗೆಯೂ ಚರ್ಚೆಗಳು ನಡೆದವು.
ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಸದಸ್ಯರಾದ ಮಹಮ್ಮದ್ ಇಕ್ಬಾಲ್, ಮೊನೀಶ್ ಆಲಿ, ಬಿ.ಮೋಹನ್, ಪ್ರವೀಣ್, ಗಂಗಾಧರ್, ರಾಜೀವಿ, ಚಂಚಲಾಕ್ಷಿ, ಜಗದೀಶ ಕುಂದರ್, ಜೆಸಿಂತ, ಪ್ರಭಾ ಸಾಲ್ಯಾನ್, ಮಹಮ್ಮದ್ ಶರೀಫ್, ಜಗದೀಶ ಕುಂದರ್, ವಸಂತಿ ಚಂದಪ್ಪ, ಸುಗುಣ ಕಿಣಿ, ಭಾಸ್ಕರ ಟೈಲರ್, ಲೋಕೇಶ ಸುವರ್ಣ ಚರ್ಚೆಯಲ್ಲಿ ಪಾಲ್ಗೊಂಡರು.