ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಮಿತಿ ಬಿ.ಸಿ.ರೋಡು ಇದರ ಆಶ್ರಯದಲ್ಲಿ ದುರ್ಗಾ ನಮಸ್ಕಾರ ಪೂಜೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮವು ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಎಸ್ಸೆಸ್ಸೆಲ್ಸಿ, ಪಿ.ಯು.ಸಿ., ಡಿಗ್ರಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ಇತರ ಕೋರ್ಸುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಿತಿ ವತಿಯಿಂದ ಚಿನ್ನದ ಪದಕವನ್ನು ನೀಡಿ ಪುರಸ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ನೂತನವಾಗಿ ಆಯ್ಕೆಯಾದ ಮೊಕ್ತೇಸರರಾದ ಬಿ. ಪುರುಷೆತ್ತಮ ಶೆಣೈ, ಎ. ಗೋವಿಂದ ಪ್ರಭು ಮತ್ತು ಪಿ. ಪ್ರವೀಣ್ ಕಿಣಿ ಅವರನ್ನು ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.
ಸಮಿತಿಯ ಅಧ್ಯಕ್ಷ ಯು. ಸುರೇಶ್ ನಾಯಕ್ ಸಭಾಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಯಾಗಿ ಸಾಣೂರು ಕಾರ್ಕಳ ಜಿ.ಎಸ್.ಬಿ. ಸಮಾಜ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ನರಸಿಂಹ ಕಾಮತ್ ಅವರು, ಸಂಘ ಸಂಸ್ಥೆಗಳ ಮಹತ್ವ ಮತ್ತು ಜವಾಬ್ದಾರಿಯ ಮಾಹಿತಿ ನೀಡಿದರು. ಹಿಂದೂಸ್ಥಾನಿ ಶಾಸ್ತ್ರೀಯ ಗಾಯಕಿ ಬಸ್ತಿ ಕವಿತಾ ವಿಜಯ್ ಶೆಣೈ, ಮಂಗಳೂರು, ಇವರು ಜಿ.ಎಸ್.ಬಿ. ಸೇವಾ ಸಮಿತಿಯ ಕಾರ್ಯ ಚಟುವಟಿಕೆಯನ್ನು ಶ್ಲಾಘಿಸಿದರು.
ಸಂಘದ ಕೋಶಾಧಿಕಾರಿ ಎಚ್. ನಾರಾಯಣ ಶೆಣೈ ಸ್ವಾಗತಿಸಿ, ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ಪ್ರಭು ಪರಿಚಯಿಸಿದರು. ದುರ್ಗಾದಾಸ್ ಶೆಣೈ ಮತ್ತು ಸಮಿತಿಯ ಇತರ ಪದಾಧಿಕಾರಿಗಳು ಸಹಕರಿಸಿದರು.ರಘುವೀರ್ ಕಾಮತ್ ವಂದಿಸಿದರು. ಜೊತೆಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ ಪೈ ಪ್ರಸ್ತಾವಿಸಿ, ನಿರೂಪಿಸಿದರು.