ಅರುಣ್ ಜೋಶಿ ಎಂಬ ಲೇಖಕರು ಇಂಗ್ಲಿಷಿನಲ್ಲಿ ದ ಅಪ್ರೆಂಟಿಸ್ ಎಂಬ ಹೆಸರಿನ ಕಾದಂಬರಿಯೊಂದನ್ನು ಬರೆದಿದ್ದಾರೆ. ಅಪ್ರೆಂಟಿಸ್ ಎಂದರೆ ಇನ್ನೊಬ್ಬರ ಅಡಿಯಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾ ಕೆಲಸ ಕಲಿಯುವವನು ಅಂತ ಅರ್ಥ. ತನಗೆ ತಿಳಿಯದ ವಿದ್ಯೆ ಕಲಿಯುವವನು ಎಂದೂ ಇದರ ಅರ್ಥವನ್ನು ವಿಸ್ತರಿಸಿಕೊಳ್ಳಬಹುದು.
ಅರುಣ್ ಜೋಶಿಯವರ ಕಾದಂಬರಿಯ ನಾಯಕ ಬದುಕಿಡೀ ಬದುಕಲು ಕಲಿಯುವ ಅಥವಾ ಬದುಕನ್ನು ಕಲಿಯುವ ಅಥವಾ ಬದುಕನ್ನು ಅರ್ಥ ಮಾಡಿಕೊಳ್ಳಲು ಕಲಿಯುವ ಒಬ್ಬ ಅತೃಪ್ತ ಅಪ್ರೆಂಟಿಸ್ ಆಗಿ ಕಾಣುತ್ತಾನೆ. ಓದುಗರು ತಮ್ಮ ತಮ್ಮ ಬದುಕನ್ನು ಪರೀಕ್ಷಿಸಿಕೊಳ್ಳುವಂತೆ ಮಾಡಿ ತಲೆ ಹಾಳು ಮಾಡಿಬಿಡಬಹುದಾದ ಈ ಕಾದಂಬರಿಯನ್ನು ಒಮ್ಮೆಯಾದರೂ ಓದಬೇಕು ಅಂತ ನಾನು ಶಿಫಾರಸು ಮಾಡುತ್ತೇನೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಣ, ಅಧಿಕಾರ, ರಾಜಕಾರಣ, ಭ್ರಷ್ಟಾಚಾರ ಇವೆಲ್ಲವುಗಳ ನಡುವೆ ನಮ್ಮ ಬದುಕಿನ ಫುಲ್ಫಿಲ್ಮೆಂಟ್ ಎಂದರೆ ಏನು ಎಂಬ ದೊಡ್ಡ ದಾರ್ಶನಿಕ ಪ್ರಶ್ನೆಗಳನ್ನು ನಮ್ಮೊಳಗೆ ಈ ಕಾದಂಬರಿ ಹುಟ್ಟುಹಾಕುತ್ತದೆ.
ಈ ಕಾದಂಬರಿಯಲ್ಲಿ ರತನ್ ರಾಥೋರ್ ಎಂಬವನು ನಾಯಕ. ಇಲ್ಲಿ ಅಪ್ರೆಂಟಿಸ್ ಆಗಿರುವುದೆಂದರೆ ಅಡಿಯಾಳು ಆಗಿರುವುದೂ ಹೌದು. ಸ್ವಾತಂತ್ರ್ಯದ ನಂತರದ ಭಾರತದಲ್ಲಿ ಹೊಸ ಒಡೆಯರ ಅಡಿಯಲ್ಲಿ ಹೇಗೆ ಹೊಸ ಬಗೆಯ ದಾಸ್ಯಕ್ಕೆ ನಾವು ಒಳಗಾಗಬೇಕಾಗುತ್ತದೆ ಅನ್ನುವುದನ್ನು ಕೂಡ ಈ ಕಾದಂಬರಿ ಹೇಳುತ್ತ್ತಿರುವಂತಿದೆ. ಮನುಷ್ಯನೊಬ್ಬ ಹಣ, ಅಧಿಕಾರ, ಹೆಂಡತಿ/ಗಂಡ ಹೀಗೆ ಯಾವುದಕ್ಕೆಲ್ಲ/ಯಾರಿಗೆಲ್ಲ ಅಡಿಯಾಳಾಗಿ ಬದುಕಬೇಕಾಗುತ್ತದೆ ಎಂಬುದರ ಸ್ವಾರಸ್ಯಕರ ಚಿಂತನೆಯೂ ಇಲ್ಲಿದೆ. ಮನುಷ್ಯನ ವ್ಯಕ್ತಿತ್ವ ಮತ್ತು ಚಾರಿತ್ರ್ಯ ರೂಪುಗೊಳ್ಳುವುದು ಹೇಗೆ ಎಂಬ ಚಿಂತೆ ಮತ್ತು ಚಿಂತನೆಗೂ ನಮ್ಮನ್ನು ಈ ಅಪ್ರೆಂಟಿಸ್ ನಾಯಕ ಹಚ್ಚುತ್ತಾನೆ.
ನಾನು ನಿಜವಾಗಿ ಈ ಅಂಕಣದಲ್ಲಿ ಅರುಣ್ ಜೋಶಿಯವರ ಕಾದಂಬರಿಯ ಕುರಿತು ಬರೆಯಬೇಕೆಂದು ಹೊರಟದ್ದಲ್ಲ. ಇನ್ನೊಬ್ಬರ ಅಡಿಯಲ್ಲಿ ಕೆಲಸ ಮಾಡುತ್ತ ಕಲಿಯುತ್ತ ಬೆಳೆಯುವ ಮತ್ತು ಎಂದಿಗೂ ಬೆಳೆಯದ ಕೆಲಮಂದಿಯನ್ನು ನೋಡಿ ಆ ಬಗ್ಗೆ ಬರೆಯಬೇಕೆಂದು ಹೊರಟಾಗ ಹತ್ತು ಹದಿನೈದು ವರ್ಷಗಳ ಹಿಂದೆ ಓದಿದ್ದ ಅಪ್ರೆಂಟಿಸ್ ಕಾದಂಬರಿ ನೆನಪಾಯಿತು. ಇರಲಿ. ಈಗ ನಾನು ಹೇಳಬೇಕೆಂದು ಮೊದಲು ಅಂದುಕೊಂಡಿದ್ದ ವಿಷಯಕ್ಕೆ ಬರುತ್ತೇನೆ.
ಈಗ ಜಗತ್ತಿನ ಬಹುದೊಡ್ಡ ಶ್ರೀಮಂತರಲ್ಲಿ ಒಬ್ಬನಾದ ಮುಖೇಶ್ ಅಂಬಾನಿಯ ತಂದೆ ಧೀರೂಬಾಯಿ ಅಂಬಾನಿ ಬಗ್ಗೆ ಕೇಳಿದ ಕತೆಯ ಪ್ರಕಾರ ಅವರು ಆರಂಭದಲ್ಲಿ ಪೆಟ್ರೋಲ್ ಪಂಪಿನಲ್ಲಿ ಕೆಲಸ ಮಾಡುತ್ತಿದ್ದರಂತೆ. ಈಗ ಅಂಬಾನಿಗಳಲ್ಲಿ ಪೆಟ್ರೋಲಿಯಮ್ ಉತ್ಪನ್ನಗಳ ಬಹುದೊಡ್ಡ ಉದ್ಯಮವಿದೆ ಎಂದು ಬೇರೆ ಹೇಳಬೇಕಿಲ್ಲ. ಉದ್ಯಮಿಗಳ ಬಗ್ಗೆ ನಮ್ಮ ದೇಶದಲ್ಲಿ ಬಹಳಷ್ಟು ಮಂದಿ ಬರಹಗಾರರಿಗೆ ಒಂದು ಬಗೆಯ ಅಸಹನೆಯಿದೆ. ಅವರು ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಲಂಚ ಕೊಟ್ಟು ಅಕ್ರಮಗಳ ಮೂಲಕ ವ್ಯಾಪಾರೋದ್ಯಮಗಳನ್ನು ಬೆಳೆಸುತ್ತಾರೆ, ಕಪ್ಪು ಹಣ ಮಾಡುತ್ತಾರೆ, ಪರಿಸರ ನಾಶ ಮಾಡುತ್ತಾರೆ ಇತ್ಯಾದಿ. ಅದೆಲ್ಲ ಇರಬಹುದು. ಆದರೆ ಹೊಸತನ್ನು ಕಲಿಯುವ ಮತ್ತು ಹೊಸ ಸಾಹಸಕ್ಕೆ ಇಳಿಯುವ ಒಂದು ಮನೋಭಾವ ಇಲ್ಲದೇ ಇರುತ್ತಿದ್ದರೆ ಇಂದು ಅಂಬಾನಿಗಳ ಸಾಮ್ರಾಜ್ಯ ಹೀಗೆ ಬೆಳೆಯುತ್ತಿರಲಿಲ್ಲ.
ನಮ್ಮ ಊರುಗಳಲ್ಲಿ ಖಾಸಗಿ ಬಸ್ಸುಗಳಲ್ಲಿ ಕ್ಲೀನರುಗಳಾಗಿ ಕೆಲಸ ಆರಂಭಿಸಿದ ಹುಡುಗರು ಮುಂದೆ ಕಂಡಕ್ಟರುಗಳಾಗಿ ಅಥವಾ ಡ್ರೈವರುಗಳಾಗಿ ಮತ್ತೂ ಮುಂದೆ ಬಸ್ಸಿನ ಮತ್ತೂ ಮುಂದೆ ಬಸ್ಸುಗಳ ಮಾಲಕರಾಗಿ ಆನಂತರ ಅದರ ಜೊತೆಗೇ ಇತರ ವ್ಯಾಪಾರ ಉದ್ಯಮಗಳನ್ನು ನಡೆಸುವ ಹಂತಕ್ಕೆ ಏರಿದ ಉದಾಹರಣೆಗಳೂ ಇವೆ. ಯಾರದೋ ಹೋಟೆಲಿನಲ್ಲಿ ಪಾತ್ರೆ ತೊಳೆಯಲು ಅಥವಾ ಅಕ್ಕಿ ಕಡೆಯಲಿಕ್ಕೆ ಅಥವಾ ಅಡಿಗೆಗೆ ಸೇರಿ ಮುಂದೆ ತಾವೇ ಹೋಟೆಲು ಮಾಲಿಕರಾದವರ ಉದಾಹರಣೆ ಬಗ್ಗೆ ಬೇರೆ ಹೇಳಬೇಕಿಲ್ಲ.
ಕಟ್ಟಡ ಕಾರ್ಮಿಕರನ್ನೇ ತೆಗೆದುಕೊಳ್ಳಿ. ಆರಂಭದಲ್ಲಿ ಮಣ್ಣಿನಲ್ಲಿ ಪಾಯ ತೋಡಲು ಮುಂತಾದ ಕೆಲಸಗಳಿಂದ ತೊಡಗಿ, ಸಿಮೆಂಟು ಕಲಸುವ ಹೆಲ್ಪರಿನ ಹಂತಕ್ಕೇರಿ ಮುಂದೆ ತಾಪಿ/ಕರಣಿ/ಕುಮ್ಮಾಯಿಕತ್ತಿ ಹಿಡಿದು ಮೇಸ್ತ್ರಿಯಾಗುವವರು ಬೇಕಾದಷ್ಟಿದ್ದಾರೆ. ಇಲ್ಲೂ ಅಷ್ಟೇ; ಸ್ವಲ್ಪ ಎಂಟರ್ಪ್ರೈಸಿಂಗ್ ಆಗಿದ್ದವರು ಕಂಟ್ರಾಕ್ಟರುಗಳಾಗಿ ಆನಂತರ ಬಿಲ್ಡರುಗಳಾಗಿ ಬೆಳೆದದ್ದನ್ನೂ ನೋಡಿರುತ್ತೀರಿ. ಹಲವಾರು ಕ್ಷೇತ್ರಗಳಲ್ಲಿ ಇಂಥದ್ದೇ ಉದಾಹರಣೆಗಳನ್ನು ನಾವು ನೋಡಬಹುದು.
ಇದೆಲ್ಲ ಸಾಧ್ಯವಾಗುವುದು ಹೇಗೆ? ಬಹಳ ಮಂದಿ ಹೇಳುವುದು ಕೇಳಿರಬಹುದು ನೀವು– ನಿನ್ನ ಕೆಲಸಕ್ಕೆ ಗಮನ ಕೊಡು, ನಿನ್ನ ಕೆಲಸ ನೋಡು. ಅಧಿಕಪ್ರಸಂಗ ಮಾಡಬೇಡ ಇತ್ಯಾದಿ. ಆದರೆ ಈಗಾಗಲೇ ನಾನು ಹೇಳಿದಂತೆ, ಮೇಲೆ ಮೇಲೆ ಏರಿದವರು ಯಾರೂ ಹೀಗೆ ತಮ್ಮ ಕೆಲಸವನ್ನು ಮಾತ್ರ ನೋಡಿಕೊಂಡವರಲ್ಲ. ತನ್ನ ಕೆಲಸದ ಬಗ್ಗೆ ಮಾತ್ರ ಗಮನ ನೀಡಿದವನು ಮುಂದಿನ ಹಂತದ ಕೆಲಸವನ್ನು ಕಲಿಯುವುದೇ ಇಲ್ಲ. ನೋಡಿ ಕಲಿಯುವ ಮತ್ತು ಕೇಳಿ ತಿಳಿಯುವ ಮನೋಭಾವ ಬಹಳ ಮುಖ್ಯ ಇಲ್ಲಿ. ಬಸ್ಸಿನ ಚಾಲಕ ಯಾವಾಗ ಗೇರು ಬದಲಾಯಿಸುತ್ತಾನೆ, ಹೇಗೆ ಕ್ಲಚ್ಚು ಒತ್ತುತ್ತಾನೆ, ಇತ್ಯಾದಿ ಹಲವು ವಿಷಯಗಳ ಬಗ್ಗೆ ಗಮನ ನೀಡಿದ ಕ್ಲೀನರು ಬೇಗನೆ ಚಾಲಕನಾಗಬಲ್ಲ. ಅದೇರೀತಿ ಇತರ ಉದ್ಯೋಗಗಳು. ಅಪ್ರೆಂಟಿಸನಲ್ಲಿ ಕಲಿಯುವ ವಿನಯವಿದ್ದಾಗ ಕೆಲಸ ಕಲಿಸುವವರೂ ಉದಾಸೀನ ಮಾಡುವುದಿಲ್ಲ. ಇವನು ನನಗೆ ಸ್ಪರ್ಧಿಯಾಗುತ್ತಾನೆಂಬ ಆತಂಕವನ್ನೂ ಹೊಂದುವುದಿಲ್ಲ. ಬಹುಶಃ ಯಾವ ಬಗೆಯಲ್ಲೂ ತಾನು ಅಪ್ರೆಂಟಿಸ್ ಅನಿಸಿಕೊಳ್ಳಲಾರೆ, ಅಡಿಯಾಳಾಗಲೊಲ್ಲೆ ಅಂದುಕೊಳ್ಳುವ ಮನಸ್ಥಿತಿವಿದ್ದವರಿಗೆ ಯಾವುದೇ ಹೊಸ ಕೆಲಸ ಅಥವಾ ವಿದ್ಯೆ ಕಲಿಯುವುದು ಅಷ್ಟು ಸುಲಭವಾಗಲಾರದು ಅನಿಸುತ್ತದೆ.
ಕೆಲಸ ಕಲಿಯುವ ಉಮೇದಿನವರು ಇರುವಂತಯೇ ಕೆಲಸ ಕದಿಯುವ ಉಮೇದಿನವರೂ ಇರುತ್ತಾರೆ. ಇವರಲ್ಲಿ ಎರಡು ವಿಧ. ತಾನು ಮಾಡುತ್ತಿರುವ ಕೆಲಸದ ಬಗ್ಗೆ ನಿರಾಸಕ್ತಿ ಹೊಂದಿ ಮೇಲಿನ ಹಂತದ ಕೆಲಸವಾದರೆ ಮಾಡುತ್ತಿದ್ದೆ ಎಂದುಕೊಳ್ಳುವವರು ಒಂದು ಬಗೆಯಾದರೆ, ತಾವು ಮಾಡುತ್ತಿರುವದರಲ್ಲೂ ಆಸಕ್ತಿಯಿಂದ ತೊಡಗಿಸಿಕೊಳ್ಳದ ಮತ್ತು ಮುಂದಿನ ಹಂತದ ಬಗ್ಗೆಯೂ ತಲೆಕೆಡಿಸಿಕೊಳ್ಳದವರದು ಇನ್ನೊಂದು ಬಗೆ. ಈ ಎರಡೂ ಬಗೆಯವರೂ ಮೇಲು ಮೇಲಿನ ಹಂತಗಳಿಗೆ ಹೋಗುವ ಸಾಧ್ಯತೆ ಕಡಿಮೆಯಿರುತ್ತದೆ. ಹಾಗಂತ ಎಷ್ಟೇ ಶ್ರದ್ಧೆ ಆಸಕ್ತಿಯಿದ್ದವರೂ ಬೇರೆ ಬೇರೆ ತಾಪತ್ರಯಗಳಿಂದಾಗಿ ಇದ್ದಲ್ಲೇ ಇರಬೇಕಾಗುತ್ತದೆಯೆಂಬುದನ್ನೂ ನಾವು ಕಂಡಿದ್ದೇವೆ.
ಹೀಗೆ ವಿವಿಧ ಹಂತಗಳ ಅಪ್ರೆಂಟಿಸುಗಳೇ ಬೆಳೆದು ಉದ್ಯೋಗದಾತರಾಗುವ ಅಥವಾ ಕಾರ್ಮಿಕರೇ ಮಾಲಿಕರಾಗುವ ಅವಕಾಶ ಇರುವುದು, ಕಾರ್ಮಿಕರನ್ನು ಶೋಷಿಸುವ ವ್ಯವಸ್ಥೆಯೆಂದೇ ಜರೆಯಲ್ಪಡುವ ನಮ್ಮ ದೇಶದ ವಿಚಿತ್ರವಾದೊಂದು ಅರ್ಥವ್ಯವಸ್ಥೆಯ ಅಥವಾ ಉತ್ಪಾದನ ವ್ಯವಸ್ಥೆಯ ಒಂದು ವಿಶಿಷ್ಟ ಗುಣಲಕ್ಷಣವೇ ಇರಬೇಕು.