www.bantwalnews.com
ನೀವು ಸರಕಾರಿ ಶಾಲೆ ಉಳೀಬೇಕು ಅಂತೀರಿ, ಆದರೆ ನಿಮ್ಮ ಮಕ್ಕಳೇ ಸರಕಾರಿ ಶಾಲೆಗೆ ಹೋಗೋದಿಲ್ಲ ಯಾಕೆ, ಸರಕಾರಿ ಶಾಲೆಗಳು ಉಳಿಯಬೇಕಾದರೆ ಶಿಕ್ಷಕರ ಮಕ್ಕಳು ಸರಕಾರಿ ಶಾಲೆಗಳಲ್ಲಿ ಕಲಿಯುವಂತಾಗಬೇಕು ಎಂದು ವಿದ್ಯಾರ್ಥಿಗಳು ನೇರಳಕಟ್ಟೆ ಮಕ್ಕಳ ಗ್ರಾಮಸಭೆಯಲ್ಲಿ ಆಗ್ರಹಿಸಿದರು.
ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ ನೇರಳಕಟ್ಟೆ ಶಾಲೆಯಲ್ಲಿ ನಡೆದ ೨೦೧೭-೧೮ನೇ ಸಾಲಿನ ಮಕ್ಕಳ ಗ್ರಾಮಸಭೆಯಲ್ಲಿ ಶಿಕ್ಷಣ ಇಲಾಖಾ ಮಾಹಿತಿ ನೀಡಿದ ಸಿಆರ್‌ಪಿ ಸುಧಾಕರ್ ಭಟ್ ಅವರು ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಲು ವಿದ್ಯಾರ್ಥಿಗಳು ಮುಂದಾಗಬೇಕು. ತಮ್ಮ ನೆರೆ ಹೊರೆಯ ಮಕ್ಕಳನ್ನು ಸರಕಾರಿ ಶಾಲೆಗೆ ಬರುವಂತೆ ಪ್ರೇರೇಪಿಸಬೇಕು ಎಂದಾದ ಒಕ್ಕೊರಳಿನಿಂದ ಪ್ರತಿಕ್ರಯಿಸಿದ ವಿದ್ಯಾರ್ಥಿಗಳು ಶಿಕ್ಷಕರ ಮಕ್ಕಳು ಸರಕಾರಿ ಶಾಲೆಗೆ ಬರಬೇಕು ಎಂದು ಆಗ್ರಹಿಸಿ ಸಭೆಯ ಗಮನ ಸೆಳೆದರು. ಶೌಚಾಲಯದ ಬಾಗಿಲು, ನಳ್ಳಿಗಳನ್ನು ದುರಸ್ತಿಪಡಿಸುವಂತೆ ಇದೇ ವೇಳೆ ವಿದ್ಯಾರ್ಥಿಗಳು ಆಗ್ರಹಿಸಿದರು.
ನೇರಳಕಟ್ಟೆ ಶಾಲಾ ೮ನೇ ತರಗತಿ ವಿದ್ಯಾರ್ಥಿನಿ ಸಿಹಾನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಮಂತ್ರಿ ಸಂದೇಶ್ ಏಮಾಜೆ, ಶಾಲಾ ವಿದ್ಯಾರ್ಥಿನಿ ಚೈತನ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನೆಟ್ಲಮುಡ್ನೂರು ಗ್ರಾ ಪಂ ಉಪಾಧ್ಯಕ್ಷೆ ರೇವತಿ, ಸದಸ್ಯರುಗಳಾದ ಕೆ ಶ್ರೀಧರ ರೈ ಕುರ್ಲೆತ್ತಿಮಾರು, ಲತೀಫ್ ನೇರಳಕಟ್ಟೆ, ಡಿ ತನಿಯಪ್ಪ ಗೌಡ, ಶಶಿಕಲಾ, ಶಿಕ್ಷಕಿ ಗೀತಾ ಉಪಸ್ಥಿತರಿದ್ದರು.
ಕಿರಿಯ ಆರೋಗ್ಯ ಸಹಾಯಕಿ ಪವಿತ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸೋಮಕ್ಕ ಇಲಾಖಾ ಮಾಹಿತಿ ನೀಡಿದರು. ಗ್ರಾ ಪಂ ಅಭಿವೃದ್ದಿ ಅಧಿಕಾರಿ ಮರಿಯಮ್ಮ ಕಾರ್ಯಕ್ರಮ ನಿರೂಪಿಸಿದರು.