ಕವರ್ ಸ್ಟೋರಿ

ರೈಲು ಬಳಸಿ, ಹಣ ಉಳಿಸಿ

  • ಹರೀಶ ಮಾಂಬಾಡಿ

ಬಂಟ್ವಾಳನ್ಯೂಸ್

ಬಂಟ್ವಾಳದ ಜನರಿಗಂತೂ ಇಲ್ಲಿನ ರೈಲ್ವೆ ನಿಲ್ದಾಣ ಅಪರಿಚಿತ. ನಿತ್ಯಪ್ರಯಾಣಕ್ಕೆ ರೈಲು ಉಪಯೋಗಿಸುವಂತಾಗಲು ರೈಲ್ವೇ ಮತ್ತು ಊರಿನವರ ಸಮನ್ವಯತೆಯೂ ಅಗತ್ಯ.

ಸಾಮಾನ್ಯವಾಗಿ ಕೇರಳಕ್ಕೆ ರೈಲ್ವೆ ಅಭಿವೃದ್ಧಿ ಯೋಜನೆಗಳು ಸರಿದಾಗಲೆಲ್ಲಾ ನಾವು ತಳಮಳಗೊಳ್ಳುತ್ತೇವೆ. ಆದರೆ ನಮ್ಮ ಕಣ್ಣೆದುರೇ ರೈಲು ಓಡುತ್ತಿದ್ದರೂ ಅದರ ಸದ್ಬಳಕೆ ಮಾಡಿಕೊಳ್ಳಲು ವಿಫಲರಾಗಿದ್ದೇವೆಯೇ? ಅಥವಾ ರೈಲ್ವೆ ಇಲಾಖೆ ಜನಸ್ನೇಹಿಯಾಗಿ ಇಲ್ಲವೇ ಎಂಬುದನ್ನು ಜನಪ್ರತಿನಿಧಿಗಳಷ್ಟೇ ಅಲ್ಲ ಸಾರ್ವಜನಿಕ ಸಂಘ, ಸಂಸ್ಥೆಗಳ ಪ್ರತಿನಿಧಿಗಳೂ ಯೋಚಿಸಬೇಕಾಗಿದೆ.

ಹೀಗಾಗಿಯೇ ಪೇಟೆಯ ಮಧ್ಯೆ ಇದ್ದರೂ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ರೈಲು ನಿಲ್ದಾಣ ಬೆಂಗಳೂರು ಪ್ರಯಾಣಿಕರು ಮತ್ತು ಸೀಸನ್ ಟಿಕೆಟ್ ಪಡೆದು ಮಂಗಳೂರು, ಪುತ್ತೂರುಗಳಿಗೆ ತೆರಳುವವರಿಗಷ್ಟೇ ಮೀಸಲಾಗಿದೆ. ಜಿಲ್ಲೆಯ ಇತರ ರೈಲು ನಿಲ್ದಾಣಗಳಿಗೆ ಹೋಲಿಸಿದರೆ, ಬಂಟ್ವಾಳ ರೈಲು ನಿಲ್ದಾಣ ಪೇಟೆ ಮಧ್ಯವೇ ಇದೆ.

ಏನು ಬೇಕು:

ಎರಡನೇ ಪ್ಲಾಟ್‌ಫಾರ್ಮ್ ಅಭಿವೃದ್ಧಿಯ ಅಗತ್ಯವಿದೆ. ಒಂದು ಪ್ಲಾಟ್‌ಫಾರ್ಮ್‌ನಿಂದ ಇನ್ನೊಂದು ಕಡೆಗೆ ಹೋಗಬೇಕಾದರೆ ರೈಲು ಹಳಿಯ ಮೇಲೆಯೇ ಸಾಗಬೇಕು. ಅದರ ಬದಲು ಫೂಟ್ ಓವರ್‌ಬ್ರಿಡ್ಜ್ ಇದ್ದರೆ ಚೆನ್ನಾಗಿರುತ್ತದೆ. ರೈಲ್ವೇ ಜಾಗಕ್ಕೆ ಅಪರಿಚಿತರು ಬಂದು ಹೋಗದಂತೆ ಸ್ಟೇಶನ್ ನಲ್ಲೇ ರೈಲ್ವೆ ಪೊಲೀಸ್ ಒಬ್ಬರು ದಿನನಿತ್ಯ ಇರುವಂಥ ವ್ಯವಸ್ಥೆ ಅಗತ್ಯವಿದೆ. ಸಾಮಾನ್ಯವಾಗಿ ದೂರಪ್ರಯಾಣದ ರೈಲು ತಡವಾಗಿ  ಬರುತ್ತದೆ ಎಂದಾಗ ಅಲ್ಲಿ ತಂಗುವ ಪ್ರಯಾಣಿಕರಿಗೆ ಸೂಕ್ತ ಭದ್ರತೆ ಹಾಗೂ ಅವರ ಕಡೆ ನಿಗಾ ಇರಿಸುವ ಜನಸ್ನೇಹಿ ಸಿಬ್ಬಂದಿಯ ಅವಶ್ಯಕತೆ ಇದೆ.

ಬಿ.ಸಿ.ರೋಡ್ಮಂಗಳೂರು ಮಾರ್ಗ

  • ಬಿ.ಸಿ.ರೋಡಿನಿಂದ ಮಂಗಳೂರು ಸೆಂಟ್ರಲ್ (ಅತ್ತಾವರ)ಗೆ ಬೆಳಗ್ಗೆ 7.03 ಗಂಟೆಗೆ ಬೆಂಗಳೂರುಕಣ್ಣೂರು ಎಕ್ಸ್ ಪ್ರೆಸ್ ರೈಲಿದೆ. ಇದರ ದರ 30 ರೂಪಾಯಿ. ಮಂಗಳೂರಿಗೆ 8.13 ರ ಹೊತ್ತಿಗೆ ತಲುಪುತ್ತದೆ.
  • ಅದಾದ ಬಳಿಕ ಪುತ್ತೂರಿನಿಂದ ಮಂಗಳೂರು ಸೆಂಟ್ರಲ್ ಗೆ ತೆರಳುವ ಪ್ಯಾಸೆಂಜರ್ ರೈಲು ಬೆಳಗ್ಗೆ 8.25ಕ್ಕೆ ಬಂದು 8.32ಕ್ಕೆ ತೆರಳುತ್ತದೆ. ಇದು ಮಂಗಳೂರು ಸೆಂಟ್ರಲ್ ಗೆ ತಲುಪುವಾಗ 9.25 ಆಗಿರುತ್ತದೆ. ಕಚೇರಿಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲ. ಪ್ರಯಾಣದರ ಕೇವಲ 10 ರೂ.
  • ಬಳಿಕ ಮಂಗಳೂರಿಗೆ ಮಧ್ಯಾಹ್ನ 2.48ಕ್ಕೆ ಆಗಮಿಸುವ ಸುಬ್ರಹ್ಮಣ್ಯಮಂಗಳೂರು ರೈಲು 2.50ಕ್ಕೆ ತೆರಳುತ್ತದೆ. ಸಂಜೆ 4 ಗಂಟೆಗೆ ರೈಲು ಮಂಗಳೂರು ಸೆಂಟ್ರಲ್ ನಲ್ಲಿರುತ್ತದೆ. ಪ್ರಯಾಣದರ 10 ರೂಪಾಯಿ.
  • ಶನಿವಾರ ಹೊರತುಪಡಿಸಿ ಪ್ರತಿದಿನ ಸಂಜೆ ಮಂಗಳೂರು ಕಂಕನಾಡಿ ರೈಲ್ವೆ ನಿಲ್ದಾಣಕ್ಕೆ ಬೆಂಗಳೂರಿನಿಂದ ಆಗಮಿಸುವ ರೈಲು ಬರುತ್ತದೆ. 3.58ಕ್ಕೆ ಬರುವ ರೈಲು 4 ಗಂಟೆಗೆ ಮಂಗಳೂರಿಗೆ ತೆರಳುತ್ತದೆ.4.55ಕ್ಕೆ ಕಂಕನಾಡಿ ಜಂಕ್ಷನ್ ನಲ್ಲಿರುತ್ತೀರಿ. ಪ್ರಯಾಣದರ 30 ರೂ.
  • ಅದಾದ ಬಳಿಕ ರಾತ್ರಿ 8.38ಕ್ಕೆ ಆಗಮಿಸುವ ಪುತ್ತೂರುಮಂಗಳೂರು ರೈಲು ಅತ್ತಾವರ(ಸೆಂಟ್ರಲ್)ಗೆ 9.40ಕ್ಕೆ ತಲುಪುತ್ತದೆ. 10 ರೂಪಾಯಿ ಟಿಕೆಟು ದರ.

 

ಮಂಗಳೂರುಬಿ.ಸಿ.ರೋಡ್ಪುತ್ತೂರುಬೆಂಗಳೂರು ಮಾರ್ಗ

  • ಮಂಗಳೂರಿನಿಂದ ಬೆಳಗ್ಗೆ 6 ಗಂಟೆಗೆ ಹೊರಡುವ ಪ್ಯಾಸೆಂಜರ್ ರೈಲು ಬಿ.ಸಿ.ರೋಡಿಗೆ 6.45ಕ್ಕೆ ಆಗಮಿಸುತ್ತದೆ. ಪ್ರಯಾಣದರ 10 ರುಪಾಯಿ. ಇಲ್ಲಿಂದ ಹೊರಟು ಪುತ್ತೂರಿಗೆ 7.30ಕ್ಕೆ ತಲಪುತ್ತದೆ. ಬಿ.ಸಿ.ರೋಡ್ಪುತ್ತೂರು ಪ್ರಯಾಣದರವೂ 10 ರೂಪಾಯಿ.
  • ಮಂಗಳೂರು ಸೆಂಟ್ರಲ್ ನಿಂದ ಬೆಳಗ್ಗೆ 10.05ಕ್ಕೆ ಹೊರಡುವ ಸುಬ್ರಹ್ಮಣ್ಯ ರೈಲು 10.48ಕ್ಕೆ ಬಿ.ಸಿ.ರೋಡ್, ಸುಬ್ರಹ್ಮಣ್ಯಕ್ಕೆ 12.25ಕ್ಕೆ ರೈಲು ತಲುಪುತ್ತದೆ. ಮಂಗಳೂರುಬಿ.ಸಿ.ರೋಡಿಗೆ 10 ರೂ, ಬಿ.ಸಿರೋಡ್ ಸುಬ್ರಹ್ಮಣ್ಯಕ್ಕೆ 20 ರೂಪಾಯಿ ಚಾರ್ಜು.
  • ಅದಾದ ಬಳಿಕ ಮಂಗಳೂರಿನಿಂದ ಆಗಮಿಸುವ ಯಶವಂತಪುರ ರೈಲು 11.53ಕ್ಕೆ ಬಿ.ಸಿ.ರೋಡ್ ತಲುಪುತ್ತದೆ. 11.55ಕ್ಕೆ ಹೊರಟರೆ ಯಶವಂತಪುರಕ್ಕೆ ರಾತ್ರಿ 8.20ಕ್ಕೆ ತಲುಪುತ್ತದೆ. ಬಿ.ಸಿ.ರೋಡ್ ಯಶವಂತಪುರ ಪ್ರಯಾಣದರ ಜನರಲ್130 ರೂ, ರಿಸರ್ವೇಶನ್ 145 ರೂ, .ಸಿ 525 ರೂ. ಇದು ಮಂಗಳೂರು ಜಂಕ್ಷನ್ ನಿಂದ 11.30ಕ್ಕೆ ಹೊರಡುತ್ತದೆ. ನೆನಪಿಡಿ ಭಾನುವಾರ ರೈಲು ಓಡಾಟ ಇಲ್ಲ.
  • ಬಳಿಕ ಕಬಕಪುತ್ತೂರು ಪ್ಯಾಸೆಂಜರ್ (ಮಂಗಳೂರಿಂದ .೧೦ಕ್ಕೆ ಸಂಜೆ ಹೊರಡುವುದು) ಬಿ.ಸಿ.ರೋಡಿಗೆ 6.50ಕ್ಕೆ ಬರುತ್ತದೆ. ಪುತ್ತೂರಿಗೆ 7.40ಕ್ಕೆ ತಲುಪುವ ರೈಲು ಕಚೇರಿ ಉದ್ಯೋಗಿಗಳಿಗಷ್ಟೇ ಅಲ್ಲ ಮಂಗಳೂರಿನಲ್ಲಿ ಕೆಲಸ ಮುಗಿಸಿ ಮರಳುವವರಿಗೂ ಅನುಕೂಲ. ಪ್ರಯಾಣದರ 10 ರೂ.
  • ರಾತ್ರಿ ಪ್ರತಿದಿನ ಮಂಗಳೂರು ಸೆಂಟ್ರಲ್ ನಿಂದ 8.55ಕ್ಕೆ ಹೊರಡುವ ರೈಲು ಬಿ.ಸಿ.ರೋಡಿಗೆ 9.38ಕ್ಕೆ ಬರುತ್ತದೆ. 9.40ಕ್ಕೆ ಹೊರಟರೆ ಬೆಂಗಳೂರು ಮೆಜೆಸ್ಟಿಕ್ (ಎಸ್ ಬಿಸಿ) ತಲುಪುವಾಗ ಬೆಳಗ್ಗೆ 8.20. ಇದರ ಪ್ರಯಾಣದರ ಜನರಲ್ 145 ಸ್ಲೀಪರ್ 275, ತ್ರೀ ಟಯರ್ ಎಸಿ 745 ಮತ್ತು ಟೂ ಟಯರ್ ಎಸಿ 1070 (ಬೆಂಗಳೂರಿಗೆ)

 

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.