ಅರಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಫಲ್ಗುಣಿ ನದಿಯಲ್ಲಿ ಈಜಲೆಂದು ತೆರಳಿದ್ದ ಐವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆಯ ಶಾಕ್ ನಿಂದ ಮುಲ್ಲರಪಟ್ಣ ಹೊರಬಂದಿಲ್ಲ. ಬುಧವಾರವೂ ಶುಂಠಿಹಿತ್ಲು, ಮುಲ್ಲರಪಟ್ಣ ಪರಿಸರದಲ್ಲಿ ನೀರವ ಮೌನ ಆವರಿಸಿತ್ತು.
ಸರಕಾರಿ ಕಾರ್ಯಕ್ರಮ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಸಚಿವ ರಮಾನಾಥ ರೈ ಅವರು ಮಂಗಳವಾರ ರಾತ್ರಿ ಆಗಮಿಸಿ ಮೃತ ಬಾಲಕರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಹಾಗೆಯೇ ಕುಟುಂಬಗಳಿಗೆ ಗರಿಷ್ಠ ಪ್ರಮಾಣದ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.
ಮುಲ್ಲರಪಟ್ಣ, ಶುಂಠಿಹಿತ್ಲು ಪರಿಸರ ನಿವಾಸಿಗಳಾದ ಮುಹಮ್ಮದ್ ಸವಾದ್, ಅಝ್ಮಲ್, ಮುದಸ್ಸಿರ್, ರಮೀಝ್ ಮತ್ತು ಅಸ್ಲಂ ಮೃತಪಟ್ಟ ಬಾಲಕರಾಗಿದ್ದರು.
ಸೋಮವಾರ ಕನಕ ಜಯಂತಿಯ ಪ್ರಯುಕ್ತ ಶಾಲೆಗೆ ರಜೆಯಿದ್ದ ಕಾರಣ ಎಲ್ಲರು ಜೊತೆಯಾಗಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸ್ಥಳೀಯ ಮೈದಾನವೊಂದರಲ್ಲಿ ಎಲ್ಲರು ಒಟ್ಟಾಗಿ ಆಟವಾಡಿ, ಬಳಿಕ ಈಜಾಡಲೆಂದು ಫಲ್ಗುಣಿ ನದಿಗೆ ತೆರಳಿದ್ದ ವೇಳೆ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ಬೆಳಿಗ್ಗೆ ಸವಾದ್ ಶವ ಪತ್ತೆಯಾಗಿದ್ದರೆ, ಮಧ್ಯಾಹ್ನ ಸುಮಾರು 12 ಗಂಟೆಯ ಹೊತ್ತಿಗೆ ಪೊದೆಯೊಂದರಲ್ಲಿ ಅಝ್ಮಲ್, ರಮೀಝ್ ಹಾಗೂ ಅಸ್ಲಂ ಈ ಮೂವರ ಮೃತದೇಹ ಜೊತೆಯಲ್ಲೆ ಪತ್ತೆಯಾಗಿತ್ತು. ಬಾಲಕ ಮುದಸ್ಸಿರ್ ಎಂಬಾತನ ಮೃತದೇಹವನ್ನು ಪಾಣೆ ಮಂಗಳೂರು ಗೂಡಿನ ಈಜುಗಾರರ ತಂಡ ಹಾಗೂ ಬಂಟ್ವಾಳ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ರಾತ್ರಿ 9 ಗಂಟೆಗೆ ಪತ್ತೆಹಚ್ಚಿ ಮೇಲೆಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದರು.