ಬಂಟ್ವಾಳ ತಾಲೂಕಿನ ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ನ ಸೇವಾ ಯೋಜನೆಯಡಿ ಶಾಲಾ ಮಕ್ಕಳಿಗೆ ಬೆಳಗ್ಗಿನ ಉಪಾಹಾರ ಒದಗಿಸುವ ಯೋಜನೆಗೆ ಚಾಲನೆ ನೀಡಲಾಯಿತು.
ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ನಿವೃತ್ತ ಪ್ರಾಂಶುಪಾಲ ಸೋಮಶೇಖರ ಪ್ರಭು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಭಗವಾನ್ ಶ್ರೀ ಸತ್ಯಸಾಯಿಬಾಬಾ ಅವರ ಪ್ರೇರಣೆ ಮತ್ತು ಮಾರ್ಗದರ್ಶನದಿಂದ ಸಮಾನ ಮನಸ್ಕ ಭಕ್ತರಿಂದ ನಡೆಸಲ್ಪಡುತ್ತಿದ್ದು, ಪ್ರತಿ ಜಿಲ್ಲೆಯಲ್ಲೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಉದ್ದೇಶ ಹೊಂದಿದೆ. ಮಕ್ಕಳ ಶೈಕ್ಷಣಿಕ ಸವಲತ್ತುಗಳ ಮೂಲಕ ಕಲಿಕಾ ವಿಷಯಕ್ಕೆ ತಮ್ಮ ಗಮನವನ್ನು ಕೇಂದ್ರೀಕೃತಗೊಳಿಸಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂಬುದು ಟ್ರಸ್ಟ್ ಆಶಯ ಎಂದು ಪ್ರಭು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೊಂಡಾಲ ಜಗನ್ನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಎಸ್.ಡಿ.ಎಮ್.ಸಿಯ ಕಾರ್ಯಾಧ್ಯಕ್ಷರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಶಾಲಾ ಮಕ್ಕಳಿಗೆ ಉಪಾಹಾರ ಯೋಜನೆ ಒದಗಿಸಿದ ಟ್ರಸ್ಟ್ ಕುರಿತು ಕೃತಜ್ಞತೆ ಸಲ್ಲಿಸಿದರು. ಯೋಜನೆಯನ್ನು ಶಾಲೆಗೆ ತರಲು ಕಾರಣೀಕರ್ತರಾದ ನಾರಾಯಣ ಗೌಡ ಮಾತನಾಡಿ, ಬಂಟ್ವಾಳ ತಾಲೂಕಿನ 9 ಕಡೆಗಳಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದರು.
ಈ ಸಂದರ್ಭ ತಾಲೂಕು ಪಂಚಾಯತ್ ಸದಸ್ಯೆ ಗಾಯತ್ರಿ ರವೀಂದ್ರ ಸಫಲ್ಯ, ಗ್ರಾಪಂ ಸದಸ್ಯರಾದ ಗೀತಾ, ವಿಶಾಲಾಕ್ಷಿ, ಜಯರಾಜ್, ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಏಲಬೆ ಪದ್ಮನಾಭ ಮಯ್ಯ, ಶಿಕ್ಷಣ ಸಂಯೋಜಕಿ ಪುಷ್ಪಾ, ಪತ್ರಕರ್ತರಾದ ಹರೀಶ ಮಾಂಬಾಡಿ, ಮೌನೇಶ ವಿಶ್ವಕರ್ಮ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಕಮಲಾಕ್ಷ ಸ್ವಾಗತಿಸಿದರು. ಶಿಕ್ಷಕ ಹರಿಪ್ರಸಾದ್ ವಂದಿಸಿದರು. ಶಿಕ್ಷಕ ಸದಾಶಿವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಸತ್ಯಸಾಯಿಬಾಬಾ ಮತ್ತು ಕೊಲ್ಲೂರು ಮೂಕಾಂಬಿಕಾ ದೇವರ ಭಾವಚಿತ್ರಗಳಿಗೆ ಪುಷ್ಪನಮನ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ಉಪಾಹಾರ ಮಂದಿರದಲ್ಲಿ ಪೋಷಕರಿಂದಲೇ ಉಪಾಹಾರ ವಿತರಿಸಲಾಯಿತು.