ಒಂದೆಡೆ ಡಾಂಬರು ತೇಪೆ ಹಾಕುವ ಕಾರ್ಯ ನಡೆಯುತ್ತಿದ್ದರೆ, ಇನ್ನೊಂದೆಡೆ ಕಿತ್ತುಹೋಗಿ ಹೊಂಡ ಏಳುತ್ತಿದೆ.
ಇದು ಕುದ್ದುಪದವು ಬಾಳಶೆಟ್ಟಿಮೂಲೆ ರಸ್ತೆಯ ಕತೆ. ಜನರ ಬಹು ಬೇಡಿಕೆಯ ನಂತರ ಅನುದಾನ ಬಿಡುಗಡೆಯಾಗಿ ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದೆಯಾದರೂ, ಡಾಮರ್ ಹಾಕಿ ಮುಂದುವರಿಯುತ್ತಿದ್ದಂತೆ ಹಿಂದಿನದು ಏಳಲಾರಂಬಿಸಿದೆ.
ಕರ್ನಾಟಕ ಕೇರಳ ಸಂಪರ್ಕಿಸುವ ಅಂತರಾಜ್ಯ ರಸ್ತೆಯ ಕುದ್ದುಪದವು – ಪೆರುವಾಯಿ – ಬಾಳಶೆಟ್ಟಿಮೂಲೆ ವರೆಗಿನ 8.78 ಕಿಮೀಯನ್ನು 2009ರಲ್ಲಿ ಸುಮಾರು 399.55 ಲಕ್ಷ ರೂಪಾಯಿ ವೆಚ್ಚದಲ್ಲಿ ಮರು ನಿರ್ಮಾಣ ಮಾಡಲಾಗಿತ್ತು ಆದರೆ ಮೂರು ವರ್ಷಗಳ ಬಳಿಕ ರಸ್ತೆ ತನ್ನ ನಿಜಸ್ವರೂಪ ಪ್ರದರ್ಶಿಸಿತು.
ಕಳಪೆ ಕಾಮಗಾರಿ ಆಗಿರುವ ಬಗ್ಗೆ ಲೋಕಾಯುಕ್ತಕ್ಕೆ ಸಾಮಾಜಿಕ ಹೋರಾಟಗಾರ ಮುರುವ ಮಹಾಬಲ ಭಟ್ ಅವರು ದೂರು ನೀಡಿ ಎರಡು ಬಾರಿ ತನಿಖೆಯೂ ನಡೆಯುತು. ಆದರೆ ಭಾಗಶಃ ರಸ್ತೆ ಸರಿ ಇದೆ ಎಂಬ ರಿಪೋರ್ಟ್ ಬಂತು. ಆದರೂ ಪಟ್ಟುಬಿಡದಜನರು ನಾಲ್ಕು ಐದು ವರ್ಷಗಳಿಂದ ಹಳ್ಳಗಳಲ್ಲಿ ಎದ್ದು ಬಿದ್ದು ಸಂಚರಿಸುತ್ತಾ, ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸುತ್ತಲೇ ಬಂದರು.
ಕೊನೆಗೂ 14 ಲಕ್ಷ ರೂ ಶಾಸಕರ ವಿಶೇಷ ಅನುದಾನದಲ್ಲಿ ಗುಂಡಿ ಮುಚ್ಚುವ ಕಾರ್ಯ ಜಿಲ್ಲಾ ಪಂಚಾಯಿತಿ ಇಂಜಿನಿಯರ್ಗಳ ಉಸ್ತುವಾರಿಯಲ್ಲಿ ಆರಂಭವಾಯಿತು. ಮಾರನೆ ದಿನ ಅದರ ಮೇಲೆ ಘನ ವಾಹನ ಹೋಗುವಾಗಲೇ ಅದರ ನಿಜ ಬಣ್ಣ ಜನರಿಗೆ ತಿಳಿದಿದ್ದು.