ಕುಪ್ಪೆಪದವು ಮಂಗಳೂರು ಮರೈನ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1 ರಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಿಗ್ಗೆ 9 ಘಂಟೆಗೆ ಧ್ವಜಾರೋಹಣವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜಕಿರಣ್ ಬಲ್ಲಾಳ್ ಅವರು ನೆರವೇರಿಸಿದರು. ನಂತರ ವಿದ್ಯಾರ್ಥಿಗಳೆಲ್ಲರೂ ನಾಡಗೀತೆಯನ್ನು ಹಾಡಿದರು. ಇದಾದ ನಂತರ, ಕುಪ್ಪೆಪದವು ಪೇಟೆಯಿಂದ ಕಾಲೇಜಿನವರೆಗೆ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರವನ್ನು ತೆರೆದ ಮೆರವಣಿಗೆಯಲ್ಲಿ ಹುಲಿವೇಷ, ಯಕ್ಷಗಾನ ವೇಷಗಳ ಸಮೇತ ಬ್ಯಾಂಡ್ ಸೆಟ್ ನೊಂದಿಗೆ ಕರೆತರಲಾಯಿತು.
ಕನ್ನಡದ ಹಿರಿಮೆಯ ಹಾಡುಗಳನ್ನು ಹಾಡುತ್ತ, ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಸಾಗಿ ಬಂದರು. ಕಾಲೇಜಿನ ಪರಿಸರವನ್ನು ಕನ್ನಡದ ಬಾವುಟಗಳಿಂದ ಅಲಂಕರಿಸಲಾಗಿತ್ತು.
ಮಧ್ಯಾಹ್ನ ಭೋಜನಕ್ಕೆ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ-ಶೇಂಗಾ ಚಟ್ನಿ-ಮೊಸರು ಮತ್ತು ದಕ್ಷಿಣ ಕರ್ನಾಟಕದ ಅನ್ನ-ಸಾರು-ಸಾಂಬಾರಿನ ವ್ಯವಸ್ಥೆ ಮಾಡಲಾಗಿತ್ತು.
ಮಧ್ಯಾಹ್ನ ನಡೆದ ಸಭಾಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಲಯದ ಮೇಲ್ವಿಚಾರಕರಾದ ಶ್ರೀ ನಾಗರಾಜ್ ತಲ್ಲಂಜೆ ಯವರು ಭಾಗವಹಿಸಿ ಕನ್ನಡ ನಾಡು-ನುಡಿಯ ಬಗ್ಗೆ, ಕನ್ನಡದ ಹಿರಿಮೆಯ ಬಗ್ಗೆ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜಕಿರಣ್ ಬಲ್ಲಾಳ್, ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಕೃಷ್ಣರಾಜ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಸುನಿಲ್ ನಾಯಕ್ ಮತ್ತು ಮರೈನ್ ವಿಭಾಗದ ಮುಖ್ಯಸ್ಥರಾದ ಪ್ರೊ. ಅಮಲ್ರಾಜ್ ರೊಡ್ರಿಗಸ್, ಭಾಗವಹಿಸಿದ್ದರು.
ಪ್ರಾಧ್ಯಾಪಕರಾದ ವಿಶ್ವನಾಥ್ ನಾಯಕ್ ಸ್ವಾಗತಿಸಿ, ನಾಗರಾಜ್ ಎಸ್ ವಂದಿಸಿದರು. ವಿದ್ಯಾರ್ಥಿನಿ ಶಿಲ್ಪ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಿಂದ ಮತ್ತು ಪ್ರಾಧ್ಯಾಪಕ ವೃಂದದವರಿಂದ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.