ಮಕ್ಕಳ ಮಾತು

ಅವನಿಗೆ ಕಲಿಸಬೇಕಾದ್ದನ್ನೇ ಕಲಿಸ್ಲಿಲ್ಲ..!

  • ಮೌನೇಶ ವಿಶ್ವಕರ್ಮ

www.bantwalnews.com

ಜಾಹೀರಾತು

ತನ್ನ ಮಗನಿಗೆ ಬೆಂಗಳೂರಿನ ಸಾಫ್ಟ್‌ವೇರ್ ಕಂಪೆನಿಯಲ್ಲಿ  ಕೆಲಸ ಸಿಕ್ಕಿದೆ, ಮೂರು ತಿಂಗಳು ಚೆನೈ ನಲ್ಲಿ ಟ್ತೈನಿಂಗ್ ಉಂಟಂತೆ.. ಅವನಿಗೊಂದು ಜಾಬ್ ಆದ್ರೆ ನಮ್ಮ ದೊಡ್ಡ ಜವಬ್ದಾರಿ ಮುಗಿದ ಹಾಗೆ.. ತೆಗೊಳ್ಳಿ ಸ್ವೀಟ್ಸ್ .. ಎಂದು  ತಿಂಗಳ ಹಿಂದೆ  ಕಾಲೇಜಿನ ಎಲ್ಲಾ ಲೆಕ್ಚರರ್ಸ್ ಗೆ ಸ್ವೀಟ್ ಹಂಚಿದ್ದ ರೇಣುಕಾ(ಹೆಸರು ಬದಲಾಯಿಸಿದೆ)ಮೇಡಂ, ಆ ದಿನವೇಕೋ ಬೆಳಗ್ಗೆ ಬರೋವಾಗ್ಲೆ ಫೋನ್ ನಲ್ಲಿ ಬ್ಯುಸಿಯಾಗಿದ್ದರು.

“ನೋಡು.. ಬಕೆಟ್ ಉಂಟಾ ಅಲ್ಲಿ.. ನಳ್ಳಿಯಿಂದ ಸ್ವಲ್ಪ ನೀರು ಬಿಡು.. ಅರ್ಧದಷ್ಟು ತುಂಬಿದ್ರೆ ಸಾಕು.. ಮತ್ತೆ sಸರ್ಫ್ ಹುಡಿ ಹಾಕು..  ಇನ್ನು ಆ ಬಟ್ಟೆ ಹಾಕಿ ಇಡು.. ಕಾಲು ಗಂಟೆ ಬಿಟ್ಟು ಕಾಲ್ ಮಾಡ್ತೇನೆ, ಅಷ್ಟರವರೆಗೆ ಅದು ಹಾಗೆ ಇರಲಿ.. ಅನ್ನುತ್ತಾ ಫೋನ್ ಇಟ್ಟರು. ಅಷ್ಟಕ್ಕೇ ಅವರನ್ನು  ಒಬ್ರು ಮೇಡಂ ಕೇಳಿಯೇ ಬಿಟ್ರು.. ಯಾರ್‍ದು  ಫೋನ್ ಏನಂತೆ.. ಫೋನಲ್ಲೂ ಲೆಕ್ಚರ್ ಶುರು ಮಾಡಿದ್ರಾ..?

ಅಷ್ಟಕ್ಕೇ ಅವರಂದ್ರು.. ಮಗನಿಗೆ ಚೆನ್ನಾಗಿ ಕಲಿಸಿದೆ, ದೂರ ಕೆಲ್ಸ ಸಿಕ್ತು ಅಂತಾನೂ ಖುಷಿ ಪಟ್ಟೆ, ಆದ್ರೆ ಅವನಿಗೆ ಕಲಿಸಬೇಕಾದ್ದನ್ನೇ ಕಲಿಸ್ಲಿಲ್ಲ ಅಂತ ಈಗ ಅನ್ನಿಸ್ತಾ ಇದೆ.. ನನ್ನ ಮಗ ಫೋನ್ ಮಾಡಿದ್ದ, ಅಮ್ಮ ಬಟ್ಟೆ ಒಗೆಯೋದು ಹೇಗೆ ಅಂತ.. ನಾನು ತಪ್ಪು ಮಾಡಿದೆ, ಅವನ ಕೆಲ್ಸಾನ ಅವನೇ ಮಾಡೋಕೆ  ನಾ ಹೇಳಿ ಕೊಡ್ಲೇ ಇಲ್ಲ.. ಎನ್ನುತ್ತಾ ಮುಖ ಚಪ್ಪೆ ಮಾಡಿಕೊಂಡರು ಅವರು.

ಜಾಹೀರಾತು

ಈ ಘಟನೆಯನ್ನು ಮನಕಲಕುವ ಹಾಗೆ ಬಿಚ್ಚಿಟ್ಟದ್ದು, ಮಂಗಳೂರಿನ ಕಾಲೇಜು ಉಪನ್ಯಾಸಕಿಯೊಬ್ಬರು. ಇದು ಅವರದೇ ಕಾಲೇಜಿನ ಮತ್ತೋರ್ವ ಉಪನ್ಯಾಸಕಿಯ ಕಥೆ-ವ್ಯಥೆ ಎನ್ನುತ್ತಾರೆ ಅವರು.

ಗಂಡು-ಹೆಣ್ಣು ಎಂಬ ಲಿಂಗತಾರತಮ್ಯಕ್ಕೆ ಮನೆಯೇ ಮೊದಲ ಪಾಠ ಶಾಲೆ. ಮನೆಕೆಲಸದಿಂದ ಹಿಡಿದು, ಪ್ರತಿಯೊಂದು ಆಗುಹೋಗುಗಳನ್ನು  ತಾರತಮ್ಯದ ದೃಷ್ಟಿಯಿಂದ ನೋಡುವ ಮನೆಮಂದಿ ಮಕ್ಕಳಲ್ಲಿ ಆ ಬಗೆಯ ಭಾವನೆಯನ್ನೇ ತುಂಬಿರುತ್ತಾರೆ. ಇನ್ನು ಒಬ್ಬನೇ ಮಗ, ಒಬ್ಬನೇ ಮಗಳು ಇದ್ದ ಮನೆಗಳಲ್ಲೂ ಅಷ್ಟೇ ಅತಿಯಾದ ಮುದ್ದು ಮಾಡುವ ಭರದಲ್ಲಿ ಮಕ್ಕಳಿಗೆ ಕಷ್ಟವಾಗಬಾರದೆಂದು ಯಾವುದೇ ಚಿಕ್ಕ ಚಿಕ್ಕ ಕೆಲಸವನ್ನೂ ಮಕ್ಕಳಿಗೆ ನೀಡುವುದಿಲ್ಲ. ಹೀಗಾಗಿ ಮನೆಕೆಲಸದಿಂದ ತೊಡಗಿ ಎಲ್ಲವುಗಳಿಂದ ದೂರವುಳಿಯುವ ಮಕ್ಕಳು ಕೇವಲ ಪುಸ್ತಕದ ಬದನೆಕಾಯಿಯನ್ನು ಮಾತ್ರ ತಮ್ಮ ಜ್ಞಾನವನ್ನಾಗಿಸುತ್ತಾರೆ. ಇದು ಹಿರಿಯರು ಗೊತ್ತಿಲ್ಲದೇ ಮಾಡುವ ತಪ್ಪು.

ತಮ್ಮ ಮಿತಿಗೆ ಅನುಗುಣವಾಗಿ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವ ಹಾಗೆ ಹಿರಿಯರು ಮಕ್ಕಳಿಗೆ ಅಭ್ಯಾಸ ಮಾಡಿಸಿದರೆ, ಅದು ಅವರಿಗೆ ಭವಿಷ್ಯದಲ್ಲಿ ನೆರವಾಗುತ್ತದೆ. ಶಿಕ್ಷಣ ಪಡೆದು ಉದ್ಯೋಗಕ್ಕೆಂದು ದೂರದೂರುಗಳಿಗೆ ಹೋಗಬೇಕಾದ ಸಂದರ್ಭದಲ್ಲಿ ಅಲ್ಲಿನ ಒಂಟಿ ಜೀವನ ಬದುಕಿನ ನೈಜ ಪಾಠ ಕಲಿಸುತ್ತದೆ.  ಹೀಗಾಗಿ ಶಾಲೆಗಳಲ್ಲಿ ಅದಕ್ಕಿಂತಲೂ ಮುಖ್ಯವಾಗಿ ಮನೆಗಳಲ್ಲಿ ಬದುಕನ್ನು ಎದುರಿಸುವ ಮಾನಸಿಕ  ಸಾಮರ್ಥ್ಯವನ್ನು, ಜೀವನಪಾಠವನ್ನು ಮಕ್ಕಳಲ್ಲಿ ತುಂಬುವ ಕಾರ್ಯ ಮನೆಮಂದಿಯಿಂದಾಗಬೇಕಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Mounesh Vishwakarma

ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Share
Published by
Mounesh Vishwakarma