ಕನ್ನಡದಲ್ಲೇ ಪರೀಕ್ಷೆ ಬರೆಯುವಂತೆ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿ ದಡ್ಡಲಕಾಡು ಶಾಲೆಯ ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿಗಳು ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಗೆ ತಕ್ಷಣ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆಂಗ್ಲ ಮಾಧ್ಯಮದ ಪ್ರಶ್ನೆ ಪತ್ರಿಕೆಯನ್ನು ಕೊಡಿಸುವಲ್ಲಿ ಶ್ರಮಿಸಿದರು. ಮಂಗಳೂರಿನ ಖಾಸಗಿ ವಿದ್ಯಾಸಂಸ್ಥೆಗೆ ಶಿಕ್ಷಣ ಇಲಾಖೆಯಿಂದ ಬಂದಿದ್ದ ಆಂಗ್ಲ ಮಾಧ್ಯಮದ ಪ್ರಶ್ನೆ ಪತ್ರಿಕೆಗಳನ್ನು ತರಿಸಿ ಶನಿವಾರ ಮಧ್ಯಾಹ್ನದ ಬಳಿಕ ಪರಿಕ್ಷೆಯನ್ನು ನಡೆಸಲು ಅವಕಾಶ ಮಾಡಿಕೊಟ್ಟರು. ಶಿಕ್ಷಣಾಧಿಕಾರಿಯ ಸ್ಪಂದನೆಗೆ ಕೃತಜ್ಞತೆ ಸಲ್ಲಿಸಿದ ಪ್ರತಿಭಟನಕಾರರು ಧರಣಿ ಹಿಂಪಡೆದರು.
ವಿದ್ಯಾರ್ಥಿಗಳು ಪೋಷಕರೊಂದಿಗೆ ಸೇರಿ ಶಾಲಾ ಜಗಲಿಯಲ್ಲಿಯೇ ಧರಣಿ ಆರಂಭಿಸಿ ಶಿಕ್ಷಣ ಇಲಾಖೆಯ ಧೋರಣೆಯನ್ನು ಖಂಡಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ತುಂಗಪ್ಪ ಬಂಗೇರ ಪ್ರತಿಭಟನೆಗೆ ಸಾಥ್ ನೀಡಿದರು.
ಇಂಗ್ಲೀಷ್‌ನಲ್ಲಿ ಅಧ್ಯಯನ ಮಾಡಿ ಕನ್ನಡ ಮಾಧ್ಯಮದಲ್ಲಿ ಬರೆಯಲು ನಮಗೆ ಸಾಧ್ಯವಿಲ್ಲ ಎಂದು ಪ್ರಕಾಶ್ ಅಂಚನ್ ತಿಳಿಸಿದರು. ಪ್ರತಿಭಟನೆಯಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಕರೆಂಕಿ, ಮಾಜಿ ಅಧ್ಯಕ್ಷ ಪೂವಪ್ಪ ಮೆಂಡನ್, ಪುರುಷೋತ್ತಮ ಅಂಚನ್ ಮತ್ತಿತರರು ಹಾಜರಿದ್ದರು.