ಇದು ಒಂದು ವರ್ಷದ ಹಿಂದಿನ ಕತೆ.
ಅಂದು ದ.ಕ.ಜಿಲ್ಲಾಧಿಕಾರಿಯಾಗಿದ್ದವರು ಡಾ.ಕೆ.ಜಿ.ಜಗದೀಶ್.
ಭಾರೀ ಉತ್ಸಾಹದಿಂದ ಬಂಟ್ವಾಳ ಪುರಸಭೆಯಲ್ಲಿ ಮೀಟಿಂಗ್ ಒಂದನ್ನು ಮಾಡಿದ್ದರು. ಈ ಸಂದರ್ಭ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಕರೆಸಿ ಅವರಿಂದ ಫೈಲುಗಳನ್ನು ತರಿಸಿ, ಲೋಪದೋಷಗಳನ್ನೆಲ್ಲ ಸರಿ ಮಾಡಿರಿ, ಬಿ.ಸಿ.ರೋಡಿನ ಚಿತ್ರಣವನ್ನೇ ಕಂಪ್ಲೀಟ್ ಬದಲಾಯಿಸಬೇಕು, ಜನರಿಗೆ ಯಾವುದೇ ರೀತಿಯ ತೊಂದರೆ ಇಲ್ಲಿ ಆಗಬಾರದು ಎಂದು ಸೂಚನೆ ಹೊರಡಿಸಿ ಪ್ರೊಬೆಷನರಿ ಐಎಎಸ್ ಗಾರ್ಗಿ ಜೈನ್ ಅವರಿಗೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯ ಹೊಣೆ ನೀಡಿದ್ದರು. 2016ರ ಡಿಸೆಂಬರ್ ನಲ್ಲಿ ಅಂಗಡಿ ಮುಂಗಟ್ಟುಗಳ ಪರಿಶೀಲನೆ, ಕಡತ ಪರಿಶೀಲನೆ, ಪಾರ್ಕಿಂಗ್ ಗೆ ಜಾಗ ಪರಿಶೀಲನೆ, ಬಸ್ ಬೇ ನಿರ್ಮಿಸಲು ಜಾಗ ಪರಿಶೀಲನೆ ಇತ್ಯಾದಿಗಳೆಲ್ಲವೂ ನಡೆದವು.
ಮತ್ತೇನಾಯಿತು?
ಕಾಲಚಕ್ರ ಉರುಳಿತು.
ಬಿ.ಸಿ.ರೋಡಿನಲ್ಲಿ ವಾಹನ ನಿಲ್ಲಲು ಇನ್ನೂ ಜಾಗವಿಲ್ಲ. ವಾಹನದಲ್ಲಿ ಬರುವ ವ್ಯಕ್ತಿ ಅದರ ಸುರಕ್ಷಿತ ನಿಲುಗಡೆಗೆ ಪರದಾಡುತ್ತಾನೆ.
ಕಳೆದ ವರ್ಷ ಬಂಟ್ವಾಳ ಪುರಸಭೆ ವತಿಯಿಂದ ಬಿ.ಸಿ.ರೋಡಿನ ಕೈಕುಂಜಕ್ಕೆ ತೆರಳುವ ಮಾರ್ಗ (ಈಗ ಮೆಸ್ಕಾಂ ವಿಭಾಗೀಯ ಕಚೇರಿ ಇರುವ ಜಾಗ)ದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ನಿರ್ಮಿಸುವ ಸಾಧ್ಯತೆ ಕುರಿತು ತಜ್ಞರ ಸರ್ವೇಯನ್ನು ನಡೆಸಲಾಗಿತ್ತು. ಇಡೀ ಬಿ.ಸಿ.ರೋಡಿನಲ್ಲಿ ಮೇಲ್ನೋಟಕ್ಕೆ ಪಾರ್ಕಿಂಗ್ ಗೆಂದು ಕಂಡುಬರುವ ಜಾಗ ಅದೊಂದೇ. ಇದೀಗ ಬಿ.ಸಿ.ರೋಡಿನ ಆಶ್ರಮ ಶಾಲೆ ಬಳಿ ಮೈದಾನ, ಕಚೇರಿಗಳ ಎದುರು, ಪೊಲೀಸ್ ಸ್ಟೇಶನ್ ಗೆ ಹೋಗುವ ದಾರಿ, ಸ್ಟೇಟ್ ಬ್ಯಾಂಕ್ ಎದುರು ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತದೆ. ಬಹುತೇಕ ಅಂಗಡಿ ಮಾಲೀಕರೇ ನೋ ಪಾರ್ಕಿಂಗ್ ಬೋರ್ಡು ತಗಲಿಸಿದ್ದು, ಅಲ್ಲೂ ದ್ವಿಚಕ್ರ ವಾಹನ ನಿಲ್ಲಿಸುತ್ತಿದ್ದಾರೆ.
ಪಾರ್ಕಿಂಗ್ ವ್ಯವಸ್ಥೆ ಕುರಿತು ತಾಲೂಕು ಆಡಳಿತ, ಪೊಲೀಸ್ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ನಿರ್ಧರಿಸಲಾಗುವುದು. ಸೂಕ್ತ ವ್ಯವಸ್ಥೆ ನಿರ್ಮಿಸುವ ಅಗತ್ಯವಂತೂ ಇದೆ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ.