www.bantwalnews.com REPORT
ಬಿ ಸಿ ರೋಡು ಮುಖ್ಯ ವೃತ್ತದಿಂದ ಪೂಂಜಾಲಕಟ್ಟೆ ಜಂಕ್ಷನ್ ವರೆಗೆ ಕಾಂಕ್ರೀಟೀಕೃತ ಚತುಷ್ಪಥ ರಸ್ತೆ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದರು.
3.5 ಕೋಟಿ ರೂಪಾಯಿ ಸಿಆರ್‍ಎಫ್ ಅನುದಾನಡಿ ಬಿ ಸಿ ರೋಡು ಮುಖ್ಯವೃತ್ತದಿಂದ ಗೂಡಿನಬಳಿ, ಪಾಣೆಮಂಗಳೂರು, ಆಲಡ್ಕ, ನಂದಾವರ ರಸ್ತೆಯ ಅಭಿವೃದ್ದಿ ಹಾಗೂ ಇಂಟರ್‍ಲಾಕ್ ವಾಕಿಂಗ್ ಝೋನ್ ಕಾಮಗಾರಿಗೆ ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಬುಧವಾರ ಸಂಜೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು 20 ಕೋಟಿ ರೂಪಾಯಿ ವೆಚ್ಚದ ಆರು ಕಡೆಯ ರಸ್ತೆ ಕಾಮಗಾರಿಗಳಿಗೆ ಒಂದೇ ದಿನದಲ್ಲಿ ಶಿಲಾನ್ಯಾಸ ನೆರವೇರಿಸಲಾಗಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಎಲ್ಲ ರಸ್ತೆಗಳು ಸರ್ವಋತು ರಸ್ತೆಗಳಾಗಿ ಮಾರ್ಪಾಡುಗೊಳ್ಳಲಿದೆ ಎಂದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭಿವೃದ್ದಿ ಕಾಮಗಾರಿಗಳ ಪರ್ವ ಇನ್ನೂ ಮುಂದುವರಿಯಲಿದ್ದು, 60 ಕೋಟಿ ರೂಪಾಯಿ ವೆಚ್ಚದ ಒಳಚರಂಡಿ ಯೋಜನೆ ಹಾಗೂ 10 ಕೋಟಿ ರೂಪಾಯಿ ವೆಚ್ಚದ ಕ್ರೀಡಾಂಗಣಕ್ಕೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳು ಗ್ರೀನ್ ಸಿಗ್ನಲ್ ನೀಡಿದ್ದು, ಕೆಲವೇ ದಿನಗಳಲ್ಲಿ ಈ ಕಾಮಗಾರಿಗಳೂ ಆರಂಭಗೊಳ್ಳಲಿದೆ ಎಂದು ಸಚಿವ ರೈ ತಿಳಿಸಿದರು.
ಈ ಸಂದರ್ಭ ಪುರಸಭಾಧ್ಯಕ್ಷ ಪಿ ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ರಾಜ್ಯ ನೈರ್ಮಲ್ಯ ಮಂಡಳಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಲಯನ್ಸ ಕ್ಲಬ್ ಅಧ್ಯಕ್ಷ ಜಗದೀಶ ಎಡಪಡಿತ್ತಾಯ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಎಪಿಎಂಸಿ ಅಧ್ಯಕ್ಷ ಕೆ ಪದ್ಮನಾಭ ರೈ ಮೊದಲಾದವರು ಭಾಗವಹಿಸಿದ್ದರು.