www.bantwalnews.com
ಬಂಟ್ವಾಳ ಪುರಸಭೆಯಲ್ಲಿ ಪೆಡಂಭೂತವಾಗಿ ಕಾಡುತ್ತಿರುವ ತ್ಯಾಜ್ಯ ವಿಲೇವಾರಿ ವಿಚಾರದ ಕುರಿತು ಸಚಿವ ರಮಾನಾಥ ರೈ ಸೂಚನೆಯಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್ ಮುತುವರ್ಜಿಯಿಂದ ಪುರಸಭೆಗೆ ಪೈರೋಲಿಸಿಸ್ ಯಂತ್ರ ಮಂಜೂರಾಗಿದೆ.
ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ಪುರಸಭೆಯ ಜಾಗದಲ್ಲಿ ಈ ಯಂತ್ರದ ಸಹಾಯದಿಂದ ತ್ಯಾಜ್ಯ ವಿಲೇವಾರಿಯನ್ನು ನೂತನ ವಿಧಾನದಿಂದ ಮಾಡಲಾಗುತ್ತದೆ. ಇನ್ನು ಇಪ್ಪತ್ತು ದಿನಗಳಲ್ಲಿ ಈ ಯಂತ್ರವನ್ನು ಅಳಡಿಸಲಾಗುವುದು ಎಂದು ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಹೇಳಿದರು.
ಮೇಲ್ಕಾರಿನಲ್ಲಿ ಮಂಗಳವಾರ ಬಂಟ್ವಾಳ ಪುರಸಭೆ, ಸ್ವಚ್ಛ ಭಾರತ, ನಿರ್ಮಲ ಬಂಟ್ವಾಳಯೋಜನೆ ವತಿಯಿಂದ ನಾನಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ ಪ್ರಯುಕ್ತ ರಾಷ್ಟ್ರೀಯ ಐಕ್ಯತಾ ದಿನಾಚರಣೆ ಹಾಗೂ ಸ್ವಚ್ಚತಾ ಆಂದೋಲನ ಜಾಥಾ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಹಯೋಗವೂ ಅಷ್ಟೇ ಮುಖ್ಯ ಎಂದು ಅವರು ಈ ಸಂದರ್ಭ ತಿಳಿಸಿದರು.
ಪತ್ರಕರ್ತ ಸಂಶುದ್ದೀನ್ ಸಂಪ್ಯ ಸ್ವಚ್ಚತಾ ಕುರಿತು ಮಾಹಿತಿ ನೀಡಿದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭೆ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ಸಂಜೀವಿ, ಜಗದೀಶ ಕುಂದರ್, ಜೆಸಿಂತಾ ಡಿಸೋಜ, ಚಂಚಲಾಕ್ಷಿ, ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ರೋಟರಿ ಕಾರ್ಯದರ್ಶಿ ನಾರಾಯಣ ಹೆಗ್ಡೆ, ಲಯನ್ಸ್ ಜಿಲ್ಲಾ ಸಂಯೋಜಕ ಉಮೇಶ್ ಆಚಾರ್, ದಾಮೋದರ ಬಿ.ಎಂ, ಕೋಶಾಧಿಕಾರಿ ರೋಹಿತಾಶ್ವ, ಶ್ರೀನಿವಾಸ್ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ರೇಖಾ ಶೆಟ್ಟಿ ಪ್ರತಿಜ್ಞೆ ವಿಧಿ ಬೊಧಿಸಿದರು.
ಸಮುದಾಯ ಅಭಿವೃದ್ಧಿ ಅಧಿಕಾರಿ ಮತ್ತಡಿ ಮತ್ತು ಆರೋಗ್ಯಾಧಿಕಾರಿ ರತ್ನಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಮೌನೇಶ ವಿಶ್ವಕರ್ಮ ನೇತೃತ್ವದಲ್ಲಿ ಸಂಸಾರ ಜೋಡುಮಾರ್ಗ ತಂಡದಿಂದ ಸ್ವಚ್ಚತಾ ಅರಿವಿನ ಬೀದಿನಾಟಕ ಜರಗಿತು.
ಇದಕ್ಕೂ ಮುನ್ನ ಶಾರದಾ ಪ್ರೌಢಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರೊಂದಿಗೆ ಪಾಣೆಮಂಗಳೂರಿನಿಂದ ಸ್ವಚ್ಚತಾ ಜಾಥಾ ನಡೆಯಿತು.