ಈಗಿನ ಸುದ್ದಿ
www.bantwalnews.com
ಪ್ರಧಾನಮಂತ್ರಿ ನರೇಂದ್ರ ಮೋದಿ ದ.ಕ.ಜಿಲ್ಲೆಯ ಧರ್ಮಸ್ಥಳಕ್ಕೆ ಬಾನುವಾರ ಬೆಳಗ್ಗೆ 10.55ಕ್ಕೆ ಬಂದಿಳಿದಿದ್ದಾರೆ.
ಮಂಗಳೂರು ಬಜ್ಪೆ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ ಆಗಮಿಸಿದ ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ, ಬಿಜೆಪಿ ಮುಖಂಡರಾದ ನಾಗರಾಜ ಶೆಟ್ಟಿ, ಮೋನಪ್ಪ ಭಂಡಾರಿ, ಯೋಗೀಶ್ ಭಟ್, ರಾಜ್ಯ ಸರಕಾರದ ಪರವಾಗಿ ಆಹಾರ ಸಚಿವ ಯು.ಟಿ.ಖಾದರ್, ಮಂಗಳೂರಿನ ಪ್ರಥಮ ಪ್ರಜೆ ಕವಿತಾ ಸನಿಲ್ ಮುಂತಾದವರು ಸ್ವಾಗತಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅ. 29ರಂದು ಪುಣ್ಯಕ್ಷೇತ್ರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಳಿಕ ಉಜಿರೆಯಲ್ಲಿ ನಡೆಯಲಿರುವ ಶ್ರೀ ಧ.ಗ್ರಾ. ಯೋಜನೆ ಸ್ವ- ಸಹಾಯ ಸಂಘಗಳ ಪಾಲುದಾರರ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹಿತ ಗಣ್ಯರ ದಂಡೇ ಸ್ವಾಗತಿಸಿತು.
ಜಯಘೋಷದ ನಡುವೆ ನಮೋ
ಜುಬ್ಬಾ, ಪೈಜಾಮವನ್ನು ಧರಿಸಿದ್ದ ಮೋದಿ ಅವರನ್ನು ಕಾರಿನಲ್ಲಿ ಹೆಲಿಪ್ಯಾಡ್ ನಿಂದ ಮಂಜುನಾಥನ ಸನ್ನಿಧಿಗೆ ಕರೆತರಲಾಯಿತು. ಕಾರಿನಿಂದಿಳಿದ ಸಂದರ್ಭ ಸಾರ್ವಜನಿಕರ ಜಯಘೋಷವನ್ನು ಕೇಳಿಸಿಕೊಂಡ ಪ್ರಧಾನಿ, ಎಲ್ಲರಿಗೂ ಕೈಬೀಸಿದರು. ಅದಾದ ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮೋದಿಯವರನ್ನು ಸ್ವಾಗತಿಸಿದರು. ಬಳಿಕ ಮಂಜುನಾಥನ ದರ್ಶನಕ್ಕೆ ಪ್ರಧಾನಿ ತೆರಳಿದರು.
ಒಟ್ಟು ನಾಲ್ಕು ಹೆಲಿಕಾಪ್ಟರ್ ಗಳು ಬಂದಿದ್ದವು. ಅವುಗಳಲ್ಲಿ ಒಂದರಲ್ಲಿ ಮೋದಿ ಬಂದಿಳಿದಿದ್ದರೆ, ಉಳಿದವುಗಳು ಭದ್ರತೆಗೆ ಸಂಬಂಧಿಸಿದ್ದಾಗಿವೆ.