ರಾಷ್ಟ್ರೀಯ ಸೇವಾ ಯೋಜನೆ ಯುವ ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನ ನೀಡುತ್ತದೆ. ಭಾರತ ಯುವ ಸಮೂಹವನ್ನು ಹೊಂದಿರುವ ದೇಶ. ರಾಷ್ಟ್ರವನ್ನು ಕಟ್ಟುವಲ್ಲಿ ಹದಿಹರೆಯದ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದು ಹಿರಿಯ ನ್ಯಾಯವಾದಿ ಅಶ್ವನಿ ಕುಮಾರ್ ರೈ ಹೇಳಿದರು.
ಪಲ್ಲಮಜಲು ಹಿ.ಪ್ರಾ. ಶಾಲೆಯಲ್ಲಿ ನಡೆದ ಬೆಂಜನಪದವು ಸರಕಾರಿ ಪ.ಪೂ. ಕಾಲೇಜು ರಾ.ಸೇ.ಯೋ. ವಿಶೇಷ ವಾರ್ಷಿಕ ಶಿಬಿರ ಸಮಾರೋಪ ಉದ್ದೇಶಿಸಿ ಮಾತನಾಡಿದರು.
ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಮಾತನಾಡಿ ಸಮಾಜವನ್ನು ತಿಳಿಯಲು, ಬದುಕನ್ನು ಅರಿಯಲು, ಸಮೂಹದ ಜೊತೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಯಲು ಯೋಜನೆಯು ನಮಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳ ನಡುವೆ, ಶಿಕ್ಷಕರ ಜೊತೆ ನಾವು ಹೇಗೆ ವರ್ತಿಸಬೇಕು. ಸಮಾಜದ ಜೊತೆಗೆ ಹೊಂದಾಣಿಕೆಯಿಂದ ಬೆರೆತುಕೊಳ್ಳುವುದು ಹೇಗೆಂದು ನಿಜವಾದ ಜ್ಞಾನ ಇಲ್ಲಿ ಸಿಗುತ್ತದೆ ಎಂದರು.
ಪಲ್ಲಮಜಲು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಉದ್ಯಮಿ ಕೆ.ಎಸ್. ಅಬೂಬಕ್ಕರ್, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪಲ್ಲಮಜಲು ಶಾಲಾ ಮುಖ್ಯಶಿಕ್ಷಕ ಪುಟ್ಟರಂಗನಾಥ ಟಿ. ಸಭೆ ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಪುಷ್ಪರಾಜ ಶೆಟ್ಟಿ ಪಲ್ಲಮಜಲು, ಇಬ್ರಾಹಿಂ, ಹಿರಿಯರಾದ ಎ. ನೋಣಯ್ಯ ಪೂಜಾರಿ, ಪ್ರತಿಭಾ ಪಿ. ಶೆಟ್ಟಿ ಪಲ್ಲಮಜಲು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಹಮ್ಮದ್ ರಫೀಕ್, ಶಾಲಾಭಿವೃದ್ಪ್ದಿ ಮಾಜಿ ಅಧ್ಯಕ್ಷ ಇಸಾಕ್, ಅಂತರಾಷ್ಟೀಯ ಹಿರಿಯ ಕ್ರೀಡಾಪಟು ಗ್ಲಾಡಿಸ್ ಪಾಯಸ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಎ.ಟಿ.ಗಿರೀಶಚಂದ್ರ ನಿರ್ದೇಶನದಲ್ಲಿ ನಡೆದ ಶಿಬಿರದಲ್ಲಿ ಒಟ್ಟು ೫೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲೆಯ ಆಟದ ಮೈದಾನ ವಠಾವನ್ನು ಶುಚಿಗೊಳಿಸಿ ಸಮತಟ್ಟು ಕೆಲಸವನ್ನು ನಿರ್ವಹಿಸಿದ್ದರು.
ಶಿಬಿರದಲ್ಲಿ ಮಾನವೀಯ ಸಂಬಂಧ ಮತ್ತು ಯುವ ಜನತೆ, ಸಮಾಜದ ಬೆಳವಣಿಗೆಯಲ್ಲಿ ಮಾಧ್ಯಮಗಳ ಜವಾಬ್ದಾರಿ, ಕಾನೂನು ಮಾಹಿತಿ-ಸೈಬರ್ ಕಾನೂನು, ಪರಿಸರ ಸಂರಕ್ಷಣೆ ಮತ್ತು ಯುವ ಜನತೆ, ಹದಿಹರೆಯದಲ್ಲಿ ಆರೋಗ್ಯ ಮತ್ತು ಯುವಜನ ಶೈಲಿ ಎಂಬ ವಿಷಯಗಳಲ್ಲಿ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ವಿವಿಧ ದಿನಗಳಲ್ಲಿ ನಡೆಯಿತು. ಪ್ರತೀ ದಿನ ಸಂಜೆ ಸಾಂಸ್ಕೃತಿಕ ವೈವಿಧ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರಾರ್ಥಿಗಳಲ್ಲಿ ನಾಯಕತ್ವ, ಸಮಾಜ ಸೇವೆ, ಸಹಜೀವನ, ಜಾತ್ಯಾತೀತ ಸದ್ಭಾವನೆ, ಸೌಹಾರ್ಧತೆಯ ಮೂಲಕ ರಾಷ್ಟ್ರೀಯ ಭಾವೈಕ್ಯ ಮೂಡಿಸುವುದು. ಆರೋಗ್ಯಕರ ರಾಷ್ಟ್ರ ನಿರ್ಮಾಣಕ್ಕೆ ಆರೋಗ್ಯಕರ ಯುವಜನತೆಯ ತಯಾರಿ, ನಾಡಿನ ನೆಲ-ಜಲ-ವನ ಸಂಪತ್ತನ್ನು ರಕ್ಷಿಸುವುದು, ಶಿಬಿರ ನಡೆದ ಶಾಲಾ ಆಟದ ಮೈದಾನ ದುರಸ್ತಿ, ಚರಂಡಿ, ಶಾಲಾ ಕೈತೋಟ, ಪರಿಸರ ಸ್ವಚ್ಚತೆ ನಿರ್ಮಾಣ, ಆರೋಗ್ಯ ಮತ್ತು ಶುಚಿತ್ವದ ಅರಿವು ಎಂಬಿತ್ಯಾದಿ ಧ್ಯೇಯೋದ್ದೇಶಗಳೊಂದಿಗೆ ಶಿಬಿರವು ಯಶಸ್ವಿಯಾಗಿ ನಡೆಯಿತು.
ಸಮಾರೋಪದಲ್ಲಿ ವಿದ್ಯಾರ್ಥಿನಿ ಲಾವಣ್ಯ ಶಿಬಿರದ ಪೂರ್ವಾಪರ ಮಾಹಿತಿ ನೀಡಿದರು. ಉಪನ್ಯಾಸಕ ಶ್ರೀಧರ ಅಡಿಗ ಸ್ವಾಗತಿಸಿದರು. ಎನ್‌ಎಸ್‌ಎಸ್ ಯೋಜನಾಽಕಾರಿ ನೂರ್ ಮಹಮ್ಮದ್ ವಂದಿಸಿದರು. ಉಪನ್ಯಾಸಕ ಲೋಕೇಶ್ ಯನ್. ಕಾರ್ಯಕ್ರಮ ನಿರ್ವಹಿಸಿದರು.