ಮಕ್ಕಳ ಮಾತು

ನೀನು ಮೊಬೈಲ್ ಕೊಟ್ರೆ ಮಾತ್ರ…

  • ಮೌನೇಶ ವಿಶ್ವಕರ್ಮ
  • ಅಂಕಣ: ಮಕ್ಕಳ ಮಾತು

ಇಂದು  ಪ್ರತೀ ಕೆಲಸಕ್ಕೂ ತಾಯಿಯ ಮೊಬೈಲ್ ಫೋನ್ ಬೇಕು ಎಂದು ಹಠ ಹಿಡಿಯುವ ಮಗು ನಾಳೆ ಕಾಲೇಜಿಗೆ ಹೋಗುವ ವಯಸ್ಸಿನಲ್ಲಿ ಹೊಸ ಮೊಬೈಲ್ ಫೋನ್ ಕೇಳಬಹುದು.. ಮಾತ್ರವಲ್ಲ ಪ್ರತಿಯೊಂದಕ್ಕೂ ತಂದೆ ತಾಯಿಯನ್ನು ಬ್ಲ್ಯಾಕ್‌ಮೇಲ್ ಮಾಡುವ ಅಪಾಯವನ್ನೂ ತಳ್ಳಿಹಾಕುವಂತಿಲ್ಲ. 

ನೀನು ಮೊಬೈಲ್ ಕೊಟ್ರೆ ಮಾತ್ರ…

ಅಲ್ಲಿ ನೋಡು ಪುಟ್ಟ.. ನೀನು ಊಟ ಮಾಡುದನ್ನು ನೋಡ್ಲಿಕ್ಕೆ ಚಂದಮಾಮ ಬಂದಿದಾನೆ.. ಚಂದಮಾಮ ಬಾಚಂದಮಾಮ ಬಂದ..ಇದೆಲ್ಲಾ  ತಾಯಿ ಮಗುವಿಗೆ ಊಟ ಕೊಡಲು ಅನುಸರಿಸುವ  ಸಾಂದರ್ಭಿಕ ತಂತ್ರಗಳು.. ಇಷ್ಟು ಮಾತ್ರ ಅಲ್ಲ, ಜೋಗುಳ ಹಾಡು, ಹೊಸ ಕಥೆ, ಹೊಸ ಹಾಡು ಹೀಗೆ ಅನೇಕಹೊಸ ಹೊಸ ಹೊಸ ಸಾಹಿತ್ಯಗಳು ತಾಯಿಯಾದವಳ ಬಾಯಲ್ಲಿ ಸೃಷ್ಟಿಯಾಗುತ್ತಲೇ ಇರುತ್ತದೆ. ಮಗುವಿನ ಊಟಕ್ಕೆ, ನಿದ್ರೆಗೆ, ಅಳು ನಿಲ್ಲಿಸಲು, ಮದ್ದು ಕುಡಿಸಲು ಇವೆಲ್ಲಾ ಅನಿವಾರ್ಯವೂ ಆಗಿತ್ತು..

ಮೊನ್ನೆ ತಾನೆ ಒಬ್ಬರ ಮನೆಯಲ್ಲಿ ನಡೆದ  ಘಟನೆ  ನಿಜಕ್ಕೂ ಅಚ್ಚರಿ ತಂದಿತು..ಎಲ್ಲವೂ ಕಾಲದ ಮಹಿಮೆ ಎಂದುಕೊಂಡು ಸುಮ್ಮನಾದೆ.

  ಮನೆಯಲ್ಲಿರುವುದು ತಂದೆ , ತಾಯಿ ಒಬ್ಬಳೇ ಮಗಳು, ವಯಸ್ಸಾದ ಅಜ್ಜಿ..

ಮನೆಯ ಚಿಕ್ಕ ಮಗುವಿಗೆ ಅಜ್ಜಿಯೆಂದರೆ ಅಕ್ಕರೆ. ಹಾಗಾಗಿ ಮನೆಯಲ್ಲಿರುವ ಪ್ರತೀ ಕ್ಷಣವನ್ನೂ ಅಜ್ಜಿಯ ಜೊತೆಗೆ ಕಳೆಯುತ್ತಿತ್ತು. ಮಗುವಿನ ತಾಯಿಗೆ ಇದು ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಹಾಗಾಗಿ ಪುಟ್ಟ ಮಗುವನ್ನು ತನ್ನತ್ತ ಸೆಳೆದುಕೊಳ್ಳಲು ತಾಯಿ ಪ್ರಯೋಗಿಸಿದ್ದು ತನ್ನಲ್ಲಿರುವ ಸ್ಮಾರ್ಟ್ ಫೋನನ್ನು.. ಊಟ ಕೊಡುವಾಗ ಅಜ್ಜಿ ಕೊಡಲಿ ಎಂದು ಮಗು ಹಠ ಹಿಡಿದರೆ, ನಿನಗೆ ಫೋನ್ ಕೊಡುತ್ತೇನೆ  ಬಾ ಎಂದು, ಯಾವುದೋ ಉಪಯೋಗಕ್ಕೆ ಬಾರದ ವಿಡಿಯೋ ತೋರಿಸಿ ಊಟ ಕೊಡುತ್ತಿದ್ದಳು..

ಆದರೆ ಈಗ ಅದೇ ತಾಯಿಗೆ ಉಲ್ಟಾ ಹೊಡೆದಿದೆ ಎಂದರೆ ನೀವು ನಂಬುತ್ತೀರಾ.. ಹೌದು.. ಈಗ ಪುಟ್ಟ ಮಗು ಬೆಳೆದುಶಾಲೆಗೆ  ಹೋಗುತ್ತಿದ್ದಾಳೆಜೊತೆಗ ಆಕೆಯ ಹಠವೂ  ಹೆಚ್ಚಾಗಿದೆ. ಈಗ ಮಗು ಊಟ ಕೊಡಬೇಕೆಂದರೆ ಮೊಬೈಲ್ ಕೊಡಬೇಕು, ಹೋಮ್ ವರ್ಕ್ ಮಾಡಬೇಕೆಂದರೆ ಒಂದು ಗಂಟೆ ಫೋನ್ ಆಟವಾಡಲು ಕೊಡಬೇಕು, ಬೆಳಗ್ಗೆ ಏಳಬೇಕೆಂದರೆ ರಾತ್ರಿ 10 ಗಂಟೆವರೆಗೆ ಗೇಮ್ಸ್ ಆಡಲು ಫೋನ್ ಕೊಡಬೇಕು.. ಹೀಗೆ ಬೇಡಿಕೆ ಪಟ್ಟಿ ಬೆಳೆಯುತ್ತಿದೆಯಂತೆ. ಅಂದು ನಾನು ಮನೆಗೆ ಹೋಗಿದ್ದಾಗ.. ಅಮ್ಮ ಫೋನ್ ಕೊಡು ಇಲ್ಲಾಂದ್ರೆ  ನಾನು ಊಟಾನೇ ಮಾಡುದಿಲ್ಲ ಎಂದು ಅಮ್ಮನನ್ನೇ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ದೃಶ್ಯವಂತೂ ನನ್ನನ್ನು ಒಮ್ಮೆ ಅಚ್ಚರಿಗೆ ತಳ್ಳಿತು.

  ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಇಲ್ಲ ಸಲ್ಲದ ಆಮಿಷವೊಡ್ಡಿ ಅವರ ಮನಸ್ಸನ್ನೂ ಯಾಂತ್ರೀಕೃತವಾಗಿಸಿದ ಅಪಾಯವಿದು. ಏನೂ ಅರಿಯದ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರನ್ನು ಮರುಳು ಮಾಡಿದೆವು, ಹಠ ಕಡಿಮೆ ಮಾಡಿತು, ನಾವು ಗೆದ್ದೆವು ಎಂದು ಹೆಮ್ಮೆ ಪಟ್ಟುಕೊಳ್ಳುವ ಮೊದಲು ಸಂಭಾವ್ಯ ಅಪಾಯವನ್ನು ಮನದಟ್ಟು ಮಾಡಿಕೊಳ್ಳಬೇಕುಇಂದು  ಪ್ರತೀ ಕೆಲಸಕ್ಕೂ ತಾಯಿಯ ಮೊಬೈಲ್ ಫೋನ್ ಬೇಕು ಎಂದು ಹಠ ಹಿಡಿಯುವ ಮಗು ನಾಳೆ ಕಾಲೇಜಿಗೆ ಹೋಗುವ ವಯಸ್ಸಿನಲ್ಲಿ ಹೊಸ ಮೊಬೈಲ್ ಫೋನ್ ಕೇಳಬಹುದು.. ಮಾತ್ರವಲ್ಲ ಪ್ರತಿಯೊಂದಕ್ಕೂ ತಂದೆ ತಾಯಿಯನ್ನು ಬ್ಲ್ಯಾಕ್ಮೇಲ್ ಮಾಡುವ ಅಪಾಯವನ್ನೂ ತಳ್ಳಿಹಾಕುವಂತಿಲ್ಲ

ಹೀಗಾಗಿ ಮಕ್ಕಳನ್ನು ಮುದ್ದು ಮಾಡುವಾಗಲೂ ಪೋಷಕರು ಹೆಚ್ಚು ಎಚ್ಚರಿಕೆ ವಹಿಸಿಕೊಳ್ಳಬೇಕಾಗಿದೆ. ಟಿ.ವಿ.ಯಲ್ಲಿ, ಪೇಪರ್ ನಲ್ಲಿ, ಇಂಟರ್ ನೆಟ್ ನಲ್ಲಿನ ಆಕರ್ಷಣೆ ಹೆಚ್ಚಾಗಿ ಮಕ್ಕಳು ತಮ್ಮತನವನ್ನೇ ಮರೆತುಬಿಡುವ ಹಂತದಲ್ಲಿ ಮಕ್ಕಳನ್ನು ಮಕ್ಕಳಾಗಿಯೇ  ನೋಡುವ ಮನಸ್ಸು ಹೆತ್ತವರದಾಗಬೇಕುಮಕ್ಕಳಿಗಾಗಿ ಒಂದಷ್ಟು ಸಮಯ ಕೊಟ್ಟು ತಂದೆ ತಾಯಿಯೇ ಮಕ್ಕಳ ಸ್ನೇಹಿತರಾಗಿ ಇರಬೇಕೇ ಹೊರತು ಟಿ.ವಿ, ಮೊಬೈಲ್ ಕಂಪ್ಯೂಟರ್ ಗಳನ್ನು ಮಕ್ಕಳ ಸ್ನೇಹಿತರನ್ನಾಗಿಸಿದರೆ ಮಕ್ಕಳು ಕೇವಲ ಯಂತ್ರಗಳಾಗುತ್ತಾರೆ ಎಂಬ ಎಚ್ಚರ ನಮ್ಮಲ್ಲಿರಲಿ.

Mounesh Vishwakarma

ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Share
Published by
Mounesh Vishwakarma

Recent Posts