ಮಕ್ಕಳಿಗೆ ಅಮಲು ಭರಿಸುವ ಮದ್ಯಸಾರ ಮಾದಕ ವಸ್ತು ಅಥವಾ ಇನ್ನಿತರ ದ್ರವ್ಯಗಳನ್ನು ನೀಡಿದ್ದಲ್ಲಿ ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2015 ಸೆಕ್ಷನ್ 77 ರಂತೆ 7 ವರ್ಷಗಳ ತನಕ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.1 ಲಕ್ಷದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2015 ಸೆಕ್ಷನ್ 78 ರಂತೆ ಅಮಲು ಭರಿಸುವ ಮಾದಕ ವಸ್ತುಗಳ ಮಾರಾಟ, ಸಾಗಾಣೆ ಅಥವಾ ಕಳ್ಳ ಸಾಗಾಣಿಕೆಯಲ್ಲಿ ಮಕ್ಕಳನ್ನು ಬಳಸಿದ್ದಲ್ಲಿ 7 ವರ್ಷಗಳ ಕಾರಾಗೃಹ ಸಜೆ ಹಾಗೂ ರೂ.1 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ವ್ಯಕ್ತಿಯೊಬ್ಬ ಪ್ರತಿನಿತ್ಯ ಮಾದಕ ವಸ್ತುಗಳನ್ನು ಬಳಸುವ ಪ್ರವೃತ್ತಿಯನ್ನು ಮಾದಕದ್ರವ್ಯ ವ್ಯಸನ (ಡ್ರಗ್ ಅಡಿಕ್ಷನ್) ಅಥವಾ ಮಾದಕ ವಸ್ತುಗಳ ದುರುಪಯೋಗ ಎನ್ನಬಹುದು. ಇದನ್ನು ಸೇವಿಸಿದರೆ ಮಾತ್ರ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಈ ವ್ಯಸನಕ್ಕೆ ದಾಸರಾದವರು ಭಾವಿಸಿರುತ್ತಾರೆ. ಮಾದಕ ವ್ಯಸನವು ಗಂಭೀರವಾದ ಭಾವನಾತ್ಮಕ, ದೈಹಿಕ ಮತ್ತು ಸಾಮಾಜಿಕ ಸಂಬಂಧಗಳ ಸಮಸ್ಯೆಗಳಿಗೆ ಕಾರಣವಾಗಬಹುದು.
ಮೊದಮೊದಲು ಕುತೂಹಲಕ್ಕಾಗಿ ಸೇವಿಸಲು ಆರಂಭಿಸುವಂತೆ, ಜನರು ತಮ್ಮೊಳಗಿನ ಒತ್ತಡವನ್ನು ಶಮನಗೊಳಿಸಲೆಂದೋ, ಸ್ನೇಹಿತರ ಒತ್ತಾಯಕ್ಕೋ, ಶೈಕ್ಷಣಿಕ ಅಥವಾ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಒಲವಿನಿಂದಲೋ ಅಥವಾ ಅವರಲ್ಲಿನ ಒತ್ತಡ ಹಾಗೂ ಸಮಸ್ಯೆಗಳನ್ನು ಮರೆಯಲೆಂದೋ ಮಾದಕದ್ರವ್ಯಗಳನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ. ಕ್ರಮೇಣ ಡ್ರಗ್ಸ್ ಬಳಕೆಯಿಂದ, ಮಿದುಳಿನಲ್ಲಿ ಬದಲಾವಣೆ ಉಂಟಾಗಿ ವ್ಯಕ್ತಿಗಳು ಮಾದಕ ವಸ್ತುಗಳನ್ನು ಹೆಚ್ಚುಹೆಚ್ಚು ಬಯಸುವಂತೆ ಮಾಡುತ್ತದೆ. ಅಂತವರು ಅದರ ಸೇವನೆಯನ್ನು ನಿಯಂತ್ರಣ ಮಾಡಲಾಗದೆ ಹೋಗುತ್ತಾರೆ. ವ್ಯಕ್ತಿಗಳು ಅವರ ಮನೋಸಾಮಥ್ರ್ಯ ಕಳೆದುಕೊಳ್ಳುತ್ತಾರೆ. ಆ ಹವ್ಯಾಸದಿಂದ ಹೊರಬರಬೇಕೆಂದು ನಿಜವಾಗಿ ಬಯಸಿದರೂ ಸಾಧ್ಯವಾಗದೇ, ಮತ್ತೆ ಮತ್ತೆ ಅದರೆಡೆಗೆ ಆಕರ್ಷಿತರಾಗುತ್ತಾರೆ.
ವ್ಯಸನಿಗಳಾಗಲು ವಂಶವಾಹಿ ಮತ್ತು ಸುತ್ತಮುತ್ತಲಿನ ವಾತಾವರಣ ಹೆಚ್ಚಿನ ಕಾರಣವಾಗಿರಬಹುದು. ಜೊತೆಗೆ ಇದು ವ್ಯಕ್ತಿಗತ ಆಯ್ಕೆಯೂ ಆಗಿರಬಹುದು. ಈ ವ್ಯಸನದಿಂದ ಹೊರಬರಲು ಚಿಕಿತ್ಸೆ ಮತ್ತು ಹೆಚ್ಚಿನ ಸಹಕಾರ ಅಗತ್ಯ. ಇತ್ತೀಚಿನ ದಿನಗಳಲ್ಲಿ ಅಮಲು ಭರಿಸುವ, ಮದ್ಯಸಾರ, ಮಾದಕವಸ್ತು ಅಥವಾ ಭ್ರಾಮಕಾರಕ ಮಾದಕ ದ್ರವ್ಯಗಳನ್ನು ಅಪ್ರಾಪ್ತ, ಹದಿಹರೆಯದ ಮಕ್ಕಳಿಗೆ ಸರಬರಾಜು, ಮಾರಾಟ ಸಾಗಾಣೆ ಮಾಡುವ ಜಾಲವು ಅವ್ಯಾಹತವಾಗಿರುವುದು ಕಂಡು ಬರುತ್ತಿದೆ.