ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ ಭಾನುವಾರ ಆಗಮಿಸುವ ಹಿನ್ನೆಲೆಯಲ್ಲಿ ಇಡೀ ಬಂಟ್ವಾಳ ಪಟ್ಟಣ ಎರಡು ದಿನಗಳಿಂದಲೇ ಅಲಂಕೃತಗೊಂಡಿದೆ.
ಉದ್ಘಾಟನೆಗೊಳ್ಳಲಿರುವ ಮೆಸ್ಕಾಂ, ಮಿನಿ ವಿಧಾನಸೌಧ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ನಿರೀಕ್ಷಣಾ ಮಂದಿರ, ಬಂಟ್ವಾಳ ಸರಕಾರಿ ಆಸ್ಪತ್ರೆ ಸಹಿತ ಕುಡಿಯುವ ನೀರಿನ ಯೋಜನೆಯ ಜಕ್ರಿಬೆಟ್ಟು ಪ್ರದೇಶದ ಕಟ್ಟಡಗಳ ಸಹಿತ ಹಲವೆಡೆ ಸಿಎಂ ಸ್ವಾಗತಕ್ಕೆ ಕಮಾನುಗಳು ಎದ್ದು ನಿಂತಿದ್ದು, ರಾತ್ರಿ ವೇಳೆ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿವೆ.
252.2 ಕೋಟಿ ರೂಗಳ ವೆಚ್ಚದ ನಾನಾ ಕಾಮಗಾರಿ, ಯೋಜನೆಗಳಿಗೆ ಸಿಎಂ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡುವರು. ದ.ಕ. ಜಿಲ್ಲೆಯಲ್ಲೇ ಅತಿ ದೊಡ್ಡದೆನಿಸಿದ ಮಿನಿ ವಿಧಾನಸೌಧ, ಮೆಸ್ಕಾಂಗೆ ಸುಂದರ ಸುಸಜ್ಜಿತ ಭವನ, ನದಿ ಕಿನಾರೆಯಲ್ಲಿ ಸಸ್ಯೋದ್ಯಾದನದೊಂದಿಗೆ ನಿರೀಕ್ಷಣಾ ಮಂದಿರ, 100 ಹಾಸಿಗೆಯ ಆಸ್ಪತ್ರೆಯಾಗಿ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ, ಕವಿ ಪಂಜೆ ಮಂಗೇಶರಾಯರ ಹೆಸರಲ್ಲಿ ಹುಟ್ಟೂರಲ್ಲೇ ಸ್ಮಾರಕ ಸಭಾಭವನ, ಬಂಟ್ವಾಳ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆ, ಬಹುಗ್ರಾಮ ಕುಡಿಯುವ ನೀರು ಯೋಜನೆ, ಜಿಲ್ಲೆಯಲ್ಲೇ ವಿಶಿಷ್ಟವಾಗಿ ನಿರ್ಮಿಸಲಾದ ಬಿ.ಸಿ.ರೋಡಿನ ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಅರಳ ಗ್ರಾಮದ ಮೂಲರಪಟ್ನ ಎಂಬಲ್ಲಿ ಕಿಂಡಿ ಅಣೆಕಟ್ಟು, ಕಡೇಶ್ವಾಲ್ಯದಲ್ಲಿ ಸೌಹಾರ್ದ ಸೇತುವೆ ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ.
ಬಿಗು ಭದ್ರತೆ:
ಸಿಎಂ ಆಗಮನ ಹಿನ್ನೆಲೆಯಲ್ಲಿ ಆಯಕಟ್ಟಿನ ಜಾಗಗಳಲ್ಲಿ ಬಿಗು ಭದ್ರತೆ ಏರ್ಪಡಿಸಲಾಗಿದೆ. ಎಸ್ಪಿ ಸುರ್ ಕುಮಾರ್ ರೆಡ್ಡಿ, ಎಎಸ್ಪಿ ಡಾ. ಅರುಣ್ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಪೊಲೀಸರು ಸಮಾರಂಭ ನಡೆಯುವ ಜಾಗ ಹಾಗೂ ಬಂಟ್ವಾಳದ ಸೂಕ್ಷ್ಮ ಪ್ರದೇಶಗಳಲ್ಲಿ ಬಂದೋಬಸ್ತ್ ಕೈಗೊಂಡಿದ್ದಾರೆ. ದ.ಕ. ಜಿಲ್ಲಾಕಾರಿ ಶಶಿಕಾಂತ ಸೆಂಥಿಲ್ ನೇತೃತ್ವದಲ್ಲಿ ಈಗಾಗಲೇ ಅಧಿಕಾರಿಗಳ ಮಟ್ಟದ ಸಭೆ ನಡೆದಿದ್ದು, ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚಿಸಲಾಗಿದೆ.
ಶನಿವಾರವೂ ದ.ಕ. ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮತ್ತು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ನೇತೃತ್ವದಲ್ಲಿ ಸಿದ್ಧತಾ ಪರಿಶೀಲನೆ ಶನಿವಾರ ನಡೆಯಿತು. ಈ ಸಂದರ್ಭ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಎಎಸ್ಪಿ ಡಾ. ಅರುಣ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯುಸ್ ಎಲ್. ರೋಡ್ರಿಗಸ್, ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ತಹಶೀಲ್ದಾರ್ ಪುರಂದರ ಹೆಗ್ಡೆ ಸಹಿತ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿಎಂ ಎಷ್ಟು ಹೊತ್ತು ಇರ್ತಾರೆ?
ಬೆಳಗ್ಗೆ 11 ಗಂಟೆಗೆ ಆಗಮಿಸುವ ಮುಖ್ಯಮಂತ್ರಿ ಮಧ್ಯಾಹ್ನ 3 ಗಂಟೆವರೆಗೆ ಬಂಟ್ವಾಳದಲ್ಲಿ ಇರಲಿದ್ದಾರೆ. ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆಯೂ ಇರಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ ಎಂದು ಇಡೀ ಕಾರ್ಯಕ್ರಮದ ಆಯೋಜನೆ ಉಸ್ತುವಾರಿ ವಹಿಸಿಕೊಂಡಿರುವ ಬಂಟ್ವಾಳ ಶಾಸಕರೂ ಆದ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಯಾರೆಲ್ಲ ಬರ್ತಾರೆ?
ಸಿಎಂ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಪ್ರವಾಸ ವಿವರ ಹೀಗಿದೆ (ಕೊನೆ ಕ್ಷಣದ ಬದಲಾವಣೆ ಹೊರತುಪಡಿಸಿ)
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.22ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ಅಕ್ಟೋಬರ್ 22 ರಂದು ಬೆಳಿಗ್ಗೆ 10.20 ಕ್ಕೆ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿ, ಬೆಳಿಗ್ಗೆ 11 ಗಂಟೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭಕ್ಕೆ ಚಾಲನೆ ನೀಡುವರು. ಮಧ್ಯಾಹ್ನ 3 ಗಂಟೆಗೆ ರಸ್ತೆಯ ಮೂಲಕ ಧರ್ಮಸ್ಥಳಕ್ಕೆ ತೆರಳುವರು. 4.15 ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿರುವ “ಸ್ವ-ಸಹಾಯ” ಸಂಘಗಳಿಂದ ಸದಸ್ಯರಿಗೆ ಲಾಭಾಂಶ ಹಂಚಿಕೆ ಕಾರ್ಯಕ್ರಮ, 5.30ಕ್ಕೆ ಧರ್ಮಸ್ಥಳ ದಿಂದ ರಸ್ತೆಯ ಮೂಲಕ ಬಜ್ಪೆ ವಿಮಾನ ನಿಲ್ದಾಣಕ್ಕೆ ತೆರಳುವರು 6.40 ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ವಾಪಾಸಾಗುವರು.
ಸಚಿವ ಡಾ. ಹೆಚ್.ಸಿ.ಮಹದೇವಪ್ಪ:
ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ: ಹೆಚ್.ಸಿ.ಮಹದೇವಪ್ಪ ಅವರ ಅ.22ರ ದ.ಕ ಜಿಲ್ಲಾ ಪ್ರವಾಸ ಕಾರ್ಯಕ್ರಮ ಇಂತಿವೆ. ಅಕ್ಟೋಬರ್ 22 ರಂದು ಬೆಳಿಗ್ಗೆ 10.20ಕ್ಕೆ ಮುಖ್ಯಮಂತ್ರಿಗಳೊಂದಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, 11 ಗಂಟೆಗೆ ರಸ್ತೆ ಮೂಲಕ ಬಂಟ್ವಾಳಕ್ಕೆ ತೆರಳಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 4.15ಕ್ಕೆ ಧರ್ಮಸ್ಥಳಕ್ಕೆ ತೆರಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿರುವ ‘ಸ್ವ ಸಹಾಯ’ ಸಂಘಗಳಿಂದ ಸದಸ್ಯರಿಗೆ ಲಾಭಾಂಶ ಹಂಚಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳೊಂದಿಗೆ ಭಾಗವಹಿಸುವರು. ಸಂಜೆ 6.40 ಕ್ಕೆ ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.
ಸಚಿವ ಡಿ.ಕೆ. ಶಿವಕುಮಾರ್
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಅ.22ರಂದು 11.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಬಳಿಕ ಬಂಟ್ವಾಳದಲ್ಲಿ ಮೆಸ್ಕಾಂ ಕಚೇರಿ ಉದ್ಘಾಟನೆ ಸೇರಿದಂತೆ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಚಿವ ರೋಶನ್ ಬೇಗ್
ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್. ರೋಶನ್ ಬೇಗ್ ಅವರು ಅ.22ರಂದು ಬೆಳಿಗ್ಗೆ 11 ಗಂಟೆಗೆ ಬಿ.ಸಿ. ರೋಡ್ ಗೆ ಆಗಮಿಸಲಿದ್ದು, ಬಳಿಕ ಬಂಟ್ವಾಳದಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆ ಉದ್ಘಾಟನೆ ಸೇರಿದಂತೆ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಚಿವ ಜಯಚಂದ್ರ
ಕಾನೂನು, ಸಣ್ಣ ನೀರಾವರಿ ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ. ಜಯಚಂದ್ರ ಅವರು ಅ.22ರಂದು 9.45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಬಳಿಕ ಬಂಟ್ವಾಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.