ಸುಮಾರು 252.5 ಕೋಟಿ ರೂ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ ಭಾನುವಾರ ಆಗಮಿಸುವ ಹಿನ್ನೆಲೆಯಲ್ಲಿ ಬಂಟ್ವಾಳ, ಬಿ.ಸಿ.ರೋಡ್, ಪಾಣೆಮಂಗಳೂರು ಸಹಿತ ಪ್ರಧಾನ ಜಾಗಗಳಲ್ಲೆಲ್ಲ ಕಟೌಟ್, ಬ್ಯಾನರು, ಸ್ವಾಗತ ಕಮಾನುಗಳು ಶುಕ್ರವಾರದಿಂದಲೇ ಕಂಡುಬರುತ್ತಿವೆ.
ಉದ್ಘಾಟನೆಗೊಳ್ಳುತ್ತಿರುವ ಪ್ರಮುಖ ಕಟ್ಟಡಗಳಾದ ಮಿನಿ ವಿಧಾನಸೌಧ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಮೆಸ್ಕಾಂ, ಐಬಿ, ಬಂಟ್ವಾಳ ಸರ್ಕಾರಿ ಆಸ್ಪತ್ರೆ, ಕುಡಿಯುವ ನೀರಿನ ಯೋಜನೆ ಪ್ರದೇಶಗಳಲ್ಲಿ ರಾತ್ರಿ ಹೊತ್ತು ವಿದ್ಯುತ್ ದೀಪಗಳ ಅಲಂಕಾರವಿದೆ.
ಅಕ್ಟೋಬರ್ 22 ರಂದು ಬೆಳಿಗ್ಗೆ 10.30 ಕ್ಕೆ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿ, ಬೆಳಿಗ್ಗೆ 11 ಗಂಟೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡುವರು. ಮಧ್ಯಾಹ್ನ 3 ಗಂಟೆಗೆ ಅವರು ಧರ್ಮಸ್ಥಳಕ್ಕೆ ತೆರಳುವರು.
ಅಭಿವೃದ್ಧಿ ಯೋಜನೆಗೆ ಚಾಲನೆ: ರೈ
ಬಂಟ್ವಾಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಒಟ್ಟು 252.5 ಕೋಟಿ ರೂ ಅಭಿವೃದ್ಧಿ ಯೋಜನೆಗೆ ಚಾಲನೆ ದೊರಕಲಿದೆ ಎಂದರು.
ಕ್ಷೇತ್ರದ ಹಲವಾರು ಬಹುನಿರೀಕ್ಷಿತ ಯೋಜನೆಗಳು ಅಂದು ಲೋಕಾರ್ಪಣೆಗೊಳ್ಳಲಿದ್ದು, ಜನತೆಯ ದೀರ್ಘಕಾಲದ ಬೇಡಿಕೆಗಳು ಈಡೇರುತ್ತಿವೆ. ಅಭಿವೃದ್ಧಿಯ ಪಥದಲ್ಲಿ ಬಂಟ್ವಾಳ ಕ್ಷೇತ್ರವು ಹೊಸ ಮೈಲಿಗಲ್ಲನ್ನೇ ತಲುಪಿದ್ದು, ಭವಿಷ್ಯದ ಮುನ್ನೋಟವನ್ನು ಗಮನದಲ್ಲಿರಿಸಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲಾಗಿದೆ ಎಂದು ರೈ ಈ ಸಂದರ್ಭ ತಿಳಿಸಿದರು.
ಇದಲ್ಲದೆ ಮುಂದೆ 60 ಕೋಟಿ ರೂಗಳ ಯುಜಿಡಿ ಕಾಮಗಾರಿ, 10 ಕೋಟಿ ರೂ ವೆಚ್ಚದಲ್ಲಿ ಬೆಂಜನಪದವಿನಲ್ಲಿ ಕ್ರೀಡಾಂಗಣ, 20 ಕೋಟಿ ರೂ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ, ಸಿಆರ್‌ಎಫ್, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ರೈ ತಿಳಿಸಿದರು. ಸಿಎಂ ಕಾರ್ಯಕ್ರಮದ ಸಂದರ್ಭ ಸಭಾ ಕಾರ್ಯಕ್ರಮವಲ್ಲದೆ ಆಗಮಿಸುವ ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆಯೂ ಇದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಹಾಕಲಾದ ವಿಶಾಲ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ರೈ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಸದಸ್ಯರಾದ ಬಿ.ಪ್ರವೀಣ್, ಜಗದೀಶ ಕುಂದರ್, ಪ್ರಮುಖರಾದ ಜನಾರ್ದನ ಚಂಡ್ತಿಮಾರ್, ಮಾಧವ ಮಾವೆ, ಉದಯ ಕುಮಾರ್ ಹೆಗ್ಡೆ, ಮಧುಸುಧನ ಶೆಣೈ ಸಹಿತ ಪ್ರಮುಖರು ಉಪಸ್ಥಿತರಿದ್ದರು.