ಪ.ಗೋ. ಅಂಕಣ

ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 25: ಸಂಪಾದಕೀಯ ಶೆಡ್ಡಿಗೆ ಬೆನ್ನು

.ಗೋ. ಎಂದೇ ಚಿರಪರಿಚಿತರಾಗಿದ್ದ ಪದ್ಯಾಣ ಗೋಪಾಲಕೃಷ್ಣ (1928-1997) ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ .ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆಇದು .ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ.

pa gO cartoon by Harini

ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ .ಗೋ, ಅವರ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು .ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (.ರಾಮಚಂದ್ರ). ಲೇಖನಮಾಲೆಯ 25ನೇ ಕಂತು ಇಲ್ಲಿದೆ. ಅಂಕಣಮಾಲೆಯಾಗಿ ಪ್ರಕಟಗೊಂಡು, ಪುಸ್ತಕರೂಪವಾಗಿ ಹೊರಬಂದ ವಿಶೇಷ ಸೃಷ್ಟಿಗಳ ಲೋಕದಲ್ಲಿ ಪುಸ್ತಕದ ಮರುಪ್ರಕಟಣೆ. ಇಲ್ಲಿ ವ್ಯಕ್ತವಾದ ವಿಚಾರಗಳೆಲ್ಲವೂ ಲೇಖಕರಿಗೆ ಸಂಬಂಧಿಸಿದ್ದಾಗಿದೆ. ಬಂಟ್ವಾಳನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ.

ವಿಶೇಷ ಸೃಷ್ಟಿಗಳ ಲೋಕದಲ್ಲಿಅಂಕಣ 25: ಸಂಪಾದಕೀಯ ಶೆಡ್ಡಿಗೆ ಬೆನ್ನು
ಹಿಂದೆ ಒಮ್ಮೆ ಒಂಭತ್ತು ತಿಂಗಳುಗಳನ್ನು ಕಳೆದಿದ್ದ ನವಭಾರತದ ಸಂಪಾದಕೀಯ ಸ್ಥಾವರದಲ್ಲಿ ಅಳವಡಿಸಿಕೊಂಡಿದ್ದ ‘ಮೊನೊಟೈಪ್’ ವ್ಯವಸ್ಥೆಯ ಹೊರತು ಉಳಿದೆಲ್ಲ ತಾಂತ್ರಿಕ ವಿಭಾಗಗಳೂ ಪರಿಚಿತವಾಗಿದ್ದವು. ಶಾಖೆಯಲ್ಲಿ ಕೆ.ಶ್ರೀಧರ ಆಚಾರ್, ಬಿ.ಹೂವಯ್ಯ ಮೊದಲಾದವರ ಪರಿಚಯವನ್ನು ಹೊಸದಾಗಿ ಮಾಡಿಕೊಂಡೆ. ಹಳೆಯ ಪರಿಚಯದ ಮುಖ್ಯ ಉಪಸಂಪಾದಕ ಬನ್ನಂಜೆ ರಾಮಾಚಾರ್ಯರ ಅನುವರ್ತಿಯಾಗಿ ಕೆಲಸ ಮಾಡಬೇಕಾದ ಆದೇಶವನ್ನೂ ಪಡೆದೆ. ಕಾಮತರು ಪ್ರತಿಯೊಂದು ವಿಚಾರದಲ್ಲೂ ಹಸ್ತಕ್ಷೇಪ ಮಾಡಬಲ್ಲಷ್ಟು ಅಧಿಕಾರ ಬೆಳೆಸಿಕೊಂಡಿದ್ದಾರೆ ಎಂಬುದನ್ನೂ ತಿಳಿದೆ.
ಹೂವಯ್ಯನವರಿಗೆ ದೊರೆತಿದ್ದ ಅನುಮತಿ ರಾತ್ರಿ ಹೊತ್ತು ಮಾತ್ರವೇ ಕೆಲಸ ಮಾಡಿ ಪೂರೈಸುವ ಅವಕಾಶ ಒದಗಿಸಿತ್ತು. ಪಿ.ಟಿ.ಐ.ವರದಿಗಳ ಅನುವಾದದ (ರಾತ್ರಿಯ) ಹೊರೆಯನ್ನು ಹೆಚ್ಚಾಗಿ ಅವರೇ ನಿಭಾಯಿಸುತ್ತಿದ್ದರು. ಹಗಲು ಹೊತ್ತಿನಲ್ಲಿ ನನಗೆ ಹೆಚ್ಚೇನೂ ಕೆಲಸವಿರುವುದಿಲ್ಲ – ಇನ್ನೊಂದಷ್ಟು ಕೆಲಸವನ್ನು ‘ತಗಲಿಸ’ಬೇಕು ಎಂಬ ಅನಿಸಿಕೆ ಕಾಮತರಲ್ಲಿ ಮೂಡಲು ಹೆಚ್ಚು ಸಮಯ ತಗಲಲಿಲ್ಲ. ಆ ಅನಿಸಿಕೆಯನ್ನು ಸುತ್ತುಬಳಸು ಮಾತಿನಲ್ಲಿ ನನಗೆ ತಿಳಿಸಿದ ಉಪಸಂಪಾದಕರು ‘ಮಾಲಿಕ-ನೌಕರರ ನಡುವಿನ ಕೊಂಡಿಗಳೊಂದಿಗೆ ತಗ್ಗಿ ಬಗ್ಗಿ ನಡೆಯುವುದು ಜಾಣತನ” ಎಂದು ಸೂಚ್ಯವಾಗಿ ಹೇಳಿಯೂ ಇದ್ದರು. ಆದರೆ, ಕಾಮತರ ಬಗ್ಗೆ ಇಲ್ಲದ ಆದರವನ್ನು, ಅನುಕೂಲಕ್ಕೆ ಪ್ರದರ್ಶಿಸುವ ಸೋಗಲಾಡಿ ನಾನಾಗಲಾರೆ ಎಂಬ ‘ಶುಂಠ’ ನಿಲುಮೆಗೆ ನಾನು ಅಂಟಿಕೊಂಡೆ.
ನನ್ನ ಕೆಲಸದ ಹೊರೆಯನ್ನು ಹೆಚ್ಚಿಸಬೇಕೆನ್ನುವವರ ಆಸೆಗಳು ಪೂರೈಸುವ ದಿನಗಳು ಬಹುಬೇಗನೆ ಬಂದಿತು. ಬಹುಮಟ್ಟಿಗೆ ನಿವೃತ್ತರಾಗಿಯೇ ಉಳಿದಿದ್ದ ಸಂಪಾದಕ ಚೆಯರ್ ಮ್ಯಾನ್ ಕುಡ್ವರ, ತಾನು ಹುಟ್ಟುಹಾಕಿದ ಪತ್ರಿಕೆಯ (ಸಂಪಾದಕೀಯ) ಆಗುಹೋಗುಗಳಲ್ಲಿ ಆಸಕ್ತಿ ತೋರತೊಡಗಿದರು. ಪ್ರತಿದಿನ ನಿವಾಸಕ್ಕೆ ಬರುತ್ತಿದ್ದ ಪತ್ರಿಕೆಯನ್ನು ಅಮೂಲಾಗ್ರವಾಗಿ ಓದಿ, ಕಾಣಿಸುತ್ತಿದ್ದ ಅಸಂಖ್ಯಾತ ತಪ್ಪುಗಳ ಬಗ್ಗೆ ಉಂಟಾದ ಅಸಮಾಧಾನವನ್ನು ದೂರವಾಣಿಯಲ್ಲಿ ಸಂಪಾದಕೀಯ ಶಾಖೆಗೆ ತಿಳಿಸಿ ಸುಮ್ಮನಾಗುತ್ತಿದ್ದ ಅಭ್ಯಾಸ ಬಿಟ್ಟು ದಿನಕ್ಕೊಂದು ಬಾರಿಯಾದರೂ ಕಾರ್ಯಾಲಯಕ್ಕೆ ಭೇಟಿ ಕೊಡಲು ತೊಡಗಿದರು. ಕೆಲವು ಸುಧಾರಣೆಗಳನ್ನು ಮಾಡಬಯಸಿದರು.
ಅವರು ಬಯಸಿದ ಸುಧಾರಣೆಗಳನ್ನು ಜಾರಿಗೆ ತರಲು ನಾನೇ ‘ಯೋಗ್ಯ’ ವ್ಯಕ್ತಿ ಎಂಬ ಸೂಚನೆಯನ್ನು ಸೂಕ್ಷ್ಮವಾಗಿ ಅವರಿಗೆ ತಲುಪಿಸಲಾಯಿತು. ಅವರ ನಿರ್ದೇಶನಗಳು ಬರತೊಡಗಿದವು. ಅವರ ಬಯಕೆಗಳಲ್ಲಿ ಅನಗತ್ಯ ಅಂಶಗಳಾವುವೂ ಇರಲಿಲ್ಲ. ವಹಿಸಿದ್ದ ಕೆಲಸದ ನಿರ್ವಹಣೆ ಸಂತೋಷವನ್ನೇ ತರುತ್ತಿತ್ತು.
ಅದೇ ಸಮಯದಲ್ಲಿ ವಿಶುಕುಮಾರರ ಒಂದು ಕಾದಂಬರಿಯ ಧಾರಾವಾಹಿ ಪ್ರಕಟಣೆಯೂ ನವಭಾರತದಲ್ಲಿ ಆರಂಭವಾಯಿತು. ಹಸ್ತಪ್ರತಿಯಲ್ಲಿ ಕೈಯಾಡಿಸುವ ಘನಕಾರ್ಯವೂ ನನ್ನ ಪಾಲಿಗೆ ಬಂತು.
ಆದರೆ ಅನಂತರದ ಎರಡು-ಮೂರು ತಿಂಗಳಲ್ಲಿ ವಿ.ಎಸ್.ಕುಡ್ವರ ಆರೋಗ್ಯ ಸ್ಥಿತಿ ಏರುಪೇರಾಯಿತು. ಕಾರ್ಯಾಲಯ ಭೇಟಿಗಳೂ ಕಡಿಮೆಯಾದವು. ಯಾವಾಗಲಾದರೂ ಒಮ್ಮೆ ದೂರವಾಣಿಯಲ್ಲಿ ‘ವಿಚಾರಿಸಿ’ ಕೊಳ್ಳುವಷ್ಟಕ್ಕೆ ಸುಧಾರಣಾ ಕಾರ್ಯಕ್ರಮ ಸೀಮಿತವಾಯಿತು. ಅವರೇ ಬೇಕೆಂದು ತರಿಸಿಕೊಂಡಿದ್ದ -ತಪ್ಪುಗಳನ್ನು ಕೊನೆಯ ಗಳಿಗೆಯಲ್ಲೂ ತಿದ್ದಿಕೊಳ್ಳಲು ಅನುಕೂಲವಾಗುವ ‘ಪೇಜ್-ಪ್ರೂಫ್’ ಉಪಕರಣ.
ಅವರ ಭೇಟಿಗಳು ಇನ್ನಿಲ್ಲವೆಂದು ಧೈರ್ಯ ತಳೆದವರಿಂದಾಗಿ ಮೂಲೆಪಾಲಾಯಿತು.
ಆ ಹಂತದಲ್ಲಿ ಕೆಲವು ವಾರ, ಸಂಜೀವ ಕುಡ್ವರ ಕಿರಿಯ ಸಹೋದರ ಲಕ್ಷ್ಮೀನಾರಾಯಣ (ಎಲ್.ವಿ.) ಕುಡ್ವರಿಗೆ ಸಂಪಾದಕೀಯ ಕಾರ್ಯದಲ್ಲಿ ವಿಶೇಷ ಆಸಕ್ತಿ ಮೂಡಿತು. ಅವರದೇ ಕಲ್ಪನೆಯ ಹಲವು ಬದಲಾವಣೆಗಳನ್ನು ಅವರು ನನ್ನನ್ನು ಉಪಯೋಗಿಸಿಕೊಂದು ಜಾರಿಗೆ ತಂದರು. (ಆದರೆ ಅದರಿಂದಾಗಿ ಪತ್ರಿಕೆಗೆ ಹೆಚ್ಚಿನ ಪ್ರಯೋಜನವೇನೂ ಆಗಲಿಲ್ಲ!)
ಅಸ್ವಾಸ್ಥ್ಯದಿಂದ ಆದ ವಿ.ಎಸ್.ಕುಡ್ವರ ನಿಧನ, ಪತ್ರಿಕೆಯ ಸಮಗ್ರ ಸುಧಾರಣೆಯನ್ನು ನಿರೀಕ್ಷಿಸಿದ್ದವರ ಹಂಬಲವನ್ನು ಮಣ್ಣುಗೂಡಿಸಿತು. ನಿಧನ ವಾರ್ತೆಯು ಪ್ರಕಟವಾದ ಒಂದೆರಡು ವಾರಗಳಲ್ಲೆ ನಾನು ರಾತ್ರಿಪಾಳಿಗೆ ವರ್ಗಾವಣೆಗೊಂಡೆ.
‘ನನ್ನ ಪತ್ನಿ ದೆಹಲಿಯಲ್ಲಿದ್ದಾಳೆ. ಇಬ್ಬರು ಸಣ್ಣ ಮಕ್ಕಳನ್ನು ರಾತ್ರಿಯ ಹೊತ್ತು ಮನೆಯಲ್ಲಿ ಬಿಟ್ಟು ಬರಲು ಕಷ್ಟವಾಗುತ್ತದೆ – ಕೆಲವು ವಾರಗಳ ಮಟ್ಟಿಗಾದರೂ ರಾತ್ರಿ ಪಾಳಿಯಿಂದ ವಿನಾಯಿತಿ ಕೊಡಿ’ರೆಂದು ಕಾಮತರಲ್ಲಿ ಕೇಳಿಕೊಂಡೆ. ಮನವಿ ನಿರರ್ಥಕವಾದಾಗ, ಪ್ರಕಾಶಕ ಸಂಪಾದಕರೆಂದು ಅಧಿಕೃತವಾಗಿ ಆ ಹೊತ್ತಿಗೆ ಘೋಷಿಸಿಕೊಂಡಿದ್ದ ಸಂಜೀವ ಕುಡ್ವರಲ್ಲಿ ಮೇಲ್ಮನವಿ ಸಲ್ಲಿಸಲೂ ಹಿಂಜರಿದ ಕಾರಣ, ‘ಪೀಡಕನ ಶಿಕ್ಷೆ’ಯನ್ನು ಸಹಿಸಿಕೊಳ್ಳಬೇಕಾಯಿತು.
ಶಿಕ್ಷೆಯನ್ನು ರದ್ದು ಮಾಡಬೇಕಾದ ಪರಿಸ್ಥಿತಿ, ಸ್ವಲ್ಪ ಸಮಯದಲ್ಲೇ ಒದಗಿ ಬಂತು. ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯ ಬೆಂಗಳೂರು ಆವೃತ್ತಿಯ ಮಂಗಳೂರು (ದಕ್ಷಿಣ ಕನ್ನಡ) ಅಂಶಕಾಲಿಕ ವರದಿಗಾರನಾಗಿ ನೇಮಿಸಿದ್ದ ಪತ್ರವು ನನ್ನ ಕೈ ಸೇರಿದೊಡನೆ, ಆ ಕೆಲಸವನ್ನು ನವಭಾರತದ ಉದ್ಯೋಗದಲ್ಲಿದ್ದುಕೊಂಡೇ ಮಾಡಲು ಸಂಪಾದಕರ ‘ಔಪಚಾರಿಕ’ ಅನುಮತಿಯನ್ನು ಪಡೆದೆ. ಆ ವಿಚಾರವನ್ನು ಕೂಡಲೇ ಕಾಮತರಿಗೆ ತಿಳಿಸಿ, ಅವರಲ್ಲಿ ಅಸೂಯೆಯನ್ನೂ ಮೂಡಿಸಿದೆ.
‘ಶುಂಠನಿಗೆ ಬುದ್ಧಿ ಕಲಿಸುವ’ ದಾರಿ ಹುಡುಕುತ್ತಲೇ ಇದ್ದ ಕಾಮತರಿಗೆ, ಎಕ್ಸ್ ಪ್ರೆಸ್ ಸಂಸ್ಥೆಯು ಕನ್ನಡ ಪ್ರಭವನ್ನೂ ಆರಂಭಿಸುವ ಯೋಜನೆ ಹಾಕಿದಾಗ, ಹೊಸದೊಂದು ದಾರಿ ದೊರೆಯಿತು.
ಸ್ವಂತ ನಿರ್ಧಾರದಲ್ಲಿ ನವಭಾರತವನ್ನು ತೊರೆದು, ಬೆಂಗಳೂರಿನಲ್ಲಿ ಉದ್ಯೋಗ ಪಡೆದಿದ್ದ ಮೊನೊಟೈಪ್ ಆಪರೇಟರ್ ಗಳನ್ನು ನಾನೇ ಅಲ್ಲಿಗೆ ಕಳುಹಿಸಿದ್ದೇನೆ – ಕನ್ನಡ ಪ್ರಭದ ಕೆಲಸವನ್ನು ನವಭಾರತದ (ಕೆಲಸ) ವೇಳೆಯಲ್ಲೇ ಮಾಡುತ್ತಿದ್ದೇನೆ’ ಎಂಬಿತ್ಯಾದಿ ಆರೋಪಗಳ ಪಟ್ಟಿಯನ್ನು ಸಂಪಾದಕರಲ್ಲಿ ಕಾಮತರು ಸಲ್ಲಿಸಿದರು.
ಆ ದಿನವೇ, ಸಂಜೀವ ಕುಡ್ವರನ್ನು ‘ಕೊನೆಯ ಬಾರಿ’ಗೆ ಭೇಟಿ ಮಾಡಿ ‘ಅನ್ನ ಕೊಡಲು ಮುಂದೆ ಚಾಚಿದ್ದ ಕೈಯನ್ನು ಕಚ್ಚುವ ಹೀನಪ್ರವೃತ್ತಿ ನನಗಿಲ್ಲ. ನಿಮ್ಮ ಸಂಸ್ಥೆಯಿಂದ ಎರಡನೆ ಬಾರಿ ಹೊರ ನಡೆಯುವಾಗ ವಿಷಾದವಾಗುತ್ತಿದೆ’ ಎಂದು ಅವರಲ್ಲಿ ತಿಳಿಸಿದೆ. ನವಭಾರತದ  ಸಂಪಾದಕೀಯ ಶೆಡ್ಡಿಗೆ ಬೆನ್ನು ಹಾಕಿದೆ.
ಉಪಸಂಪಾದಕನಾಗಿ ಬದುಕು ಸಾಗಿಸಲು ಪ್ರಯತ್ನ ಪಡುವ ಬದಲು, ವರದಿಗಾರನಾಗಿಯೇ ಇನ್ನು ಮುಂದೆ ಬದುಕುತ್ತೇನೆ ಎಂಬ ತೀರ್ಮಾನ, ನವಭಾರತದಿಂದ ಹೊರಟು ಮನೆಯನ್ನು ಮುಟ್ಟುವ ಹೊತ್ತಿಗೆ ನಿಶ್ಚಿತ ರೂಪ ತಳೆದಿತ್ತು.
ವಾರ್ತಾಲೋಕದ ಪ್ರಕಟಣೆಯ ಕಾಲದಲ್ಲಾಗಿದ್ದ ಸಾಲಗಳನ್ನು, ಒಂದು ಸ್ಮರಣ ಸಂಚಿಕೆ ಮತ್ತೊಂದು ಆತ್ಮಚರಿತ್ರೆ ತಯಾರಿಸಿಕೊಟ್ಟು ದೊರೆತಿದ್ದ ಸಂಭಾವನೆಗಳಿಂದ ತೀರಿಸಲಿ ಸಾಧ್ಯವಾಗಿತ್ತು. ಅತಿಯಾದ ಆಸೆಗೆ ಹೋಗದೆ, ದಿನಗಳೆಯಲು ಎಕ್ಸ್ ಪ್ರೆಸ್ ನಿಂದ ಸಿಗುತ್ತಿದ್ದ ‘ಗೌರವಧನ’ ಸಾಲುತ್ತಿತ್ತು.
ಮನೆ ಸೇರಿದಾಗ, ಅಂದಿನ ಅಂಚೆಯಲ್ಲಿ ಬಂದಿದ್ದ ಎಕ್ಸ್ ಪ್ರೆಸ್ ನ ಸ್ಥಾನೀಯ ಸಂಪಾದಕರ ಪತ್ರ ನನ್ನನ್ನು ಕಾಯುತ್ತಿತ್ತು.
ನಮ್ಮ ಸಹಪತ್ರಿಕೆ ಕನ್ನಡಪ್ರಭಕ್ಕೂ ವರದಿ ಕಳುಹಿಸಬೇಕಾದುದರಿಂದ, ಅಂಶಕಾಲಿಕ ಉದ್ಯೋಗಿಯಾದರೂ ನಮ್ಮ ಪ್ರಕಟಣೆಗಳಿಗಷ್ಟೇ ನಿನ್ನ ಕೆಲಸ ಸೀಮಿತವಾಗಿರಬೇಕು. ಆದುದರಿಂದ ನಿನ್ನ ಮಾಸಿಕ ಗೌರವಧನವನ್ನು 400ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದ ಆ ಪತ್ರ.
ನನ್ನ ತೀರ್ಮಾನದ ಕಾಕತಾಳೀಯ ಸಮರ್ಥನೆಯೆಂದೇ ಭಾವಿಸಿದೆ.
ವರದಿಗಾರನಿಗೆ ಅಧಿಕೃತ ವಿಳಾಸ ಒದಗಿಸುವ ವ್ಯವಸ್ಥೆಯೂ ಒಂದೆರಡು ವಾರಗಳಲ್ಲಿ ಆಯಿತು. ಮೈದಾನ್ ಅಡ್ಡರಸ್ತೆಯಲ್ಲಿರುವ ಎಕ್ಸ್ ಪ್ರೆಸ್ ಪ್ರಕಟಣೆಗಳ ವಿತರಕ ಮಂಜುನಾಥ ನಾಯಕರ ‘ಅಂಗಡಿ’ಗೆ ನನ್ನನ್ನು ವರ್ಗಾಯಿಸಿಕೊಂಡೆ. ಸುದ್ದಿಯ ಮೂಲಗಳೊಡನೆ ಸಂಪರ್ಕ ಸ್ಥಾಪನೆಯ ಕೆಲಸವನ್ನೂ ಬಲಪಡಿಸತೊಡಗಿದೆ
(ಮುಂದಿನ ಭಾಗದಲ್ಲಿ)
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts