ಮೊಟ್ಟೆಗೂಡಿಗೆ ಕೈಹಾಕಿದ ಬಾಲಕಿ ಹಾವು ಕಡಿದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಶಂಭೂರು ಅಗ್ಗರಪಾದೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಸುಮಾರು 3.30ರ ವೇಳೆ ಮನೆಯಲ್ಲಿದ್ದ ಕೋಳಿಗೂಡಿನ ಬಳಿ ತೆರಳಿದ ಪುಟಾಣಿ ಅನ್ಸಿಕಾ (4) ಅದರೊಳಗೆ ಕೈ ಹಾಕಿದ್ದಾಳೆ. ರತ್ನಾಕರ ಮತ್ತು ದಯಾವತಿ ದಂಪತಿಯ ಏಕೈಕ ಪುತ್ರಿಯಾದ ಅನ್ಸಿಕಾ, ಸ್ಥಳೀಯ ಅಂಗನವಾಡಿಗೆ ತೆರಳುತ್ತಿದ್ದಳು.
ಈ ಸಂದರ್ಭ ಹಾವು ಕಡಿದಿದೆ. ಮಗು ತನ್ನ ತಲೆಗೆ ಏನೋ ತಾಗಿದೆ ಎಂದು ಮನೆಯವರ ಬಳಿ ತಿಳಿಸಿದ್ದಾಳೆ. ಮೊಟ್ಟೆಯೂ ಒಡೆದಿದ್ದು, ತಲೆಗೆ ತಾಗಿದೆ ಎಂದು ಮನೆಯವರ ಬಳಿ ಮಗು ಬಂದಾಗ, ಗಾಯವಾಗಿದೆ ಎಂದು ಮನೆಯವರು ಅರಿಸಿನ ಪುಡಿ ಚಿಮುಕಿಸಿದ್ದಾರೆ.
ಈ ಸಂದರ್ಭ ವಾಂತಿ ಮಾಡುತ್ತಿದ್ದ ಮಗುವನ್ನು ಕಂಡು ಆಸ್ಪತ್ರೆಗೆ ಕರೆದುಕೊಂಡು ಹೋದರೂ ತಲೆಗೆ ಕಡಿದ ಕಾರಣ, ವಿಷವೇರಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.