ದೇಶ, ವಿದೇಶಗಳಲ್ಲಿರುವ ಬಂಟ್ವಾಳನ್ಯೂಸ್ ನ ಎಲ್ಲ ಸಹೃದಯ ಓದುಗರಿಗೂ ದೀಪಾವಳಿಯ ಹಾರ್ದಿಕ ಶುಭಕಾಮನೆಗಳು. ಇದೇ ಸಂದರ್ಭ ನಿಮಗೆ ಕೃತಜ್ಞತೆಗಳನ್ನೂ ಅರ್ಪಿಸಲು ಬಯಸುತ್ತಿದ್ದೇನೆ.

ಜಾಹೀರಾತು

ಯಾವುದೇ ಔದ್ಯಮಿಕ ಹಿನ್ನೆಲೆ ಇಲ್ಲದೆ ಕೇವಲ ಪತ್ರಕರ್ತನಾಗಿಯೇ ದುಡಿದಿದ್ದ ನಾನು ತಾಲೂಕಿನ ಸುದ್ದಿಗಳನ್ನು ನೀಡುವ ವೆಬ್ ಸೈಟ್ ಒಂದನ್ನು ಕಳೆದ ವರ್ಷ (ನವೆಂಬರ್ 10, 2016) ಆರಂಭಿಸಿದಾಗ ಹಲವು ಸವಾಲು, ಟೀಕೆ, ಟಿಪ್ಪಣಿಗಳೂ ಬೆನ್ನತ್ತಿದ್ದವು. ಪತ್ರಕರ್ತ ವೃತ್ತಿಯನ್ನಷ್ಟೇ ಬಲ್ಲವನಾದ್ದರಿಂದ ಸುದ್ದಿಗಳನ್ನು ವೆಬ್ ಮೂಲಕ ಒದಗಿಸಲು ಆರಂಭಿಸಿದಾಗ ಸಾಥ್ ನೀಡಿದ್ದು ಬಂಟ್ವಾಳ ಮತ್ತು ವಿಟ್ಲದ ಪತ್ರಕರ್ತ ಸ್ನೇಹಿತರು ಹಾಗೂ ಮಂಗಳೂರು, ಬೆಂಗಳೂರಿನ ಸುದ್ದಿ ಮಾಧ್ಯಮದ ಒಡನಾಡಿಗಳು.

ಸುದ್ದಿಯ ಸೂಕ್ಷ್ಮತೆ ಹಾಗೂ ಬದ್ಧತೆಗಳು ಮತ್ತು ಒಳನೋಟಗಳ ವಿಶ್ಲೇಷಣೆಗಳನ್ನು ಒರೆಗೆ ಹಚ್ಚಿ ಕಟುವಾಗಿ ವಿಮರ್ಶೆ ಮಾಡುತ್ತಾ, ನನ್ನ ಬೆನ್ನು ತಟ್ಟಿದ ಸ್ನೇಹಿತರೂ ಹಲವು. ಕಳೆದ 11 ತಿಂಗಳಲ್ಲಿ ನೂರಾರು ಸುದ್ದಿಗಳು ಬಂಟ್ವಾಳನ್ಯೂಸ್ ನಲ್ಲಿ ಬಂದಿವೆ. ಅವುಗಳಲ್ಲಿ ಬಹಳಷ್ಟು ಚರ್ಚೆಗೂ ಗ್ರಾಸವಾಗಿವೆ. ವಿಶೇಷವಾಗಿ ಬಂಟ್ವಾಳ ಸರ್ವೀಸ್ ರಸ್ತೆ ಇಂದು ಅಭಿವೃದ್ಧಿ ಹೊಂದುತ್ತಿದ್ದರೆ ಅದರಲ್ಲಿ ಬಂಟ್ವಾಳನ್ಯೂಸ್ ಪಾಲೂ ಇದೆ ಎಂದು ಓದುಗರೇ ದೂರವಾಣಿ ಕರೆ ಮಾಡಿ ಹೇಳುವುದು ಧನ್ಯತಾ ಭಾವನೆಯನ್ನು ಮೂಡಿಸುವುದರ ಜೊತೆಗೆ ಮುಂದಿನ ಜವಾಬ್ದಾರಿಗಳನ್ನೂ ಹೆಗಲಿಗೇರಿಸಿದೆ.

4,25,000 ಮಂದಿ ಬಂಟ್ವಾಳನ್ಯೂಸ್ ಓದಿದ್ದಾರೆ. ಫೇಸ್ ಬುಕ್, ಟ್ವಿಟರ್, ಯೂಟ್ಯೂಬ್ ಮೂಲಕ ಸುಮಾರು 10 ಲಕ್ಷ ಮಂದಿಯನ್ನು ವೆಬ್ ಸೈಟ್ ತಲುಪಿದೆ. ವ್ಯಾವಹಾರಿಕವಾಗಿ ಭಾರೀ ಯಶಸ್ಸನ್ನು ಕಾಣದೇ ಇದ್ದರೂ ಓದುಗರು ಬಂಟ್ವಾಳನ್ಯೂಸ್ ಬಗ್ಗೆ ಭರವಸೆಯನ್ನು ಇಟ್ಟಿರುವುದು ಇದಕ್ಕೆ ಸಾಕ್ಷಿ.

ಇದೇ ಸಂದರ್ಭ ನಮ್ಮ ಅಂಕಣಕಾರರು ಮತ್ತು ಲೇಖಕರಾದ ಡಾ. ಅಜಕ್ಕಳ ಗಿರೀಶ ಭಟ್, ಅನಿತಾ ನರೇಶ್ ಮಂಚಿ, ಡಾ. ರವಿಶಂಕರ್, ಮೌನೇಶ ವಿಶ್ವಕರ್ಮ, ಬಿ.ತಮ್ಮಯ್ಯ, ಪದ್ಯಾಣ ರಾಮಚಂದ್ರ, ಡಾ. ಮುರಳೀ ಮೋಹನ ಚೂಂತಾರು, ಶ್ರೇಯಾಂಕ್ ಎಸ್. ರಾನಡೆ ಸಹಿತ ಹಲವು ಪ್ರೋತ್ಸಾಹಕರು, ಮಾರ್ಗದರ್ಶಕರು ಹಾಗೂ ಜಾಹೀರಾತುಗಳನ್ನು ಒದಗಿಸುವ ಮೂಲಕ ಆರ್ಥಿಕ ಬಲವನ್ನು ಒದಗಿಸಿದ ನಮ್ಮ ಜಾಹೀರಾತುದಾರರಿಗೂ ಮನದಾಳದ ಕೃತಜ್ಞತೆ. https://thewebpeople.in/ ವೆಬ್ ವಿನ್ಯಾಸಗೊಳಿಸಿದ ಪ್ರತಿಭಾವಂತ ತಂಡ. ಆದಿತ್ಯ ಕಲ್ಲೂರಾಯ ಸಹಿತ ತಂಡದ ಎಲ್ಲ ಸದಸ್ಯರಿಗೂ ಧನ್ಯವಾದ.

ಹೆಚ್ಚು ಓದುಗರನ್ನು ತಲುಪಬೇಕು ಎಂದು ಅವಸರದಲ್ಲಿ ಬ್ರೇಕಿಂಗ್ ನ್ಯೂಸ್ ಹಾಕುವ ಧಾವಂತವನ್ನು ಇದುವರೆಗೂ ಮಾಡಿಲ್ಲ, ಇನ್ನೂ ಮಾಡುವುದೂ ಇಲ್ಲ. ವೈಯಕ್ತಿಕ ನಿಂದನೆ, ಕೀಳು ಮಟ್ಟದ ಆರೋಪ, ಪ್ರತ್ಯಾರೋಪಗಳಿಗೂ ಬಂಟ್ವಾಳನ್ಯೂಸ್ ವೇದಿಕೆಯಾಗುವುದಿಲ್ಲ. ಪೂರ್ವಾಗ್ರಹಪೀಡಿತ ಸುದ್ದಿಗಳು, ಅಶ್ಲೀಲ ಅಸಭ್ಯ ಚಿತ್ರಗಳು, ಕೋಮು ಪ್ರಚೋದಕ ಹಾಗೂ ಹಿಂಸಾಪ್ರಚೋದಕ ಸುದ್ದಿಗಳನ್ನೂ ಬಂಟ್ವಾಳನ್ಯೂಸ್ ನಲ್ಲಿ ಹಾಕುವುದಿಲ್ಲ ಎಂದು ಈ ಮೂಲಕ ನಿಮಗೆ ಹೇಳಬಯಸುತ್ತೇನೆ.

ಬಂಟ್ವಾಳನ್ಯೂಸ್  ತಾಲೂಕಿನ ವಿಚಾರಗಳನ್ನು ನೀಡುವ ಜೊತೆಗೆ ಜನಪರ, ವೈಚಾರಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಜಗತ್ತಿನ ನೋಟಗಳನ್ನು ಒದಗಿಸುವುದರಲ್ಲಿ ಸದಾ ನಿಮ್ಮ ಜತೆಗಿರುತ್ತದೆ.

ಧನ್ಯವಾದಗಳು

ಹರೀಶ ಮಾಂಬಾಡಿ

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.