ಕೆಲ ತಿಂಗಳುಗಳಿಂದ ಬಿ.ಸಿ.ರೋಡ್, ಬಂಟ್ವಾಳಗಳಲ್ಲಿ ಭರದಿಂದ ನಡೆಯುತ್ತಿದ್ದ ಕಾಮಗಾರಿಗಳಿಗೀಗ ಅಂತಿಮ ಸ್ಪರ್ಶ. ಜಿಲ್ಲೆಯಲ್ಲಿ ವಿಭಿನ್ನವಾಗಿ ನಿರ್ಮಿಸಲಾದ ಹೆಗ್ಗಳಿಕೆಯುಳ್ಳ ಮಿನಿ ವಿಧಾನಸೌಧ, ಮೆಸ್ಕಾಂ ಭವನ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ನಿರೀಕ್ಷಣಾ ಮಂದಿರ, ಬಂಟ್ವಾಳ ಸಮುದಾಯ ಆಸ್ಪತ್ರೆಯ ಹೊಸ ಕಟ್ಟಡ ಹಾಗೂ ಬಂಟ್ವಾಳದ ಸಮಗ್ರ ಕುಡಿಯುವ ನೀರಿನ ಯೋಜನೆ ಕೆಲಸ ಕಾರ್ಯಗಳೆಲ್ಲ ಮುಗಿದು ಲೋಕಾರ್ಪಣೆಗೆ ಕಾಯುತ್ತಿದ್ದರೆ, ಹಲವು ಹೊಸ ಯೋಜನೆಗಳು ಚಾಲನೆಗಾಗಿ ತಯಾರಾಗಿವೆ.
ಅಕ್ಟೋಬರ್ 22ರಂದು ನಾನಾ ಕಟ್ಟಡ, ಯೋಜನೆ ಲೋಕಾರ್ಪಣೆ, ಶಂಕುಸ್ಥಾಪನೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ವಹಿಸಲಿದ್ದಾರೆ. ಅಂದು ರಾಜ್ಯದ ಪ್ರಮುಖ ಸಚಿವರ ಸಹಿತ ಹಲವು ರಾಜಕಾರಣಿಗಳು, ಗಣ್ಯರ ದಂಡೇ ಬಿ.ಸಿ.ರೋಡಿಗೆ ಬರಲಿದೆ. ಇದರ ಸಾರಥ್ಯ ವಹಿಸಿದವರು ಸ್ಥಳೀಯ ಶಾಸಕರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ.
ಮಿನಿ ವಿಧಾನಸೌಧ:
ಸುಮಾರು 10 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಿನಿ ವಿಧಾನಸೌಧಕ್ಕೆ ನೆಲ ಮತ್ತು ಎರಡು ಮಹಡಿಗಳು ಇವೆ. ಒಂದು ಅಂತಸ್ತಿನ ವಿಸ್ತೀ:ರ್ಣ 1074 ಚದರ ಮೀಟರ್. ಸುಮರು 3225 ಚದರ ಮೀಟರ್ ವಿಸ್ತೀರ್ಣದ ಭವ್ಯ ಕಟ್ಟಡವಿದು. 33 ಸೆಂಟ್ಸ್ ನಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, 13 ಕೊಠಡಿಗಳು ಇದರಲ್ಲಿವೆ. ಸರ್ವೇ ಸಹಿತ ಹಲವು ಕಂದಾಯ ಇಲಾಖೆಗಳಿಗೆ ಸೇರಿದ ಕಚೇರಿಗಳು ಇಲ್ಲಿ ಕಾರ್ಯಾಚರಿಸಲಿವೆ. ಐಬಿ ಮತ್ತು ಮಿನಿ ವಿಧಾನಸೌಧ ನಿರ್ಮಾಣವನ್ನು ಇಂಧನ ಸಂರಕ್ಷಣಾ ಕಟ್ಟಡ ಸಂಹಿತೆ 2014ರ ನಿಯಮಾವಳಿಯಂತೆ ನಿರ್ಮಿಸಲಾಗಿದ್ದು, ಮಧ್ಯೆ ಕೋರ್ಟ್ ಯಾರ್ಡ್ ಇರಲಿದೆ. ಇದರಿಂದ ಪ್ರಾಕೃತಿಕ ಗಾಳಿ ಬೆಳಕು ಇಲ್ಲಿ ದೊರಕುತ್ತದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್.
ನಿರೀಕ್ಷಣಾ ಮಂದಿರ:
ಈಗಿನ ನಿರೀಕ್ಷಣಾ ಮಂದಿರದ ಎದುರೇ ಇರುವ ಕಟ್ಟಡದ ಅಂದಾಜು ನಿರ್ಮಾಣ ವೆಚ್ಚ 3 ಕೋಟಿ ರೂ. ನೆಲ ಅಂತಸ್ತು ವಿಸ್ತೀರ್ಣ 660 ಚ.ಮೀ. ಇದರಲ್ಲಿ 2 ವಿಐಪಿ ಕೊಠಡಿಗಳು, 2 ಸಾಮಾನ್ಯ ಕೊಠಡಿ ಮತ್ತು ಒಂದು ಮೀಟಿಂಗ್ ಹಾಲ್ ಇದೆ. ಉಳಿದ ಎರಡು ಅಂತಸ್ತುಗಳಲ್ಲಿ 3 ಸಾಮಾನ್ಯ ಕೊಠಡಿ, 1 ಅಡುಗೆ ಕೋಣೆ, 1 ಡೈನಿಂಗ್ ರೂಮ್, 2 ಚಾಲಕರ ವಾಸ್ತವ್ಯದ ಕೊಠಡಿ ಮತ್ತು ಪಾರ್ಕಿಂಗ್ ವ್ಯವಸ್ಥೆ ಇದೆ.
100 ಹಾಸಿಗೆಗಳ ಆಸ್ಪತ್ರೆ:
ಅಂದಾಜು 6 ಕೋಟಿಗಳ ವೆಚ್ಚದಲ್ಲಿ 30 ಹಾಸಿಗೆಗಳ ಹಳೇ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ 100 ಹಾಸಿಗೆಗಳ ನೂತನ ಆಸ್ಪತ್ರೆ ಕಟ್ಟಡವೀಗ ಉದ್ಘಾಟನೆಗೆ ಸಜ್ಜಾಗಿದೆ. ನೆಲಮಹಡಿಯಲ್ಲಿ ಕ್ಯಾಜುಲಿಡಿ, ಒಪಿಡಿ, 40 ಬೆಡ್‌ಗಳ ವಾರ್ಡ್, ಪ್ರಸೂತಿ ವಿಭಾಗ, ಮೊದಲನೇ ಮಹಡಿಯಲ್ಲಿ 2 ಶಸ್ತ್ರಚಿಕಿತ್ಸಾ ಕೊಠಡಿ, 1 ಬೆಡ್‌ನ 3 ವಿಶೇಷ ವಾರ್ಡ್, 2 ಬೆಡ್‌ನ 2 ವಿಶೇಷ ವಾರ್ಡ್, 40 ಬೆಡ್‌ನ ಜನರಲ್ ವಾರ್ಡ್ ಸಹಿತ ಡಯಾಲಿಸಿಸ್ ಸೆಂಟರ್, ಹೆಚ್ಚುವರಿ ಶವಾಗಾರ, ಅಡುಗೆ ಕೋಣೆಗಳು ಇವೆ. ಒಟ್ಟು 3294.3 ಚ.ಮೀ ವಿಸ್ತೀರ್ಣದ ಕಟ್ಟಡವಿದು. ಇದರಲ್ಲಿ ಅಡುಗೆ ಕೋಣೆಗೆ 5 ಲಕ್ಷ ರೂಗಳನ್ನು ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಡಯಾಲಿಸಿಸ್ ಸೆಂಟರ್‌ಗೆ 6 ಲಕ್ಷ ರೂಗಳನ್ನು ಎಂಆರ್‌ಪಿಎಲ್ ಮತ್ತು ಹೆಚ್ಚುವರಿಶವಾಗಾರಕ್ಕೆ 12 ಲಕ್ಷ ರೂಗಳನ್ನು ಎನ್‌ಎಂಪಿಟಿಗಳ ಸಿಎಸ್‌ಆರ್ ನಿಧಿಯಿಂದ ಒದಗಿಸಲಾಗಿದೆ.
ಮೆಸ್ಕಾಂ ಕಟ್ಟಡ:
ಮೆಸ್ಕಾಂ ಡಿವಿಜನ್ ಕಚೇರಿ ಸಹಿತ ಹಲವು ವಿಭಾಗಗಳು ಒಂದೇ ಕಡೆ ನಿರ್ಮಿಸುವ ಸಲುವಾಗಿ ಸುಮರು 5.16 ಕೋಟಿ ರೂ ವೆಚ್ಚದಲ್ಲಿ ಮೆಸ್ಕಾಂ ನೂತನ ಕಟ್ಟಡ ನಿರ್ಮಿಸಲಾಗಿದೆ. ಇದರಲ್ಲಿ ತಳ ಅಂತಸ್ತು, ನೆಲ ಅಂತಸ್ತು, 2 ಮಹಡಿ ಸೇರಿದಂತೆ ಒಟ್ಟು 2598 ಚ.ಮೀ. ವಿಸ್ತೀರ್ಣದ ಜಾಗವಿದೆ. ಕಟ್ಟಡದಲ್ಲಿ ಡಿವಿಜನ್ ಕಚೇರಿ, ಎರಡು ಸಬ್ ಡಿವಿಜನ್ ಕಚೇರಿ, ಎಚ್‌ಟಿ ಮತ್ತು ಎಲ್‌ಟಿ ಸಬ್ ಡಿವಿಜನ್ ಕಚೇರಿ, ಡಿವಿಜನಲ್ ಸ್ಟೋರ್ ಕಚೇರಿ, ಸೆಕ್ಷನ್ ಕಚೇರಿ, ಕ್ಯಾಶ್ ಕೌಂಟರ್, ಎಟಿಪಿ ಒಳಗೊಂಡಿರುತ್ತದೆ.
ಭವ್ಯ ಕೆಎಸ್ಸಾರ್ಟಿಸಿ ನಿಲ್ದಾಣ:
ಬಸ್ಸುಗಳು ಹೇಗೆ ನಿಲ್ಲುತ್ತವೆ ಹಾಗೂ ಈ ನಿಲ್ದಾಣದೊಳಗೆ ಹೇಗೆ ಪ್ರವೇಶಿಸುತ್ತವೆ ಎಂಬ ಕುತೂಹಲವನ್ನು ಉಳಿಸಿಕೊಂಡೇ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. 1.5 ಎಕ್ರೆ ವಿಸ್ತೀರ್ಣದ ಜಾಗದಲ್ಲಿ ನೆಲ ಅಂತಸ್ತು, ಮೊದಲ ಮಹಡಿ ಒಳಗೊಂಡಿದ್ದು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ. ಒಂದು ಸೂಪರ್ ಮಾರ್ಕೆಟ್, ಅಥವಾ ದೊಡ್ಡ ರೆಸ್ಟಾರೆಂಟ್ ನಿರ್ವಹಿಸುವಷ್ಟು ಜಾಗ, ಸುಮಾರು ನಾಲ್ಕೈದು ವಾಣಿಜ್ಯ ವ್ಯವಹಾರ ನಡೆಸುವಷ್ಟು ಸ್ಥಳಾವಕಾಶ ಇಲ್ಲಿದೆ. ಪ್ರಯಾಣಿಕರ ಹಿತದೃಷ್ಟಿಯನ್ನಿಟ್ಟುಕೊಂಡು ಕಟ್ಟಡ ನಿರ್ಮಿಸಲಾಗಿದೆ. ಅಂಗವಿಕಲರಿಗೆ ರ್‍ಯಾಂಪ್, ಪಬ್ಲಿಕ್ ರೆಸ್ಟ್ ರೂಮ್, ಮಳೆನೀರು ಕೊಯ್ಲು, ಎಲ್‌ಇಡಿ ದೀಪಗಳ ಮೂಲಕ ವಿದ್ಯುತ್ ಉಳಿತಾಯ ಹೀಗೆ ಬಸ್ ನಿಲ್ದಾಣದ ಒಳಗೆ ಪ್ರಯಾಣಿಕರಿಗೆ ಬೇಕಾದ ಸಕಲ ಸೌಕರ್ಯಗಳು ಇರಲಿವೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದಿವಾಕರ ಯರಗುಪ್ಪ.
ನಿರಂತರ ಕುಡಿಯುವ ನೀರು:
ಬಂಟ್ವಾಳಕ್ಕೆ ನಿರಂತರವಾಗಿ ಕುಡಿಯುವ ನೀರೊದಗಿಸುವ 5 ಹಂತಗಳ ಶುದ್ಧೀಕರಣದ 52.79 ಕೋಟಿ ರೂಗಳ ಸಮಗ್ರ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆಗೆ ಸಜ್ಜಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಡಿ ಕಾಮಗಾರಿ ನಡೆದಿದ್ದು, 2045ಕ್ಕೆ 1.2 ಲಕ್ಷ ಜನಸಂಖ್ಯೆಗೆ 24.16 ಎಂಎಲ್‌ಡಿ ದಿನವಹಿ ನೀರೊದಗಿಸುವ ಯೋಜನೆ ಇದಾಗಲಿದೆ. ಒಂದು ಎಂಎಲ್‌ಡಿ ಎಂದರೆ 10 ಲಕ್ಷ ಲೀಟರ್. ಪ್ರತಿಯೊಬ್ಬರಿಗೂ 135 ಲೀಟರ್ ನೀರು ಅಗತ್ಯ ಎಂಬ ಸರಾಸರಿ ಲೆಕ್ಕಾಚಾರದಂತೆ ಈ ಯೋಜನೆ ನಡೆದಿದ್ದು, ನೇತ್ರಾವತಿ ನೀರು ಇದಕ್ಕೆ ಆಧಾರ. ಈವರೆಗೆ ಬಂಟ್ವಾಳದಲ್ಲಿ 5.45 ಎಂಎಲ್‌ಡಿ ನೀರು ಒದಗಿಸುವ ವ್ಯವಸ್ಥೆ ಇತ್ತು ಎನ್ನುತ್ತಾರೆ ಕ.ನ.ನೀ.ಸ.ಒ.ಮಂಡಳಿಯ ಸಹಾಯಕ ಎಂಜಿನಿಯರ್ ಶುಭಲಕ್ಷ್ಮೀ.