ಜಿಲ್ಲೆಯಲ್ಲಿ ತಲೆದೋರಿರುವ ಕೃತಕ ಮರಳು ಅಭಾವ ಹಾಗೂ ಮರಳು ಸಮಸ್ಯೆಗೆ ಕಾಂಗ್ರೆಸ್–ಬಿಜೆಪಿ ಎರಡೂ ಪಕ್ಷಗಳ ಜನವಿರೋಧಿ ಧೋರಣೆಗಳೇ ಕಾರಣ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಕೃತಕ ಮರಳು ಅಭಾವ, ಕರಾವಳಿಗೆ ಶಾಶ್ವತ ಮರಳು ನೀತಿಗಾಗಿ ಹಾಗೂ ಅಕ್ರಮ ಮರಳು ಸಾಗಾಟ ನಿಲ್ಲಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಡಬ್ಲ್ಯುಎಫ್ಐ) ಹಾಗೂ ಸಿಐಟಿಯು ಜಂಟಿಯಾಗಿ ಬಿ. ಸಿ.ರೋಡಿನಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಜಾನ್, ಸಿಐಟಿಯು ಮುಖಂಡರಾದ ಎ ರಾಮಣ್ಣ ವಿಟ್ಲ, ಉದಯ ಕುಮಾರ್, ಬಿ. ವಾಸು ಗಟ್ಟಿ, ಶೇಖರ ಕಟ್ಟತ್ತಿಲ, ಕೃಷ್ಣ ಸುಳ್ಯ, ಯಾದವ ಮೊದಲಾದವರು ಪ್ರತಿಭಟನೆಯಲ್ಲಿದ್ದರು. ಪ್ರತಿಭಟನೆಗೂ ಮುನ್ನ ಬಿ.ಸಿ.ರೋಡು ಮುಖ್ಯ ವೃತ್ತದಿಂದ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಬಳಿಕ ತಾಲೂಕು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.