ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ವೈಜ್ಞಾನಿಕ ಮರಳು ನೀತಿ ಜಾರಿ, ಜಿಲ್ಲೆಯಿಂದ ಹೊರಭಾಗಕ್ಕೆ ಮರಳು ಸಾಗಾಟ ಸಂಪೂರ್ಣ ನಿಷೇಧ ಹಾಗೂ ಜಿಲ್ಲೆಯ ಜನರಿಗೆ ನಿರಂತರವಾಗಿ ನ್ಯಾಯಯುವ ಬೆಲೆಯಲ್ಲಿ ಮರಳು ದೊರಕಿಸಿಕೊಡುವಂತೆ ಒತ್ತಾಯಿಸಿ ಬಿಜೆಪಿ ವತಿಯಿಂದ ಬಿ.ಸಿ.ರೋಡಿನಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ಮತ್ತು ಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ಬಿಜೆಪಿ ನಾಯಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಮರಳು ಜಿಲ್ಲೆಯ ಸಂಪತ್ತು. ಅದು ಯಾರದ್ದೇ ಸೊತ್ತಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ ಇದರಿಂದ ದೊರಕುವ ರಾಜಧನದಿಂದ ಸಾಧ್ಯ. ಆದರೆ ಕೆಲವೇ ಕೆಲವರ ಅಧೀನದಲ್ಲಿ ಮರಳಿನ ಸಂಪತ್ತು ಅಡಗಿದೆ ಎಂದು ಆಪಾದಿಸಿದರು. ಸರಕಾರ ಒಂದು ಸ್ಪಷ್ಟ ನೀತಿಯನ್ನು ಮಾಡಿ, ಅದರ ಬೊಕ್ಕಸಕ್ಕೆ ಮರಳಿನಿಂದ ಬರುವ ಆದಾಯ ಸೇರಬೇಕು, ಇದರಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಅವರು ಒತ್ತಾಯಿಸಿದರು.
ಭಿಕ್ಷೆ ಬೇಡುವ ಪರಿಸ್ಥಿತಿಯಲ್ಲಿ ಇರುವವರು ಶ್ರೀಮಂತರಾಗಬೇಕು ಎಂಬುದು ನಮ್ಮ ಸಂಸ್ಕೃತಿ. ಆದರೆ ಭಿಕ್ಷೆ ಬೇಡಬೇಕು ಎಂಬ ಮನೋಸ್ಥಿತಿ ಅವರ ವೈಯಕ್ತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಹೇಳಿದ ಬಿಜೆಪಿ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಒಂದು ಪರವಾನಗಿಯಲ್ಲಿ ದಿನಕ್ಕೆ ೮ರಿಂದ ೧೦ ಲಾರಿಗಳು ಮರಳು ಸಾಗಾಟ ಮಾಡುತ್ತವೆ, ಉಡುಪಿ ಜಿಲ್ಲೆಯಲ್ಲಿ ಪ್ರತ್ಯೇಕ ಮರಳು ನೀತಿ ಇದೆ ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಇದನ್ನು ಜಿಲ್ಲೆಯಲ್ಲಿ ಯಾಕೆ ಜಾರಿಗೆ ತಂದಿಲ್ಲ ಎಂದು ಆಪಾದಿಸಿದರು.
ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಆನಂದ ಮಾತನಾಡಿ, ಸರಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ೨೩ರಂದು ಬಿ.ಸಿ.ರೋಡಿನಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಲಿದ್ದೇವೆ ಎಂದು ಘೋಷಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜನಸಾಮಾನ್ಯರು ಮರಳಿನ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿದ್ದಾರೆ. ಜಿಲ್ಲೆಯ ನದಿ ತೀರದಲ್ಲಿ ಪ್ರಕೃತಿದತ್ತವಾದ ಹೇರಳ ಮರಳು ಲಭ್ಯವಿದ್ದರೂ ಸರಕಾರದ ತಪ್ಪು ನೀತಿಯಿಂದಾಗಿ ಇದು ಅಕ್ರಮವಾಗಿ ಹೊರಜಿಲ್ಲೆ ಹೊರರಾಜ್ಯಗಳಿಗೆ ಸಾಗಾಟವಾಗುತ್ತಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕಾರ್‍ಯ ಕುಂಠಿತವಾಗಿದೆ. ಸಾಮಾನ್ಯ ಜನರಿಗೆ ಮನೆ-ಕಟ್ಟಡ ನಿರ್ಮಿಸಲು ಅನಾನುಕೂಲವಾಗಿದೆ, ಕಟ್ಟಡ ನಿರ್ಮಾಣದ ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ, ಪರಿಸ್ಥಿತಿ ಇಷ್ಟು ಗಂಭೀರ ಸ್ವರೂಪ ತಾಳಿದ್ದರೂ ಸರಕಾರ ಮೌನ ವಹಿಸಿದೆ. ಆದುದರಿಂದ ಸರಕಾರ ತಕ್ಷಣ ಇದರ ಬಗ್ಗೆ ಸೂಕ್ತ ನಿರ್ಧಾರ ತಳೆಯಬೇಕು ಎಂದು ಬಂಟ್ವಾಳ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಲಾಯಿತು.
ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ ಭಟ್, ಜಿಲ್ಲಾ ಕಾರ್ಯದರ್ಶಿ ಸುಗುಣ ಕಿಣಿ, ಮಾಜಿ ಶಾಸಕ ರುಕ್ಮಯ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ ಕೆ ಪೂಜಾರಿ, ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ತಾಲೂಕು ಪಂಚಾಯತ್ ಸದಸ್ಯರಾದ ಕುಲ್ಯಾರು ನಾರಾಯಣ ಶೆಟ್ಟಿ, ಗೀತಾ ಚಂದ್ರಶೇಖರ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೊನಪ್ಪ ದೇವಸ್ಯ, ರಮಾನಾಥ ರಾಯಿ, ಸೀತಾರಾಮ ಪೂಜಾರಿ, ಗಣೇಶ್ ರೈ, ಸೀಮಾ ಮಾಧವ, ದಿನೇಶ್ ಭಂಡಾರಿ, ಧರ್ಣಮ್ಮ, ವಿಜಯ ರೈ, ಹರಿಶ್ಚಂದ್ರ ಪೂಜಾರಿ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಮಹಾಬಲ ಶೆಟ್ಟಿ, ಭಾಸ್ಕರ್ ಟೈಲರ್, ಜನಾರ್ಧನ ಕುಲಾಲ್, ಸಂತೋಷ್ ರಾಯಿ, ಹರೀಶ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಗಂಗಾಧರ ಕೋಟ್ಯಾನ್, ವಸಂತ ಅಣ್ಣಳಿಕೆ, ಗೋಪಾಲ ಸುವರ್ಣ, ಗೋಪಾಲಕೃಷ್ಣ ಚೌಟ, ರಾಜಾರಾಮ ನಾಯಕ್, ಆನಂದ ಶಂಭೂರು, ಯಶೋಧರ ಕರ್ಬೆಟ್ಟು, ರವೀಶ್ ಶೆಟ್ಟಿ, ಗೋವಿಂದ ಪ್ರಭು, ದಯಾನಂದ ಸಪಲ್ಯ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.