ಪಾಣೆಮಂಗಳೂರು ಬಸದಿಯಲ್ಲಿ ಚಾತುರ್ಮಾಸ ಆಚರಣೆ ನಡೆಸುತ್ತಿರುವ ಶ್ರೀ 108 ಮುನಿ ಶ್ರೀ ವೀರ ಸಾಗರ ಮಹಾರಾಜರ ಸಾನಿಧ್ಯದಲ್ಲಿ ಶ್ರೀ ಕಲಿಕುಂಡ ಆರಾಧನೆ ನಮಿರಾಜ ಕೊಂಡೆ ಮತ್ತು ಮಕ್ಕಳ ಪ್ರಾಯೋಜಕತ್ವದಲ್ಲಿ, ಶ್ರಾವಕ ಬಂಧುಗಳ ಭಾಗವಹಿಸುವಿಕೆಯಲ್ಲಿ ನಡೆಯಿತು.
ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಆರಾಧನೆಯ ವಿಧಿ- ವಿಧಾನಗಳನ್ನು ಮತ್ತು ಪ್ರತೀ ಪೂಜೆಗಳನ್ನು ವಿವರವಾಗಿ ತಿಳಿಯಪಡಿಸಿ ಆರಾಧನೆಯನ್ನು ಸಂಪನ್ನಗೊಳಿಸಿದರು.
ಅಪರಾಹ್ನ ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಧರ್ಮ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು. ಕಾರ್ಕಳದ ನ್ಯಾಯವಾದಿ ಎಂ. ಕೆ. ವಿಜಯಕುಮಾರ್, ಸಂಪತ್ ಕುಮಾರ್ ಸಾಮ್ರಾಜ್ಯ ಶಿರ್ತಾಡಿ, ಮಂಗಳೂರಿನ ರಾಜವರ್ಮ ಬಲ್ಲಾಳ್. ಬೆಳ್ತಂಗಡಿಯ ಪ್ರಸನ್ನ ಕುಮಾರ್, ಬೆಳ್ತಂಗಡಿ ಹಾಗೂ ಉದ್ಯಮಿ ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.
ಜೈನ ಧರ್ಮ ಅತ್ಯಂತ ಶ್ರೇಷ್ಠವಾದ ಸಂಸ್ಕೃತಿಯನ್ನು ಹೊಂದಿದೆ, ಅದನ್ನು ಉಳಿಸಿ ಬೆಳೆಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ಪೂಜ್ಯ ಮುನಿಶ್ರೀಗಳ ಚಾತುರ್ಮಾಸದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುಣ್ಯ ಪ್ರಭಾವನೆಯಾಗಿದೆ ಎಂದು ವಿಜಯಕುಮಾರ್ ಹೇಳಿದರು. ಸಂಪತ್ ಕುಮಾರ್ ಮಾತನಾಡಿ, ಜೈನ ಧರ್ಮ ಅಹಿಂಸಾ ಪರಮೋ ಧರ್ಮ, ಅಹಿಂಸೆಯಿಂದ ವಿಶ್ವ ಶಾಂತಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಮುನಿಶ್ರೀ ಇಂದು ಮನುಷ್ಯ ಸುಖ ಸಂಸಾರದ ಮೇಲಿನ ರಾಗ, ಮೋಹದಲ್ಲಿ ಧರ್ಮದಿಂದ ದೂರ ಸರಿಯುತ್ತಾನೆ. ಧರ್ಮ ಮಾರ್ಗದಲ್ಲಿದ್ದರೆ ಮಾತ್ರ ಮೋಕ್ಷ ಸಾಧ್ಯ ಎಂದು ಉಪದೇಶ ನೀಡಿದರು.
ಮಂಗಲ ಪ್ರವಚನದ ನಂತರ ಧರ್ಮ ಸಭೆಯಲ್ಲಿ ಶಂಕಾ-ಸಮಾಧಾನಕಾರ್ಯಕ್ರಮ ನಡೆಯಿತು.ಅನೇಕ ಶ್ರಾವಕ ಬಂಧುಗಳ ಧಾರ್ಮಿಕ ಪ್ರಶ್ನೆಗಳಿಗೆ ಪೂಜ್ಯ ಮುನಿ ಮಹಾರಾಜರು ಉತ್ತರಿಸಿ ಶ್ರಾವಕರ ಶಂಕೆಗಳಿಗೆ ಶಾಸ್ತ್ರಗಳ ಆಧಾರಿತ ಉತ್ತರಗಳನ್ನು ಪ್ರತಿಯೊಬ್ಬರ ಮನಮುಟ್ಟುವಂತೆ ತಿಳಿಯಪಡಿಸಿದರು. ಕಾರ್ಯಕ್ರಮದಲ್ಲಿ ನೆಲ್ಲಿಕಾರು, ಮಂಗಳೂರು, ರೆಂಜಾಳ, ಮೂಡುಬಿದಿರೆ,ವೇಣೂರು, ಧರ್ಮಸ್ಥಳ, ಕಾರ್ಕಳ, ಹಾಸನ, ಬೆಳಗಾವಿ, ಬೆಂಗಳೂರು ಮುಂತಾದ ಕಡೆಗಳಿಂದ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು.
ಚಾತುರ್ಮಾಸ ಸಮಿತಿಯ ರತ್ನಾಕರ್ ಜೈನ್ ಮಂಗಳೂರು, ಸುದರ್ಶನ್ ಜೈನ್, ಧರಣೇಂದ್ರ ಇಂದ್ರ, ಭುವನೇಂದ್ರ ಇಂದ್ರ, ಸುಭಾಷ್ ಚಂದ್ರ ಜೈನ್, ಹರ್ಷರಾಜ್ ಬಲ್ಲಾಳ್, ದೀಪಕ್ ಇಂದ್ರ, ಕೆ. ಪ್ರವೀಣ್ ಕುಮಾರ್, ಆದಿರಾಜ್ ಜೈನ್, ಭರತ್ ರಾಜ್, ಬ್ರಿಜೇಶ್ ಜೈನ್ ಮುಂತಾದವರು ಉಪಸ್ಥಿತರಿದ್ದರು.