ಮದ್ಯಪಾನ ಸಂಪೂರ್ಣ ನಿಷೇಧಿಸುವುದು ಹಾಗೂ ಮದ್ಯಮುಕ್ತ ಚುನಾವಣೆ ನಡೆಯುವ ವಿಚಾರಕ್ಕೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ, ರೋಟರಿ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಭಾನುವಾರ ನಂದಾವರದಲ್ಲಿ ತಾಲೂಕು ಮಟ್ಟದ ನವಜೀವನ ಸಮಿತಿ ಸದಸ್ಯರ ಸಮಾವೇಶ ಮತ್ತು ಮದ್ಯವರ್ಜಿತರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭ ಸಮಿತಿ ಸಚಿವರಿಗೆ ಪಾನ ನಿಷೇಧ ಕುರಿತು ನೀಡಿದ ಮನವಿಗೆ ಸ್ಪಂದಿಸಿದ ಅವರು, ಮನವಿಯನ್ನು ಸರಕಾರದ ಗಮನಕ್ಕೆ ತರುತ್ತೇನೆ. ದೇಶಾದ್ಯಂತ ಪಾನಮುಕ್ತರಾಗಿ ಜನರು ಜೀವಿಸಬೇಕು ಎಂದು ನನ್ನ ಆಶಯವೂ ಇದೆ. ಮದ್ಯಮುಕ್ತ ಚುನಾವಣೆಗೆ ನನ್ನ ಸಹಮತವಿದೆ. ಎಂದು ಹೇಳಿದರು.
ಮದ್ಯಪಾನ ವಿರುದ್ಧ ಮನ:ಪರಿವರ್ತನೆ ಅಗತ್ಯ ಎಂದು ಹೇಳಿದ ಸಚಿವ ರೈ, ಕುಡಿತದಂತೆಯೇ ಡ್ರಗ್ಸ್ ಕೂಡ ಅಪಾಯಕಾರಿ. ಡಾ. ವೀರೇಂದ್ರ ಹೆಗ್ಗಡೆ ನಡೆಸುವ ಕಾರ್ಯಕ್ರಮ ನಮ್ಮೆಲ್ಲರ ಸ್ಫೂರ್ತಿ, ಎಲ್ಲ ಜಾತಿ, ಮತ, ಧರ್ಮದವರನ್ನು ಕೈಬೀಸಿ ಕರೆಯುತ್ತದೆ ಎಂದು ಹೇಳಿದರು.
ಈ ಸಂಧರ್ಭ ಪಾನಮುಕ್ತರಾದ ಕುಶಾಲಪ್ಪ ಮತು ಪಾನಮುಕ್ತರ ಪತ್ನಿ ಸಾವಿತ್ರಿ ಅಭಿಪ್ರಾಯ ಹಂಚಿಕೊಂಡರು.
ಆಶೀರ್ವಚನ ನೀಡಿದ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂತ ಸ್ವಾಮೀಜಿ ಮದ್ಯಪಾನ ಮಾಡದೇ ಇರುವ ನವಜೀವನ ಸಮಿತಿ ಸದಸ್ಯರಿಗೆ ಶುಭ ಹಾರೈಸಿದರು.
ಬಂಟ್ವಾಳ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ ಕಾರಂತ ಅಧ್ಯಕ್ಷತೆ ವಹಿಸಿ, ವೇದಿಕೆಯ ಹಕ್ಕೊತ್ತಾಯಗಳನ್ನು ಮಂಡಿಸಿದರು. ಸಂಪನ್ಮೂಲ ವ್ಯಕ್ತಿ ವಿವೇಕ್ ವಿನ್ಸೆಂಟ್ ಪಾಯಿಸ್ ಮಾತನಾಡಿ ಪಾನಮುಕ್ತ ಸಮಾಜ ಕಟ್ಟಲು ಗಾಂಧೀಜಿ ಅಂದು ಮುಂಚೂಣಿಯಲ್ಲಿದ್ದರೆ, ಇಂದು ಡಾ. ಹೆಗ್ಗಡೆ ಮುಂದಾಳತ್ವ ವಹಿಸಿದ್ದಾರೆ ಎಂದರು.
ಇದೇ ಸಂದರ್ಭ ಡಾ. ಹೆಗ್ಗಡೆಯವರ ಧ್ವನಿಮುದ್ರಿತ ಸಂದೇಶವನ್ನು ಸಭೆಗೆ ಕೇಳಿಸಲಾಯಿತು. ಸ್ವಚ್ಛತೆಯ ಕುರಿತು ರಾಜ್ಯಾದ್ಯಂತ ನಡೆಯುವ ಆಂದೋಲನದ ಕುರಿತು ಪ್ರಸ್ತಾಪಿಸಿದ ಡಾ. ಹೆಗ್ಗಡೆ, ಮತಿಭ್ರಷ್ಟ ಮಾಡುವ ಅಮಲು ಪದಾರ್ಥ ಸೇವಿಸಬೇಡಿ ಎಂದು ಮನವಿ ಮಾಡಿದರು.
ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ಅಧ್ಯಕ್ಷ ಎ.ಸಿ.ಭಂಡಾರಿ, ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ, ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಸಜಿಪಮುನ್ನೂರು ಗ್ರಾಪಂ ಅಧ್ಯಕ್ಷ ಶರೀಫ್ ನಂದಾವರ, ರೋಟರಿ ಕಾರ್ಯದರ್ಶಿ ಕೆ.ನಾರಾಯಣ ಹೆಗ್ಡೆ, ಪ್ರಮುಖರಾದ ಕಿರಣ್ ಹೆಗ್ಡೆ, ತಾಲೂಕು ಗ್ರಾಮಾಭಿವೃದ್ಧಿ ಯೋಜನೆ ಅಧ್ಯಕ್ಷ ಸದಾನಂದ ಗೌಡ ನಾವೂರು, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಗ್ರಾಮಾಭಿವೃದ್ಧಿ ಯೋಜನೆಯ ಚಂದ್ರಶೇಖರ ನೆಲ್ಯಾಡಿ, ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಸುನೀತಾ ನಾಯಕ್ ಉಪಸ್ಥಿತರಿದ್ದರು. ಕೆಯ್ಯೂರು ನಾರಾಯಣ ಭಟ್ ಸ್ವಾಗತಿಸಿದರು. ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.
ವಿಡಿಯೋ ವರದಿಗೆ ಕ್ಲಿಕ್ ಮಾಡಿರಿ: