ರಾಜ್ಯದಾದ್ಯಂತ ಸಂಪೂರ್ಣ ಪಾನ ನಿಷೇಧ ಜಾರಿಗೊಳಿಸಬೇಕು ಹಾಗೂ ಮದ್ಯಮುಕ್ತ ಚುನಾವಣೆ ನಡೆಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸರಕಾರವನ್ನು ಒತ್ತಾಯಿಸಿದೆ.
ಬಂಟ್ವಾಳದಲ್ಲಿ ನಡೆದ ಮದ್ಯವರ್ಜಿತರ ಅಭಿನಂದನೆ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶದಲ್ಲಿ ಈ ಮನವಿಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮೂಲಕ ನೀಡಿದ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮತ್ತು ತಾಲೂಕು ಅಧ್ಯಕ್ಷ ಪ್ರಕಾಶ ಕಾರಂತ, ಅಬಕಾರಿ ಟಾರ್ಗೆಟ್ ಪದ್ಧತಿಯನ್ನು ರದ್ದುಗೊಳಿಸಿ, ಅಬಕಾರಿ ಕಾಯ್ದೆ ತಿದ್ದುಪಡಿ ಮಾಡಬೇಕು. ಜನತೆಗೆ ನೆಮ್ಮದಿಯಿಂದ ಬದುಕಲು ಸಹಕರಿಸಬೇಕು ಎಂದು ಒತ್ತಾಯಿಸಿದರು.
ಮದ್ಯಪಾನದಿಂದ ಉಂಟಾಗುವ ಕಷ್ಟ, ಸರಕಾರದ ಬೊಕ್ಕಸಕ್ಕೆ ಆಗುವ ನಷ್ಟದ ಕುರಿತು ವೈಜ್ಞಾನಿಕ ಅಧ್ಯಯನ ಮಾಡಲು ಸಮಿತಿ ರಚಿಸಿ, ವರದಿ ಹೊರತಂದು ಜನರಿಗೆ ಮನವರಿಕೆ ಮಾಡಬೇಕು ಎಂದು ವೇದಿಕೆ ಒತ್ತಾಯಿಸಿದೆ.
ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮದ್ಯಪಾನ ಮತ್ತಿತರ ದುಶ್ಚಟಗಳ ವಿರುದ್ಧ ಜನಜಾಗೃತಿ ಮೂಡಿಸುವ ಪಠ್ಯಗಳನ್ನು ಅಳವಡಿಸಬೇಕು ಎಂದು ನವಜೀವನ ಸದಸ್ಯರ ಸಭೆ ಒತ್ತಾಯಿಸಿದ್ದು, ವೇದಿಕೆವತಿಯಿಂದ ನಡೆಸಲಾಗುವ ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮವನ್ನು ಸರಕಾರದ ಮೂಲಕ ನಡೆಸುವಂತೆ ಶಿಕ್ಷಣ ಇಲಾಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದೆ.
ಸರಕಾರದ ವತಿಯಿಂದ ಯಾವುದೇ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡಬಾರದು. ಎಂ.ಎಸ್.ಐ.ಎಲ್. ಮದ್ಯದಂಗಡಿಗಳನ್ನೂ ತಡೆಹಿಡಿಯಬೇಕುಜ. ನಗರ ಪ್ರದೇಶಗಳಲ್ಲಿರುವ ವೈನ್ ಶಾಪ್ ಗಳನ್ನು ಗ್ರಾಮಾಂತರ ಪ್ರದೇಶಕ್ಕೆ ಸ್ಥಳಾಂತರ ಮಾಡಬಾರದು. ಸ್ಥಳೀಯ ಜನಪರ ಸಂಘಟನೆಗಳು, ಒಕ್ಕೂಟಗಳು, ಧಾರ್ಮಿಕ ಕೇಂದ್ರಗಳು, ದಲಿತ ಸಂಘಟನೆಯವರು ಆಕ್ಷೇಪಿಸಿದ ಕಡೆಗಳಲ್ಲಿ ಯಾವುದೇ ಮದ್ಯದಂಗಡಿಗಳಿಗೆ ಅವಕಾಶ ನೀಡಬಾರದು ಎಂದು ವೇದಿಕೆ ಒತ್ತಾಯಿಸಿದೆ.
ಗ್ರಾಮಾಂತರ ಪ್ರದೇಶಗಳಲ್ಲಿರುವ ಅಂಗಡಿ, ಹೋಟೆಲ್ ಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಇದರಿಂದ ವೇದಿಕೆಯ ವತಿಯಿಂದ ನಡೆಯುವ ಶಿಬಿರಗಳಲ್ಲಿ ಪಾನಮುಕ್ತರಾದವರಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಇದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದಜು ಸಭೆ ಆಗ್ರಹಿಸಿದೆ.
ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯಚಟುವಟಿಕೆಗಳು ಪ್ರಸ್ತುತ ವೇದಿಕೆಯೊಂದಿಗೆ ಜಂಟಿಯಾಗಿ ನಡೆಸಲಾಗುತ್ತಿದೆ. ಇದನ್ನು ಮುಂದುವರಿಸಬೇಕು. ವೇದಿಕೆ ಪಾನಮುಕ್ತ ಸಮಾಜ ನಿರ್ಮಾಣದ ಈ ಕೈಂಕರ್ಯದಲ್ಲಿ ಸರಕಾರ ಸ್ಪಂದಿಸಿ, ಅನುದಾನ ನೀಡಬೇಕು ಎಂದು ಸಭೆ ಆಗ್ರಹಿಸಿದೆ.