ದೇಯಿ ಬೈದೇತಿ ವಿಗ್ರಹವನ್ನು ಅಪಮಾನಿಸಿ ಫೊಟೋ ತೆಗೆದು, ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಮತಾಂಧ ಶಕ್ತಿಗಳ ವಿರುದ್ಧ ಹಾಗೂ ಜಿಲ್ಲೆಯ ಶ್ರದ್ಧಾಕೇಂದ್ರಗಳ ರಕ್ಷಣೆಗಾಗಿ ಅಕ್ಟೋಬರ್ 10ರಂದು ಬಿಜೆಪಿ ಪಾದಯಾತ್ರೆ ನಡೆಸಲಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ದೇಯಿ ಬೈದೇತಿ ಔಷಧವನದವರೆಗೆ ಅ.೧೦ರಂದು ಬೆಳಗ್ಗೆ 9.30 ರಿಂದ ಪಾದಯಾತ್ರೆ ನಡೆಯುವುದು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿಯ ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು ಹಾಗೂ ಹಿತೈಷಿಗಳು ಕಾರ್ಯಕರ್ತರೊಂದಿಗೆ ಭಾಗವಹಿಸುವರು ಎಂದು ಬಿಜೆಪಿ ಮುಖಂಡ ಎ.ರುಕ್ಮಯ ಪೂಜಾರಿ ಬಿ.ಸಿ.ರೋಡಿನ ಪಕ್ಷ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಯಿ ಬೈದೇತಿ ವಿಗ್ರಹ ಅಪಮಾನ ಮಾಡಿ, ಸಮಸ್ತ ಹಿಂದು ಸಮಾಜದ ಭಕ್ತರ ಭಾವನೆಗಳಿಗೆ ವಿರುದ್ಧವಾಗಿ ವರ್ತಿಸಿರುವವರಿಗೆ ಪ್ರೋತ್ಸಾಹ ನೀಡುವವರ ವಿರುದ್ಧ ಈ ಪ್ರತಿಭಟನೆ ನಡೆಯುತ್ತದೆ ಎಂದು ಪೂಜಾರಿ ತಿಳಿಸಿದರು.
ಈ ಸಂದರ್ಭ ಪಕ್ಷ ಪ್ರಮುಖರಾದ ರಾಜೇಶ್ ನಾಯ್ಕ್ ಉಳೇಪಾಡಿಗುತ್ತು, ದೇವದಾಸ ಶೆಟ್ಟಿ, ಜಿ.ಆನಂದ, ರಾಮದಾಸ ಬಂಟ್ವಾಳ, ದಿನೇಶ ಭಂಡಾರಿ, ಮೋನಪ್ಪ ದೇವಸ್ಯ, ದಿನೇಶ್ ಅಮ್ಟೂರು, ರಮಾನಾಥ ರಾಯಿ, ಸೀತಾರಾಮ ಪೂಜಾರಿ ಉಪಸ್ಥಿತರಿದ್ದರು.