ಜಿಲ್ಲಾ ಸುದ್ದಿ

ದ.ಕ. ವಿಷನ್ 2025: ಕೃಷಿ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಒತ್ತು

ಮುಂದಿನ ಏಳು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ‘ವಿಷನ್ 2025’ ಯೋಜನೆ ತಯಾರಿಸಲು ಮಂಗಳವಾರ  ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಾಗಾರದಲ್ಲಿ ಕೃಷಿ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಗೆ ಒತ್ತು ನೀಡಲಾಗಿದೆ.
ಸಮಾಜದ ವಿವಿಧ ವಲಯದ ಗಣ್ಯರು, ತಜ್ಞರು, ಪರಿಣಿತರು, ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಜನಸಾಮಾನ್ಯರು ಒಳಗೊಂಡಂತೆ ಮುಂದಿನ ಏಳು ವರ್ಷಗಳ ಅಭಿವೃದ್ಧಿ ಮುನ್ನೋಟ ಸಿದ್ಧಪಡಿಸಲು  ಇಂದಿನ ಕಾರ್ಯಾಗಾರ ಆಯೋಜಿಸಲಾಗಿತ್ತು.
ಒಟ್ಟು 5 ಪ್ರಮುಖ ಕ್ಷೇತ್ರಗಳನ್ನು ಆಧರಿಸಿ 13 ವಿಷಯಗಳ ಅಭಿವೃದ್ಧಿಗೆ ಮುನ್ನೋಟ ರಚನೆಯಾಗಲಿದೆ. ಈ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಪ್ರಸಕ್ತ ಕಾಲಕ್ಕೆ ತಕ್ಕಂತೆ ಆಗಬೇಕಾದ ಬದಲಾವಣೆ ಮತ್ತಿತರ ಕಾರ್ಯಗಳ ಕುರಿತು ಚರ್ಚೆ, ಸಂವಾದ, ಅಭಿಪ್ರಾಯ ಮಂಡನೆಗಳಾದವು. ಜಿಲ್ಲೆಯ ಸಮಗ್ರ ಬೆಳವಣಿಗೆ ದೃಷ್ಠಿಯಿಂದ ಈ ಕೆಳಗಿನ ಪ್ರಮುಖ ಅಂಶಗಳು ಕಾರ್ಯಾಗಾರದಲ್ಲಿ ಮೂಡಿಬಂದವು.
ಕೃಷಿ, ಗ್ರಾಮೀಣಾಭಿವೃದ್ಧಿ: ಜಿಲ್ಲೆಯಲ್ಲಿ ವಿಶೇಷ ಕೃಷಿ ಆರ್ಥಿಕ ವಲಯ ಸ್ಥಾಪನೆ, ಕೃಷಿ ಕಾರ್ಮಿಕರ ಕೊರತೆ ನಿವಾರಿಸಲು ಗ್ರೀನ್ ಆರ್ಮಿ ಎಂಬ ಘಟಕ ಸ್ಥಾಪಿಸಿ ಕೃಷಿ ಚಟುವಟಿಕೆಗಳಲ್ಲಿ ತರಬೇತಿ ನೀಡುವುದು, ತರಕಾರಿ ಮತ್ತು ಹಣ್ನು ಹಂಪಲು ಮಾರಾಟಕ್ಕೆ ಆತ್ಯಾಧುನಿಕ ಸೌಕರ್ಯಗಳುಳ್ಳ ಬ್ರಾಂಡೆಡ್ ಮಳಿಗೆಗಳ ಸ್ಥಾಪನೆ, ಕೃಷಿ ಉತ್ಪನ್ನಗಳ ಶೈತ್ಯಾಗಾರ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ,  ಜಿಲ್ಲೆಯಲ್ಲಿ ಸಾಕಷ್ಟು ಹಲಸು ಬೆಳೆಯಾಗುತ್ತಿದ್ದರೂ ಬೆಳೆಯುವ ಶೇಕಡಾ 80ರಷ್ಟು ಹಲಸು ಹಣ್ಣು  ನಿರುಪಯೋಗವಾಗುತ್ತಿದ್ದು, ಈ ನಿಟ್ಟಿನಲ್ಲಿ ಹಲಸಿವ ವಿವಿಧ ಉತ್ಪನ್ನಗಳ ತಯಾರಿಕೆ ಘಟಕಗಳ ಸ್ಥಾಪನೆಯಾಗಬೇಕಿದೆ. ಮೀನುಗಾರಿಕಾ ಮಾರುಕಟ್ಟೆಗಳನ್ನು ಉತ್ತಮ ಶುಚಿತ್ವ ಹಾಗೂ ಅತ್ಯಾಧುನಿಕವಾಗಿ ಅಭಿವೃದ್ಧಿ ಪಡಿಸಬೇಕು. ಒಣಮೀನು ಉದ್ಯಮಕ್ಕೆ ಸೋಲಾರ್ ಒಣಗಿಸುವ ಘಟಕಗಳ ಸ್ಥಾಪನೆ, ಕೃಷಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದು, ಶಾಲಾ ಮಕ್ಕಳನ್ನು ಕೃಷಿ ಮತ್ತು ತೋಟಗಾರಿಕೆ ಅಭಿವೃದ್ಧಿ ಹೊಂದಿದ ಸ್ಥಳಗಳಿಗೆ ಪ್ರವಾಸ ಕರೆದುಕೊಂಡು ಹೋಗುವುದು, ಕೃಷಿ ಟ್ರಾಕ್ಟರ್ ಮತ್ತು ಯಂತ್ರಗಳನ್ನು ಓಲಾ ಕ್ಯಾಬ್ ಮಾದರಿಯಲ್ಲಿ ಬಾಡಿಗೆಗೆ ಒದಗಿಸುವುದು.
ನಗರಾಭಿವೃದ್ಧಿ, ಮೂಲಸೌಕರ್ಯ: ಸಣ್ಣ ಕೈಗಾರಿಕಾ ಪ್ರದೇಶಗಳನ್ನು ವಿಸ್ತರಿಸುವುದು ಅಗತ್ಯ. ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶವನ್ನು ಇನ್ನಷ್ಟು ವಿಸ್ತರಿಸಬೇಕು. ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಇಂಡಸ್ಟ್ರಿಯಲ್ ಟೌನ್‍ಶಿಫ್ ಸ್ಥಾಪನೆ, ಟ್ರಕ್ ಟರ್ಮಿನಲ್ ಸ್ಥಾಪನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ರನ್‍ವೇ ವಿಸ್ತರಣೆ, ಮಂಗಳೂರು-ಮುಂಬೈ ಹಾಗೂ ಮಂಗಳೂರು-ಬೆಂಗಳೂರು ರೈಲು ಮಾರ್ಗವನ್ನು ದ್ವಿಗುಣ(ಡಬ್ಲಿಂಗ್)ಗೊಳಿಸುವುದು, ನಗರ ಪ್ರದೇಶಗಳ ರಸ್ತೆಗಳಲ್ಲಿ ವಿದ್ಯುತ್, ದೂರವಾಣಿ, ಕೇಬಲ್ ಅಳವಡಿಕೆಗೆ ಪ್ರತ್ಯೇಕ ಡಕ್ ನಿರ್ಮಾಣ, ಆಯಾ ರಸ್ತೆಯ ವಿಸ್ತೀರ್ಣ ಆಧರಿಸಿ ಕಟ್ಟಡಗಳ, ಫ್ಲಾಟ್‍ಗಳ ನಿರ್ಮಾಣಕ್ಕೆ ಅನುಮತಿ, ದಾರಿದೀಪಗಳನ್ನು ಶೇಕಡಾ 100ರಷ್ಟು ಎಲ್‍ಇಡಿ ದೀಪಗಳನ್ನು ಅಳವಡಿಸುವುದು.
ಶಿಕ್ಷಣ: ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಮಾಕ್ರ್ಸ್ ಆಧಾರಿತ ಒತ್ತಡದ ಕಲಿಕೆಯನ್ನು ನಿವಾರಿಸಲು ರ್ಯಾಂಕ್ ಮತ್ತು ಗ್ರೇಡಿಂಗ್ ಪದ್ಧತಿಯಲ್ಲಿ ಬದಲಾವಣೆ ಅಗತ್ಯವಿದೆ. ತಾರತಮ್ಯ, ಅಸ್ಪ್ರಶ್ಯತೆ, ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಶಾಲಾ ಹಂತದಲ್ಲೇ ಕಾನೂನಿನ ಮಹತ್ವದ ಅರಿವು ಮೂಡಿಸುವುದು, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಅನುಪಾತದ ಈಗಿನ ಪದ್ಧತಿಯನ್ನು ಕೈಬಿಟ್ಟು ಪ್ರತಿಯೊಂದು ತರಗತಿಗೂ ಕನಿಷ್ಠ ಒಬ್ಬರು ಶಿಕ್ಷಕರು ಇರುವಂತಹ ವ್ಯವಸ್ಥೆ ಜಾರಿಗೆ ಬರಬೇಕು, ಮಾದಕ ವಸ್ತುಗಳಿಗೆ ವಿದ್ಯಾರ್ಥಿಗಳು ಬಲಿಯಾಗದಂತೆ ತೀವ್ರ ಕ್ರಮ ಕೈಗೊಳ್ಳುವುದು.
ಕೈಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿ: ಐಟಿ ಉದ್ಯಮಗಳಿಗೆ ಒತ್ತು ನೀಡಲು ಸರಕಾರದ ಪ್ರಾಯೋಜಕತ್ವದಲ್ಲಿ 3 ಲಕ್ಷ ಚದರ ಅಡಿಯ ಐಟಿ ಪಾರ್ಕ್ ಸ್ಥಾಪನೆ, ಜಿಲ್ಲೆಯ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೆಗಳಿಗೆ ಉತ್ತಮ ಸಂಬಂಧ ಕಲ್ಪಿಸುವುದು, ಜಿಲ್ಲೆಯ ವಿದ್ಯಾವಂತರು ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳುವುದುನ್ನು ತಪ್ಪಿಸಲು ಸ್ಥಳೀಯ ವಿದ್ಯಾವಂತರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡುವುದು, ಸ್ಪರ್ಧಾತ್ಮಕ ಹಾಗೂ ವೃತ್ತಿಪತ ತರಬೇತಿಗಳಿಗೆ ತರಬೇತಿ ಸಂಸ್ಥೆ ಸ್ಥಾಪನೆ. ಕರಾವಳಿ ಕರ್ನಾಟಕದ ಪ್ರವಾಸೋದ್ಯಮದ ಅಭಿವೃದ್ಧಿಗೆ ಕೋಸ್ಟಲ್ ಟೂರಿಸಂ ಸಕ್ರ್ಯುಟ್, ಜಿಲ್ಲೆಯಲ್ಲಿ ಸಾಕಷ್ಟು ಮೆಡಿಕಲ್ ಕಾಲೇಜು, ಉನ್ನತ ಆಸ್ಪತ್ರೆಗಳಿರುವುದರಿಂದ ವೈದ್ಯಕೀಯ ಪ್ರವಾಸೋದ್ಯಮಕ್ಕೆ ಒತ್ತು ನೀಡುವುದು, ಸಾಗರ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹಿಸಲು ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹಡಗು ಯಾನ ಪುನ: ಆರಂಭಿಸಬೇಕು.
ಆಡಳಿತ, ಕಾನೂನು ಮತ್ತು ನ್ಯಾಯ: ಎಲ್ಲಾ ಸರಕಾರಿ ಸೇವೆಗಳನ್ನು ಸಕಾಲ ಅಡಿ ತರಬೇಕು, ಎಲ್ಲಾ ನಾಗರೀಕ ಸೇವೆಗಳನ್ನು ಇ-ಸೇವೆಯಡಿಯೂ ಒದಗಿಸಬೇಕು, ಮಹಿಳಾ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಬೇಕು, ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ತರಬೇತಿ ಹೊಂದಿದ ಸಾರ್ವಜನಿಕರಿಗೆ  ಕೌನ್ಸಿಲರ್‍ಗಳನ್ನು ನೇಮಿಸಬೇಕು, ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್‍ನ ಪೀಠ ಸ್ಥಾಪಿಸಬೇಕು, ಮಕ್ಕಳ ಸಂಬಂಧಿತ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ಮಕ್ಕಳ ಸ್ನೇಹಿ ನ್ಯಾಯಾಲಯಗಳ ಸ್ಥಾಪನೆ, ಎಲ್ಲಾ ರೀತಿಯ ನ್ಯಾಯಾಲಯಗಳು ಒಂದೇ ಕಟ್ಟಡ ಆವರಣದಲ್ಲಿ ಕಾರ್ಯನಿರ್ವಹಿಸುವಂತಾಗಬೇಕು.
ಸಮಾರೋಪ: ದಕ್ಷಿಣ ಕನ್ನಡ ವಿಷನ್ 2025 ಕಾರ್ಯಕ್ರಮದ ಚರ್ಚೆಯಲ್ಲಿ ಶಾಸಕರಾದ ಶಕುಂತಳಾ ಶೆಟ್ಟಿ, ಅಭಯಚಂದ್ರ ಜೈನ್ ಭಾಗವಹಿಸಿದ್ದರು. ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ರಾಜ್ಯ ಸರಕಾರವು ರಸ್ತೆ ಸೇರಿದಂತೆ ಸರಕಾರವು ಮೂಲಸೌಕರ್ಯ ಅಭಿವೃದ್ಧಿಗೆ ಹಿಂದೆಂದೂ ಇಲ್ಲದಷ್ಟು ಮಹತ್ವ ನೀಡಿದೆ. ಇದರಿಂದ ಕೈಗಾರಿಕೆ ಕೃಷಿ ಕ್ಷೇತ್ರಗಳಲ್ಲಿ ಜಿಲ್ಲೆ ಪ್ರಗತಿ ಹೊಂದುತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮಾತನಾಡಿ, ಇಂದಿನ ಕಾರ್ಯಾಗಾರದಲ್ಲಿ ಮೂಡಿಬಂದ ಎಲ್ಲಾ ವಿಷಯಗಳನ್ನೊಳಗೊಂಡಂತೆ ವಿಷನ್ 2025 ತಯಾರಿಸಿ, 2025ರೊಳಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರಕಾರ ಯೋಜನೆ ರೂಪಿಸಲಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್ ಮತ್ತಿತರರು ಇದ್ದರು. ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ವಂದಿಸಿದರು.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts