ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಾತೃಪೂರ್ಣ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ನರಿಕೊಂಬು ಅಂಗನವಾಡಿ ಕೇಂದ್ರದಲ್ಲಿ ಅ.೨ರಂದು ಮಧ್ಯಾಹ್ನ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂಗನವಾಡಿ ಕೇಂದ್ರ ಎಂದರೆ ಪೂರಕ ಪೌಷ್ಟಿಕ ಆಹಾರ ಕೊಡುವ ಕೇಂದ್ರ. ಇಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಗರ್ಭಾವಸ್ಥೆಯಲ್ಲಿರುವವರು ಹಾಗೂ ಬಾಣಂತಿಯರನ್ನು ಕರೆದುಕೊಂಡು ಬಂದು ಅವರಿಗೆ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮ ಮಾತೃಪೂರ್ಣ ಯೋಜನೆ. ಆರಂಭದಲ್ಲಿ ಯಾವುದೇ ಯೋಜನೆಗಳಿಗೆ ಎಡರು ತೊಡರುಗಳು ದೊರಕುವುದು ಸಹಜ. ಆದರೆ ಇದನ್ನು ನಿವಾರಿಸಿ, ಜನಸಾಮಾನ್ಯರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಿ ಎಂದು ರೈ ಕಿವಿಮಾತು ಹೇಳಿದರು.
ಗುಜರಾತ್ ಬಳಿಕ ಅಧಿಕ ಸಂಖ್ಯೆಯ ಅಂಗನವಾಡಿ ಕೇಂದ್ರಗಳನ್ನು ಬಂಟ್ವಾಳ ತಾಲೂಕು ಹೊಂದಿದೆ. ಮಂಗಳೂರು ಗ್ರಾಮಾಂತರ ಮತ್ತು ಬಂಟ್ವಾಳ ತಾಲೂಕಿಗೆ ಅಂಗನವಾಡಿ ಕೇಂದ್ರಗಳ ಅಗತ್ಯದ ಕುರಿತು ಅಂದಿನ ಸಚಿವೆ ಮಾರ್ಗರೆಟ್ ಆಳ್ವ ಅವರ ಬಳಿ ಹಾಗೂ ಬಳಿಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಬಸವರಾಜೇಶ್ವರಿ ಬಳಿ ಚರ್ಚಿಸಿದ್ದೆ. ಇದರ ಫಲವಾಗಿಯೇ ಇಂದು ಬಂಟ್ವಾಳ ತಾಲೂಕು ದೇಶದಲ್ಲಿ ಅತಿ ಹೆಚ್ಚು ಅಂಗನವಾಡಿ ಕೇಂದ್ರಗಳಿರುವ ತಾಲೂಕುಗಳ ಪೈಕಿ ಎರಡನೇ ಸ್ಥಾನ ಪಡೆದಿದೆ ಎಂದ ರೈ, ಮಾತೃಪೂರ್ಣ ಯೋಜನೆಯ ಮಹತ್ವವನ್ನು ವಿವರಿಸಿದರು.
ಅದಾದ ಬಳಿಕ ಮಾತೃಪೂರ್ಣ ಯೋಜನೆಯ ಆಹಾರವನ್ನು ಒದಗಿಸುವ ಮೂಲಕ ಸಾಂಕೇತಿಕ ಉದ್ಘಾಟನೆ ಮಾಡಿದ ರೈ, ಇದರ ಪೂರ್ಣ ಪ್ರಯೋಜನ ಪಡೆಯಲು ಮುತುವರ್ಜಿ ವಹಿಸುವಂತೆ ತಿಳಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್, ತಾಪಂ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಡಿಎಚ್‌ಒ ರಾಮಕೃಷ್ಣ, ತಾಲೂಕು ವೈದ್ಯಾಧಿಕಾರಿ ದೀಪಾ ಪ್ರಭು, ಗ್ರಾಪಂ ಉಪಾಧ್ಯಕ್ಷೆ ರಾಜೀವಿ, ವಿಜಯಾ ಬ್ಯಾಂಕ್ ಮೆನೇಜರ್ ಬೇಬಿ ಕುಂದರ್, ಮುಖಂಡ ಜನಾರ್ದನ ಚಂಡ್ತಿಮಾರ್, ನರಿಕೊಂಬು ಗ್ರಾಪಂ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸುಂದರ ಪೂಜಾರಿ ಸ್ವಾಗತಿಸಿದರು. ಉಸ್ಮಾನ್ ವಂದಿಸಿದರು. ಸುಧಾ ಜೋಷಿ ಕಾರ್ಯಕ್ರಮ ನಿರೂಪಿಸಿದರು.