ಭಾರತದಲ್ಲಿ ಗುರುಪರಂಪರೆ ಶ್ರೇಷ್ಠವಾದುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಪಾಣೆಮಂಗಳೂರಿನಲ್ಲಿ ಚಾತುರ್ಮಾಸ ವ್ರತಾಚರಣೆ ನಡೆಸುತ್ತಿರುವ ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಳಿಕ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಸಂಸದ, ಪರಮ ಪೂಜ್ಯರಾದ ದಿಗಂಬರ ಮುನಿಗಳ ದರ್ಶನ, ಪ್ರಭಾವನೆ ಮತ್ತು ಆಶೀರ್ವಾದಿಂದ ಭವ್ಯ ಭಾರತ ಇನ್ನಷ್ಟು ಬೆಳಗಲಿ ಎಂದು ಆಶಿಸಿದರು.
ಇದಕ್ಕೂ ಮುನ್ನ ಶ್ರೀ ಪಂಚ ಪರಮೇಷ್ಠಿ ಆರಾಧನೆಯನ್ನು ಸುಮನಾಜಿ ಅಮ್ಮ ಮತ್ತು ಮಕ್ಕಳ ಪ್ರಾಯೋಜಕತ್ವದಲ್ಲಿ, ಸುಮಾರು 250 ಶ್ರಾವಕ ಬಂಧುಗಳ ಉಪಸ್ಥಿತಿಯಲ್ಲಿ ನಡೆಸಲಾಯಿತು.
ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರ ಪಾವನ ಸಾನ್ನಿಧ್ಯದಲ್ಲಿ, ಶ್ರೀ ಕ್ಷೇತ್ರ ಕನಕಗಿರಿಯ ಪರಮ ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಸಾಮೂಹಿಕ ಶ್ರೀ ಪಂಚ ಪರಮೇಷ್ಠಿ ಆರಾಧನೆಯ ವಿಧಿ- ವಿಧಾನಗಳು ನಡೆದವು.
ಈ ಸಂದರ್ಭ ಮಾತನಾಡಿದ ಪರಮ ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು, ಕರ್ನಾಟಕವು ಜೈನ ಧರ್ಮದ ತವರು. ವಿನಯ, ವಿದ್ಯೆ, ಧನಕ್ಕೆ ಜನ್ಮ ಸ್ಥಾನ. ವಿನಯವೇ ಮೋಕ್ಷ ಮಾರ್ಗ ಎಂದರು.
ಕಾರ್ಕಳ ಭುಜಬಲಿ ಬ್ರಹಚರ್ಯ ಆಶ್ರಮದ ವಿದ್ಯಾರ್ಥಿಗಳು ಮತ್ತು ಮೂಡಬಿದರೆ ಎಕ್ಸೆಲೆಂಟ್ ಕಾಲೇಜಿನ ಸಂಸ್ಥಾಪಕ ಯುವರಾಜ್ ಜೈನ್ ಹಾಗೂ ಅಲ್ಲಿನ ವಿದ್ಯಾರ್ಥಿಗಳು, ನೆಲ್ಲಿಕಾರು, ಮಂಗಳೂರು, ಮೂಡುಬಿದಿರೆ,ವೇಣೂರು, ಧರ್ಮಸ್ಥಳ, ಕಾರ್ಕಳ, ಹಾಸನ, ಬೆಳಗಾವಿ, ಬೆಂಗಳೂರು ಮುಂತಾದ ಕಡೆಗಳಿಂದ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು.
ಚಾತುರ್ಮಾಸ ಸಮಿತಿಯ ರತ್ನಾಕರ್ ಜೈನ್ ಮಂಗಳೂರು, ಸುದರ್ಶನ್ ಜೈನ್, ಸಂಪತ್ ಕುಮಾರ್ ಶೆಟ್ಟಿ, ಧರಣೇಂದ್ರ ಇಂದ್ರ, ಭುವನೇಂದ್ರ ಇಂದ್ರ, ಸುಭಾಷ್ ಚಂದ್ರ ಜೈನ್, ಹರ್ಷರಾಜ್ ಬಲ್ಲಾಳ್, ದೀಪಕ್ ಇಂದ್ರ, ಕೆ. ಪ್ರವೀಣ್ ಕುಮಾರ್, ಆದಿರಾಜ್ ಜೈನ್, ಭರತ್ ರಾಜ್, ಬ್ರಿಜೇಶ್ ಜೈನ್ ಮುಂತಾದವರು ಉಪಸ್ಥಿತರಿದ್ದರು.