ಬಡವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಸುಮಾರು 16 ಸಾವಿರ 94ಸಿಸಿ ಹಕ್ಕುಪತ್ರ ಒದಗಿಸುವ ಮೂಲಕ ಬಂಟ್ವಾಳ ತಾಲೂಕು ಮುಂಚೂಣಿಯಲ್ಲಿದ್ದು, ಮಹಾತ್ಮಾ ಗಾಂಧೀಜಿ ತತ್ವದ ನೈಜ ಅನುಷ್ಠಾನವಾದಂತಾಗಿದೆ ಎಂದು ಬಂಟ್ವಾಳ ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದ್ದಾರೆ.
ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣೆಯ ತಾಲೂಕು ಸಮಿತಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಗಾಂಧೀ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧೀಜಿ ಕಂಡ ಕನಸು ನನಸಾಗಿಸುವತ್ತ ಇಲಾಖೆಯ ನೌಕರರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅವರ ಜೀವನ ಸಂದೇಶ ಈ ಕಾಲಕ್ಕೆ ಪ್ರಸ್ತುತ ಎಂದು ಹೇಳಿದ ಅವರು, ಇಂದಿನ ಪ್ರಜಾಸತ್ತಾತ್ಮಕ ವ್ಯವಸ್ಥೆ ರೂಪುಗೊಳ್ಳುವಂತೆ ಮಾಡಲು ಗಾಂಧೀಜಿಯವರ ಪರಿಶ್ರಮ ಇರುವುದನ್ನು ಪ್ರತಿಯೊಬ್ಬರು ಕೂಡ ಅರ್ಥೈಸಿಕೊಳ್ಳಬೇಕೆಂದು ಕಿವಿ ಮಾತು ನುಡಿದರು.
ಈ ಸಂದರ್ಭ ಅತಿಥಿಯಾಗಿ ಮಾತನಾಡಿದ www.bantwalnews.com ಸಂಪಾದಕ ಹರೀಶ ಮಾಂಬಾಡಿ, ಇಂದು ಮಹಾತ್ಮ ಗಾಂಧೀಜಿ ಜಯಂತಿಯ ಜತೆಗೆ ಮಾಜಿ ಪ್ರಧಾನಿ ಲಾಲಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಇಬ್ಬರೂ ಭಾರತವನ್ನು ಸ್ವಾವಲಂಬಿಯನ್ನಾಗಿಸಲು ಪರಿಶ್ರಮಿಸಿದವರು. ತ್ವೇಷಮಯ ಪರಿಸ್ಥಿತಿಯ ಸಂದರ್ಭ ಸತ್ಯ, ಅಹಿಂಸೆಯ ಗಾಂಧೀಜಿ ತತ್ವ ಹಾಗೂ ರೈತರನ್ನು ಗುರುತಿಸುವಂತೆ ಮಾಡಿದ ಶಾಸ್ತ್ರೀಜಿಯವರ ಮಾತು ಪ್ರೇರಣಾದಾಯಕವಾಗಿದೆ ಎಂದರು.
ಪತ್ರಕರ್ತ ಫಾರೂಕ್ ಬಂಟ್ವಾಳ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿ, ಗಾಂಧೀಜಿ ಮತ್ತು ಶಾಸ್ತ್ರೀಯವರು ತಮ್ಮ ನಡವಳಿಕೆ ಮೂಲಕ ದೇಶದ ಸಾಮಾನ್ಯ ಜನರನ್ನೂ ಪ್ರೇರೇಪಿಸುವಂತೆ ಮಾಡಿದವರು ಎಂದು ಹೇಳಿದರು.
ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ್ ಪ್ರಭು, ಉಪತಹಶೀಲ್ದಾರ್ ಸೀತಾರಾಮ, ಗ್ರೆಟ್ಟಾ ಮಸ್ಕರೇಂಞಸ್, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ಭೂಮಿ ಶಾಖೆಯ ಕಂದಾಯ ನಿರೀಕ್ಷರಾದ ಸುಧಾ ಎಂ, ಕಂದಾಯ ನಿರೀಕ್ಷಕ ದಿವಾಕರ ಮುಗಳಿಯ, ತಾಲೂಕು ಕಚೇರಿ ಸಿಬ್ಬಂದಿ ವರ್ಗ, ಗ್ರಾಮಕರಣಿಕರು, ಗ್ರಾಮ ಸಹಾಯಕರು, ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ವಂದಿಸಿದರು.