ಬಂಟ್ವಾಳ

ಗೋಪಾಲಕೃಷ್ಣ ಅಡಿಗ ಕಾವ್ಯ ಮರುಓದು ಅಗತ್ಯ: ಡಾ. ವಿವೇಕ ರೈ

ಶತಮಾನದ ಸಾಹಿತಿ ಗೋಪಾಲಕೃಷ್ಣ ಅಡಿಗರ ಕಾವ್ಯಗಳ ಮರುಓದು ಅಗತ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಿ.ಎ.ವಿವೇಕ ರೈ ಹೇಳಿದರು.

ಜಾಹೀರಾತು

ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಭಾನುವಾರ ಸಂಜೆ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಭಾಷಣ ಮಾಡಿದ ರೈ, ಅಡಿಗರ ಬರಹ ಧ್ಯಾನಸ್ಥ ಮನಸ್ಸಿನಿಂದ ಮತ್ತು ಚಿಕಿತ್ಸಕ ಪ್ರಜ್ಞೆಯಿಂದ ಮೂಡಿವೆ. ಓದಿನಲ್ಲೂ ಹೊಸತನದ ಸಾಧ್ಯತೆಯನ್ನು ನೀಡಬಲ್ಲ ಸಾಮರ್ಥ್ಯವಿದೆ. ಅವರ ಸಾಹಿತ್ಯವನ್ನು ಅಧ್ಯಯನಶೀಲರಾಗಿ ಓದುವುದೇ ಹೊಸ ತಲೆಮಾರು ನೀಡುವ ಗೌರವವಾಗಿದೆ ಎಂದು ತಿಳಿಸಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಸಾಹಿತ್ಯ ಬರಹದ ಬಿಡಿ ಸಾಲನ್ನು ಗಮನಿಸಿ ಕವಿಯನ್ನು ಅಥವಾ ಆತನ ಕೃತಿಯನ್ನು ತೀರ್ಮಾನಿಸುವುದು ಸರಿಯಾದ ಕ್ರಮವಲ್ಲ. ಅಡಿಗರ ಒಟ್ಟು ಕಾವ್ಯ ಸಂಪುಟವನ್ನು ಮಹಾಕಾವ್ಯವೆಂದು ಪರಿಗಣಿಸಬಹುದು ಎಂದು ತಿಳಿಸಿದರು.

ಇದೇ ಸಂದರ್ಭ ಗೋಪಾಲಕೃಷ್ಣ ಅಡಿಗ ಅವರ ಸಂಬಂಧಿ ಹಿರಿಯ ಪತ್ರಕರ್ತ ಜಯರಾಮ ಅಡಿಗ ಅವರನ್ನು ಗೌರವಿಸಲಾಯಿತು.

ಅಡಿಗ ಜನ್ಮ ಶತಮಾನೋತ್ಸವ ಪ್ರಯುಕ್ತ ಏರ್ಪಡಿಸಲಾದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಸ್ವಾಗತಿಸಿದರು. ರೇಷ್ಮಾ ಜಿ. ಭಟ್ ವಂದಿಸಿದರು. ಡಾ. ಯೋಗೀಶ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ನಡೆದ ವಿಚಾರಗೋಷ್ಠಿಗಳಲ್ಲಿ ಎಸ್.ಆರ್.ವಿಜಯಶಂಕರ್ ಅಡಿಗರ ಕಾವ್ಯದ ಕುರಿತು ಹಾಗೂ ಅಡಿಗರು ಮತ್ತು ಪ್ರಕೃತ ನಮ್ಮ ಸಾಹಿತ್ಯ ಧರ್ಮ ಕುರಿತು ಡಾ. ವರದರಾಜ ಚಂದ್ರಗಿರಿ ವಿಚಾರ ಮಂಡಿಸಿದರು.

ಬಳಿಕ ಯಕ್ಷಗಾನ ತಾಳಮದ್ದಳೆ ವಾಲಿಮೋಕ್ಷ ನಡೆಯಿತು. ಕಲಾವಿದರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಸೀತಾರಾಮ ತೋಳ್ಪಡಿತ್ತಾಯ, ಜನಾರ್ದನ ತೋಳ್ಪಡಿತ್ತಾಯ, ಡಾ.ಎಂ.ಪ್ರಭಾಕರ ಜೋಷಿ, ಕೆ.ಮೋಹನ ರಾವ್ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ ಭಾಗವಹಿಸಿದರು. ಸಮಿತಿಯ ಉಪಾಧ್ಯಕ್ಷ ವಿಶ್ವನಾಥ ಬಂಟ್ವಾಳ ಕಲಾವಿದರನ್ನು ಗೌರವಿಸಿದರು. ಈ ಸಂದರ್ಭ ಸಮಿತಿಯ ಕೋಶಾಧಿಕಾರಿ ಬಿ.ತಮ್ಮಯ್ಯ, ಕಾರ್ಯದರ್ಶಿ ಡಾ.ಅಜಕ್ಕಳ ಗಿರೀಶ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.

ಅಭಿರುಚಿ ಜೋಡುಮಾರ್ಗ, ನಮ್ಮ ಬಂಟ್ವಾಳ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮಕ್ಕೆ ಸಹಕರಿಸಿತ್ತು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.