ಬಂಟ್ವಾಳ

ಬಂಟ್ವಾಳ ಬಂಟರ ಸಂಘದಿಂದ 30 ಲಕ್ಷ ರೂ ವಿದ್ಯಾರ್ಥಿವೇತನ ವಿತರಣೆ

ವಿದ್ಯಾರ್ಥಿ ಜೀವನದಲ್ಲಿ ವಿದ್ಯೆಯನ್ನು ಕಲಿಯುವುದಷ್ಟೇ ಅಲ್ಲ, ಮಾನವತೆಯನ್ನು ಬೆಳೆಸಿಕೊಳ್ಳಿ, ದೇಶದ ಮಾರ್ಗದರ್ಶಕರಾಗಿ ಮುನ್ನಡೆಯಿರಿ ಎಂದು ನಿಟ್ಟೆ ವಿವಿ ಕುಲಪತಿ ಎನ್. ವಿನಯ್ ಹೆಗ್ಡೆ ಕರೆ ನೀಡಿದರು.

ಭಾನುವಾರ ಬಂಟವಾಳ ಬಂಟರ ಸಂಘ ಮತ್ತು ಮುಂಬೈ ಆಲ್ ಕಾರ್ಗೋ ಲಾಜಿಸ್ಟಿಕ್ ಆಶ್ರಯದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮದ ಅನ್ವಯ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಾದಕ ವ್ಯಸನಕ್ಕೆ ಬಲಿಯಾಗದಂತೆ ಪ್ರಬುದ್ದ ನಾಗರಿಕರಾಗಿ ಬೆಳೆಯುವುದು ಇಂದು ಅಗತ್ಯ. ಭವಿಷ್ಯದ ತಾಯಂದಿರಾಗಿರುವ ಇಂದಿನ ವಿದ್ಯಾರ್ಥಿನಿಯರು, ಇತರರಲ್ಲೂ ಒಳ್ಳೆಯತನವನ್ನು ಕಾಣುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಬಂಟರ ಸಂಘ ಬಂಟವಾಳದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಮಾತನಾಡಿ ಮುಂದಿನ ಹಂತದಲ್ಲಿ ಬಂಟರ ಸಂಘವು ೧೦೦ ಮಕ್ಕಳ ಸಂಪೂರ್ಣ ಶೈಕ್ಷಣಿಕ ಹೊಣೆಯನ್ನು ಸ್ವೀಕರಿಸುವ ಉದ್ದೇಶ ಹೊಂದಿದೆ. ಸಮಾಜದಲ್ಲಿ ಮಕ್ಕಳ ಶೈಕ್ಷಣಿಕ ಉದ್ದೇಶಕ್ಕೆ ನೀಡುವ ಸಹಾಯವೇ ಅತ್ಯಂತ ಶ್ರೇಷ್ಟವಾದ ಸಹಕಾರ ಎಂದರು.
ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ ಅರ್ಹ ವಿದ್ಯಾರ್ಥಿಗಳಿಗೆ ಇನ್ನಷ್ಟು ಶಿಕ್ಷಣ ಪಡೆಯಲು ಸಹಕಾರಿಯಾಗಲಿ ಎಂದು ಪ್ರೋತ್ಸಾಹಿಸುವುದು ವಿದ್ಯಾರ್ಥಿವೇತನ ನೀಡುವ ಹಿಂದಿರುವ ಉದ್ದೇಶ. ಎಲ್ಲಾ ಧರ್ಮಿಯ ವಿದ್ಯಾರ್ಥಿಗಳನ್ನು ಸೇರಿಸಿ ವಿದ್ಯಾರ್ಥಿ ವೇತನ ನೀಡುತ್ತಿರುವುದು ನಿಜವಾದ ಜಾತ್ಯಾತೀತತೆ. ಬಂಟವಾಳದ ಬಂಟರ ಸಂಘದ ಕಟ್ಟಡವನ್ನು ಕನಿಷ್ಟ ಅವಧಿಯಲ್ಲಿ ನಿರ್ಮಾಣ ಮಾಡಿರುವುದು ವಿವೇಕ್ ಶೆಟ್ಟಿ ಮತ್ತು ಬಳಗದ ಸಾಧನೆಯಾಗಿದೆ. ಇತರೆಲ್ಲಾ ಬಂಟ ಸಂಘಗಳಿಗೆ ಇದೊಂದೇ ಮಾದರಿ ಆಗುವುದು ಎಂದರು.

ಮುಂಬೈ ಆಲ್‌ಕಾರ್ಗೊ ನಿರ್ದೇಶಕ ನಿವೃತ್ತ ಪೊಲೀಸ್ ಕಮಿಷನರ್ ಕೆ. ಎಲ್.ಪ್ರಸಾದ್ ಮಾತನಾಡಿ ಸ್ತೀ ಶಿಕ್ಷಣ ಕಡ್ಡಾಯವಾಗಬೇಕು. ಮಹಿಳೆಯೊಬ್ಬಳು ಶಿಕ್ಷಣ ಪಡೆದಾಗ ಇಡೀಯ ಕುಟುಂಬ ಶೈಕ್ಷಣಿಕ ಅರ್ಹತೆ ಪಡೆಯುತ್ತದೆ. ಹೆತ್ತವರನ್ನು ದೇವರೆಂದು ಹೇಳುವ ನಮ್ಮ ಧರ್ಮದ ತಿರುಳು ಸರ್ವಶ್ರೇಷ್ಟವಾಗಿದೆ. ವೃದ್ದರನ್ನು ಪ್ರೀತಿಸಿ ಗೌರವಿಸಿ, ಅವರ ಅನುಭವ ದೊಡ್ಡದು. ವಿದ್ಯಾರ್ಥಿಗಳು ಮಾದಕ ದ್ರವ್ಯದ ವ್ಯಸನಕ್ಕೆ ಬಲಿಯಾಗದೆ ಸುಂದರ ಸಮಾಜ ಕಟ್ಟಿಕೊಳ್ಳಿ ಎಂದು ಹಾರೈಸಿದರು.
ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಜೊತೆ ಕಾರ್ಯದರ್ಶಿ ನವೀನ್‌ಚಂದ್ರ ಶೆಟ್ಟಿ ಮುಂಡಾಜೆಗುತ್ತು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ವಿದ್ಯಾರ್ಥಿವೇತನ ಪಡೆದವರ ಹೆಸರನ್ನು ವಾಚಿಸಿದರು. ವೇದಿಕೆಯಲ್ಲಿ ಸಾಂಕೇತಿಕವಾಗಿ ಇಪ್ಪತ್ತು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಎಲ್ಲ ಧರ್ಮ, ಸಮಾಜಗಳ ಆಯ್ದ ಒಟ್ಟು 1200 ವಿದ್ಯಾರ್ಥಿಗಳಿಗೆ 30 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನ ಹಂಚಲಾಯಿತು.
ಸಮಾರಂಭದಲ್ಲಿ ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಪ್ರಮುಖರಾದ ಐತಪ್ಪ ಆಳ್ವ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯೆ ಆಶಾಪ್ರಸಾದ್ ರೈ ಕಾರ್ಯಕ್ರಮ ನಿರ್ವಹಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ